ಕೊರಟಗೆರೆ: 2022-2023 ನೇ ಸಾಲಿನ ವಿಶೇಷ ಚೇತನ ಮಕ್ಕಳ ಕ್ರೀಡೆ ಮತ್ತು ಕ್ಷೇತ್ರ ಬೇಟಿಗೆ ಹೊರಟಿರುವ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಪ್ರಭಾರಿ ಉಪಯೋಜನಾಧಿಕಾರಿ ಆನಂದಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟನೆ ಮಾಡಿದರು.
ಪ್ರಭಾರಿ ಉಪ ಯೋಜನಾಧಿಕಾರಿ ಆನಂದಪ್ಪ ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ತಾವು ಓದುವ ಶಾಲೆ ಬಿಟ್ಟರೆ ಹೊರಗಡೆ ಕ್ಷೇತ್ರದ ಪರಿಚಯವಿರುವುದಿಲ್ಲ. ಸರ್ಕಾರ ಈ ಮಕ್ಕಳ ಶೈಕ್ಷಣಿಕವಾಗಿ ಜ್ಞಾನ ಮತ್ತು ಕೌಶಲಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕ್ಷೇತ್ರ ಭೇಟಿ ಕಾರ್ಯಕ್ರಮ ಅಯೋಜನೆ ಮಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮವಾಗಿದೆ. ಎಲ್ಲಾ ಮಕ್ಕಳಿಗಿಂತ ನಾವುಗಳ ಕಡಿಮೆಯೇನಿಲ್ಲ ನಾವುಗಳು ಸಾಮಾನ್ಯರಂತೆ ಭಾಗವಹಿಸಬಲ್ಲವು ಎಂಬ ಆತ್ಮವಿಶ್ವಾಸ ವಿಶೇಷ ಚೇತನ ಮಕ್ಕಳಲ್ಲಿದೆ. ಈ ಮಕ್ಕಳು ಸಾಮಾಜಿಕವಾಗಿ, ಐತಿಹಾಸಿಕವಾಗಿ ಮತ್ತು ಶೈಕ್ಷಣಿಕವಾಗಿ ಹೊರಗಿನ ಬಾಹ್ಯ ಪರಿಸರ ವೀಕ್ಷಣೆ ಮಾಡಬಹುದು. ವಿಶೇಷ ಚೇತನ ಮಕ್ಕಳಲ್ಲಿ ಮನಸ್ಸು ಉಲ್ಲಾಸಗೊಳ್ಳುವುದರ ಜೊತೆಗೆ ನವ ಚೈತನ್ಯ ಮೂಡುತ್ತದೆ. ಸರ್ಕಾರದ ಈ ಕಾರ್ಯಕ್ರಮ ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮ ಮತ್ತು ಮಕ್ಕಳಲ್ಲಿ ಆತ್ಮ ಸ್ಥೈರ್ಯ ಮೂಡುತ್ತದೆ ಎಂದರು.
ಬಿಐಇಆರ್ ಟಿ ಶಿಕ್ಷಕರಾದ ಗೋವಿಂದಪ್ಪ ಮಾತನಾಡಿ ವಿಶೇಷ ಚೇತನ ಮಕ್ಕಳ ಕ್ಷೇತ್ರ ಭೇಟಿಗಾಗಿ ಸರ್ಕಾರದಿಂದ 20ಸಾವಿರ ರೂ ಹಣ ಬಿಡುಗಡೆಯಾಗಿರುತ್ತದೆ. ತಾಲ್ಲೂಕಿನ 1ನೇ -10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಒಟ್ಟು 234 ಮಕ್ಕಳ ಪೈಕಿ ಅಯ್ದ 50 ಸಶಕ್ತವಾಗಿರುವ ವಿಶೇಷ ಚೇತನ ಮಕ್ಕಳು ಮತ್ತು ಅವರ ಪೋಷಕರನ್ನು ಕ್ಷೇತ್ರ ಭೇಟಿಗಾಗಿ ವಿವಿಧ ಶೈಕ್ಷಣಿಕ ಮತ್ತು ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಸರ್ಕಾರಿ ಬಸ್ ನಲ್ಲಿ ಕರೆದೊಯ್ಯುತ್ತಿದ್ದೇವೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿಶೇಷ ಚೇತನ ಮಗು ಧನುಶ್ರೀಮಾತನಾಡಿ ಕ್ಷೇತ್ರ ಭೇಟಿ ಮಾಡಿದರೆ ನೈಜ ಅನುಭವ ದೊರೆಯುತ್ತದೆ. ಜನಕ ಕಲಿಕೆಯು ಸರಳ, ಸುಲಭ ಮತ್ತು ಶಾಶ್ವತವಾಗಿ ನಮ್ಮಮನಸ್ಸಿನಲ್ಲಿ ಉಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಶೇಷ ಚೇತನ ಶಿಕ್ಷಕರಾದ ಶಿವಲಿಂಗಪ್ಪ ಎಲ್ ,ನಿಯೋಜಿತ ಶಿಕ್ಣಕ ವೆಂಕಟೇಶಪ್ಪ ವಿಶೇಷ ಮಕ್ಕಳು ಮತ್ತು ಪೋಷಕರು ಇದ್ದರು.