Advertisement

ಕೊರಟಗೆರೆ : ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವು

04:51 PM Oct 06, 2022 | Team Udayavani |

ಕೊರಟಗೆರೆ : ತಾಲೂಕಿನಲ್ಲಿ ನಡೆದ ಪ್ರತ್ಯೇಕ ಅವಘಡದಲ್ಲಿ ಮೂವರು ಸಾವನ್ನಪ್ಪಿರುವ ಅವಘಡಗಳು ನಡೆದಿದೆ.

Advertisement

ಆಯುಧ ಪೂಜಾ ಹಬ್ಬಕ್ಕೆ ಊರಿಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಯುವಕರಿಬ್ಬರನ್ನು ಜವರಾಯ ಬಸ್ಸಿನ ರೂಪದಲ್ಲಿ ಬಂದು ಬಲಿ ತೆಗೆದುಕೊಂಡ ದುರ್ಘಟನೆ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಂದೆ ದುರ್ಘಟನೆ ಜರುಗಿದ್ದು,ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದ ಸಂತೋಷ್ ( 23) ಹಾಗೂ ಇದೇ ತಾಲೂಕಿನ ಮಿಡಿಗೇಶಿ ಹೋಬಳಿಯ ಬಿದರಕೆರೆ ಬಳಿಯ ನಾರತನಹಳ್ಳಿ ಶಶಿಕುಮಾರ್ (23 ) ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ.

ಮೃತ ಯುವಕರು ಸಂಬಂಧಿಕರಾಗಿದ್ದು, ಅಕ್ಕನ ಮನೆಯಲ್ಲಿ ಊಟ ಮುಗಿಸಿಕೊಂಡು ಊರಿನ ಹಬ್ಬಕ್ಕೆ ದ್ವಿಚಕ್ರವಾಹನದಲ್ಲಿ ಬರುತ್ತಿರುವ ಸಂದರ್ಭದಲ್ಲಿ ಪಾವಗಡ ಕಡೆಯಿಂದ ಬರುತ್ತಿದ್ದಂತ ಸರಕಾರಿ ಬಸ್ ಹಾಗೂ ದ್ವಿಚಕ್ರವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಒಬ್ಬ ಕೊರಟಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮತ್ತೋರ್ವ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ವಿಚಾರ ತಿಳಿದ ತಕ್ಷಣ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಕೆಸುರೇಶ್ ಹಾಗೂ ಪಿಎಸ್ಐ ಮಹಾಲಕ್ಷ್ಮಮ್ಮ. ಹೆಚ್.ಎನ್ ಸ್ದಳಕ್ಕೆ ಧಾವಿಸಿ ಹೆಚ್ಚಿನ ತನಿಖೆ ಕೈ ಕೊಂಡಿದ್ದಾರೆ.

Advertisement

ವೈದ್ಯ, ತುರ್ತು ವಾಹನ ಸವಾರನ ದಿವ್ಯ ನಿರ್ಲಕ್ಷ

ಸರಕಾರಿ ವೈದ್ಯ ಮತ್ತು ತುರ್ತು ವಾಹನ ಸವಾರನ ದಿವ್ಯ ನಿರ್ಲಕ್ಷದಿಂದ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿ ನರಳುತ್ತಿದ್ದ ಯುವಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮತ್ತೋರ್ವ ತುಮಕೂರಿಗೆ ರವಾನಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಕೊರಟಗೆರೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಿವಿ ಮತ್ತು ಮೂಗು ತಜ್ಞ ವೈದ್ಯ ನವೀನ್.ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತಾಗಿ ತುರ್ತುಚಿಕಿತ್ಸೆ ನೀಡದೇ ನಿರ್ಲಕ್ಷ ಮತ್ತು ಅಪಘಾತ ಸ್ಥಳಕ್ಕೆ ತುರ್ತುವಾಹನ ತಡವಾಗಿ ಆಗಮಿಸಿದ ಪರಿಣಾಮ ಇಬ್ಬರು ಗಾಯಾಳುಗಳು ಸಹ ಮೃತ ಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಐ.ಕೆ.ಕಾಲೋನಿ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿ 1ಗಂಟೆಯಾದರೂ ತುರ್ತುವಾಹನ ಸ್ಥಳಕ್ಕೆ ಆಗಮಿಸದ ಪರಿಣಾಮ ಸ್ಥಳೀಯರು ಸರ್ಕಾರಿ ಬಸ್ ಮತ್ತು ಖಾಸಗಿ ಕಾರಿನಲ್ಲಿ ಇಬ್ಬರು ಗಾಯಾಳು ಯುವಕರನ್ನು ಕೊರಟಗೆರೆ ಆಸ್ಪತ್ರೆಗೆ ರವಾನಿಸಿದ್ದಾರೆ.

