ಆಸನದ ಮೇಲೆ ತಮ್ಮ ಹೆಸರು ಹಾಕಿಲ್ಲವೆಂದು ಡಾ.ಕೋರೆ ಮುನಿಸಿಕೊಂಡು ವೇದಿಕೆ ಮೇಲೆ ಬಾರದೇ ಕೆಳಗೆ ಆಸೀನರಾಗಿದ್ದರು. ತಾವು ರಾಜ್ಯಸಭಾ ಸದಸ್ಯರಾಗಿದ್ದರೂ ಉದ್ದೇಶಪೂರ್ವಕವಾಗಿ ನನ್ನ ಹೆಸರು ಹಾಕದೇ ಅವಮಾನ ಮಾಡಲಾಗಿದೆ ಎಂದು ಕೋರೆ ಆಕ್ಷೇಪಿಸಿದರು. ಇದನ್ನು ನೋಡಿ ವೇದಿಕೆಯಿಂದ ಕೆಳಗೆ ಬಂದ ಸಂಸದ ಅಂಗಡಿ “ಎರಡು ತಿಂಗಳ ಹಿಂದೆಯೇ ನಿಮಗೆ ಆಮಂತ್ರಣ
ನೀಡಿದ್ದೇವೆ. ನೀವು ಹಿರಿಯರು. ಹೀಗೇಕೆ ಮಾಡುತ್ತಿದ್ದೀರಿ. ನಿಮಗೆ ಕಾಮನ್ ಸೆನ್ಸ್ ಇಲ್ಲವಾ’ ಎಂದು ಹರಿಹಾಯ್ದರು. ಅದಕ್ಕೆ “ಏನೋ
ದಾದಾಗಿರಿ ಮಾಡುತ್ತೀಯಾ’ ಎಂದು ಪ್ರಭಾಕರ ಕೋರೆ ಮಾರುತ್ತರ ನೀಡಿದರು.
Advertisement
“ಇದು ನಿನ್ನ ಕಾರ್ಯಕ್ರಮ ಅಲ್ಲ.ರೈಲ್ವೆ ಇಲಾಖೆ ಕಾರ್ಯಕ್ರಮ. ನೀ ಸುಮ್ಮನಿರು. ನಾನು ಯಾವತ್ತೂ ಹೆಸರಿಗಾಗಿ ಜಗಳ ಮಾಡಿದವನಲ್ಲ. ಆದರೆ ಇಲ್ಲಿ ಜಗಳ ಮಾಡಬೇಕಾಗಿದೆ’ ಎಂದು ಕೋರೆ ದನಿ ಏರಿಸಿದರು. ಇದಕ್ಕೆ ಆವೇಶದಿಂದಲೇ ಮಾತನಾಡಿದಸುರೇಶ ಅಂಗಡಿ “ನಾ ಕರಿತೀದಿನಿ, ಬರಿ¤ರೋ ಇಲ್ಲವೋ’ ಎಂದು ಏರು ದನಿಯಲ್ಲೇ ಕೇಳಿದರು. ಸುಮಾರು 10 ನಿಮಿಷಗಳ ಕಾಲ ನಡೆದ ಈ ವಾಗ್ವಾದಕ್ಕೆ ಸಚಿವ ಸತೀಶ ಜಾರಕಿಹೊಳಿ ಮೌನ ವೀಕ್ಷಕರಾಗಿದ್ದರು. “ಎಲ್ಲವನ್ನೂ ನೀನೇ ಜವಾಬ್ದಾರಿ ತೆಗೆದುಕೊಂಡು ಮಾಡುತ್ತಿದ್ದೀಯಾ. ಜಿಲ್ಲೆಯಲ್ಲಿ ಮೂವರು ಸಂಸದರಿದ್ದೇವೆ. ಯಾರೊಬ್ಬರ ಹೆಸರೂ ಇಲ್ಲ. ಎಲ್ಲದರಲ್ಲಿ ನಿಮ್ಮದೇ ಇದೆ. ನೀವೇ ಕಾರ್ಯಕ್ರಮ ಮಾಡಿಕೊಳ್ಳಿ’ ಎಂದು ಕೋರೆ ಹರಿಹಾಯ್ದರು. ನಂತರ ಸುರೇಶ ಅಂಗಡಿ ಬಲವಂತವಾಗಿ ಕೋರೆ ಅವರ ಕೈಹಿಡಿದು ವೇದಿಕೆಯತ್ತ ಕರೆದುಕೊಂಡು ಹೋಗಿ ಜಗಳಕ್ಕೆ ತೆರೆ ಎಳೆದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಕರ ಕೋರೆ “ಈ ರೈಲು ಮೇಲ್ಸೇತುವೆಗೆ ಮುಂದೆ ಸುರೇಶ ಅಂಗಡಿ ಸ್ಮರಣಾರ್ಥ ಎಂದು ಹೆಸರಿಡಿ’ ಎಂದು ಛೇಡಿಸಿದರು.