ಕೊರಟಗೆರೆ: ದಿನಸಿ ಸಾಮಾನಿನ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿ ತನ್ನ ಹೆಂಡತಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಆಕೆಯ ಸಾವಿಗೆ ಕಾರಣನಾದ ಗಂಡನಿಗೆ ಮಧುಗಿರಿಯ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಾದವ ಕರಕೇರ ಅವರು ಜೀವಾವಧಿ ಶಿಕ್ಷೆಯ ಜತೆ 1 ಲಕ್ಷ ರೂ. ದಂಡ ವಿಧಿಸಿ ಜೂ.19 ರ ಸೋಮವಾರ ತೀರ್ಪು ನೀಡಿದ್ದಾರೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಪಂಯ ಸೋಂಪುರ ಗ್ರಾಮದ ಜಿಯಾವುಲ್ಲಾ(42)ನಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದವನು. ಮಧುಗಿರಿ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆಯ ಜತೆ 1ಲಕ್ಷ ದಂಡ ವಿಧಿಸಲಾಗಿದೆ. ಸರಕಾರಿ ಅಭಿಯೋಜಕ ನಿರಂಜನಮೂರ್ತಿ.ಬಿ.ಎ. ವಾದ ಮಂಡಿಸಿದ್ದಾರೆ.
ದಿನಸಿ ಸಾಮಾನಿನ ವಿಚಾರಕ್ಕೆ ಜಗಳ
ಸೋಂಪುರದ ಜಿಯಾವುಲ್ಲಾ ಮತ್ತು ತಸ್ಲೀಮಾ ಬಾನು ನಡುವೆ ದಿನಸಿ ಸಾಮಾನಿನ ವಿಚಾರಕ್ಕೆ 2019ರ ಮೇ.14 ರಂದು ಜಗಳವಾಗಿ ಬಾಟಳಿಯಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಸುಟ್ಟ ಗಾಯಗಳಾಗಿದ್ದ ತಸ್ಲೀಮಾ ಬಾನು ಅವರನ್ನು ಹೊಳವನಹಳ್ಳಿ, ಕೊರಟಗೆರೆ ಮತ್ತು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2019, ಮೇ.20ರಂದು ಚಿಕಿತ್ಸೆ ಫಲಕಾರಿ ಆಗದೇ ತಸ್ಲೀಮಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
2019ರ ಮೇ.14 ರಂದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದಿನ ಸಿಪಿಐ ಎಫ್.ಕೆ.ನದಾಫ್ ಐಪಿಸಿ ದಂಡ ಸಂಹಿತೆ 302 ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕೆ ದೋಷಾರೋಷಣಾ ಪಟ್ಟಿ ಸಲ್ಲಿಸಿದ್ದರು. ಮೃತಳು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದ್ದಾಗ ಯಲಹಂಕ ತಹಶೀಲ್ದಾರ್ ಮುಂದೆ ನೀಡಿದ ಮರಣ ಪೂರ್ವ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿ ಜಿಯಾವುಲ್ಲಾ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದೆ. ಜಿಯಾವುಲ್ಲಾ ದಂಡದ ಹಣದಲ್ಲಿ ತನ್ನ ಮೂವರು ಮಕ್ಕಳಿಗೆ ತಲಾ 25 ಸಾವಿರ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.