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಇಬ್ಬರು ಯುವಕರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಅರ್ಧಗಂಟೆಯಾದ್ರೂ ರಾತ್ರಿ ಪಾಳೀಯದ ಕಿವಿ-ಮೂಗು ತಜ್ಞವೈದ್ಯ ನವೀನ್.ಕೆ ಕೊಠಡಿಯಿಂದ ಹೊರಗಡೆ ಬರದಿರುವ ಪರಿಣಾಮ ಗಾಯಾಳು ಶಶಿಕುಮಾರ್ ಉಸಿರಾಟದ ತೊಂದರೆಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ.

ಸಂತೋಷ್ ಗೆ ತುರ್ತಾಗಿ ಪ್ರ‌ಥಮ‌ ಚಕಿತ್ಸೆ ನೀಡದೇ ವೈದ್ಯ ನವೀನ್ ಎಂಬಾತ ಹೆಚ್ಚಿನ ಚಿಕ್ಸಿತ್ಸೆಗೆ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ ಪರಿಣಾಮ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಮೃತರ ಸಂಬಂಧಿಕರು ವೈದ್ಯನ ವಿರುದ್ದ ಆರೋಪಿಸಿದ್ದಾರೆ.

ಪತ್ರಕರ್ತನ ಮೇಲೆ ವೈದ್ಯ ನವಿನ್ ನಿಂದ ಹಲ್ಲೆಗೆ ಯತ್ನ
ಅಪಘಾತದಲ್ಲಿ ಗಾಯಗೊಂಡ ಇಬ್ಬರು ಯುವಕರಿಗೆ ತುರ್ತು ಚಿಕಿತ್ಸೆ ಇಲ್ಲದೇ ಆಸ್ಪತ್ರೆಯ ಸಣ್ಣ ಕೊಠಡಿಯಲ್ಲಿ ನರಳಾಡುತ್ತಿದ್ದ ವೇಳೆ ಗಾಯಾಳುಗಳ ವಿಡೀಯೋ ಚಿತ್ರಿಕರಣ ಮಾಡುತ್ತೀದ್ದ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತ ಹರೀಶ್ ಎಂಬಾತನ ಮೇಲೆ ವೈದ್ಯ ನವೀನ್ ಹಲ್ಲೆ ನಡೆಸಿ ಮೊಬೈಲ್ ಕಸಿಯಲು ಪ್ರಯತ್ನಿಸಿರುವ ಘಟನೆಯು ನಡೆದಿದೆ.

ಚಿಕಿತ್ಸೆ ವೇಳೆ ಸಮವಸ್ತ್ರ ಧರಿಸದ ವೈದ್ಯ ನವೀನ್

ರಾತ್ರಿ ಪಾಳೀಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯ ನವೀನ್ ಕರ್ತವ್ಯನಿರತ ಕೊಠಡಿಯಲ್ಲಿ ಇರೋದೇ ಇಲ್ಲ. ಸಮವಸ್ತ್ರ ಧರಿಸುವುದೇ ಇವರಿಗೆ ಗೊತ್ತಿಲ್ಲ. ಇವರು ಕರ್ತವ್ಯದಲ್ಲಿ ಇರುವಾಗ ರೋಗಿಗಳು ಇವರನ್ನು ಪ್ರತಿನಿತ್ಯ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದೆ.

ಅಪಘಾತ ಸ್ಥಳಕ್ಕೆ ತುರ್ತಾಗಿ ಬರುವುದಿಲ್ಲ ತುರ್ತುವಾಹನ

ರಾಜ್ಯ ಹೆದ್ದಾರಿಗಳಲ್ಲಿ ಅಪಘಾತ ಆದ ನಂತರ ತುರ್ತುವಾಹನ ಸಮಯಕ್ಕೆ ಸರಿಯಾಗಿ ಬರೋದಿಲ್ಲ. ಅಪಘಾತ ಆದ ಗಂಟೆಯ ನಂತರ ದೂರವಾಣಿ ಕರೆ ಮಾಡುತ್ತಾರೆ. ರೋಗಿ ಇದಾರಾ ಅಥವಾ ಇಲ್ಲವೇ ಎಂಬ ಉಢಾಪೆ ಪ್ರಶ್ನೆ ಕೇಳುತ್ತಾರೆ ಎಂಬುದು ಸ್ಥಳೀಯರ ಆರೋಪವಾಗಿದ್ದು ತುರ್ತು ವಾಹನಕ್ಕೆ ಹುಡುಕುವ ಪರಿಸ್ಥಿತಿ ಕೊರಟಗೆರೆಯಲ್ಲಿ ನಿರ್ಮಾಣವಾಗಿದೆ.

ಪತ್ರಕರ್ತರ ವಿರುದ್ದ ದೂರು ನೀಡುವ ಬೆದರಿಕೆ ಹಾಕಿದ ವೈದ್ಯ
ರಾತ್ರಿ ಪಾಳೀಯದ ತಜ್ಞವೈದ್ಯ ನವೀನ್.ಕೆ ತುರ್ತು ಚಿಕಿತ್ಸೆ ನೀಡದಿರುವ ವಿಚಾರಕ್ಕೆ ಪತ್ರಕರ್ತರು ವಿಡೀಯೋ ಚಿತ್ರಿಕರಣ ಮಾಡುತ್ತಿದ್ದ ವೇಳೆಯೇ ನಿಮ್ಮ ವಿರುದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿ ತನ್ನ ತಪ್ಪನ್ನು ಮುಚ್ಚಿಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಟ್ರ್ಯಾಕ್ಟರ್ ಗೆ ಢಿಕ್ಕಿ: ಓಮಿನಿಯಲ್ಲಿದ್ದ ವ್ಯಕ್ತಿ ಸಾವು

ರಸ್ತೆಯಲ್ಲಿ ನಿಂತಿದ್ದ ಟ್ಯಾಕ್ಟರ್ ಗೆ ಓಮಿನಿ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವಿಗೀಡಾದ ದುರ್ಘಟನೆ ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಲೂಕಿನ ತಣ್ಣೇನಹಳ್ಳಿ ಬಳಿ ಈ ದುರ್ಘಟನೆ ಜರುಗಿದ್ದು, ಆಂಧ್ರ ಮೂಲದ ರಾಮಯ್ಯ (55 ) ಸಾವಿಗೀಡಾದ ದುರ್ದೈವಿ.

ಮೃತ ರಾಮಯ್ಯ ಅನಂತಪುರ ಜಿಲ್ಲೆ, ತುಮ್ಕುಂಟೆ ಗ್ರಾಮದ ವಾಸಿಯಾಗಿದ್ದು, ಓಮಿನಿ ಕಾರಿನಲ್ಲಿ ಊರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗಮನಿಸದೆ ಏಕಾಏಕಿ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ರಾಮಯ್ಯ ಸ್ಥಳದಲ್ಲಿಯೇ ಸಾವಿಗಿಡಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ ಸುರೇಶ್ ಹಾಗೂ ಪಿಎಸ್ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ‌ ನಡೆಸುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next