Advertisement

ಅಡಿಪಾಯವೇ ತೆಗೆಯದೆ ಶಾಲಾ ಕಟ್ಟಡ ನಿರ್ಮಾಣ: ಗುತ್ತಿಗೆದಾರನ ಎಡವಟ್ಟಿಗೆ ಗ್ರಾಮಸ್ಥರ ಆಕ್ರೋಶ

08:07 PM Apr 02, 2023 | Team Udayavani |

ಕೊರಟಗೆರೆ: ಚುನಾವಣೆ ಸಮಯ ಸರಕಾರಿ ಅಧಿಕಾರಿ ವರ್ಗ ಕಾಮಗಾರಿಯ ಸ್ಥಳಕ್ಕೆ ಬರೋದೇ ಅಪರೂಪ.. ಚುನಾವಣೆಯ ಸಮಯವೇ ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರನಿಗೆ ಬೃಹತ್ ಬಂಡವಾಳ.. 18 ಸರಕಾರಿ ಶಾಲೆಗಳ ಅಭಿವೃದ್ದಿಗೆ ವಿವೇಕ ಯೋಜನೆಯಡಿ 250 ಲಕ್ಷ ಅನುಧಾನ ಮಂಜೂರು.. ಅಡಿಪಾಯವೇ ತೆಗೆಯದೇ ಕಟ್ಟಡ ಕಟ್ಟುತ್ತೀರುವ ಗುತ್ತಿಗೆದಾರನ ಸಹಚರನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಬುಕ್ಕಾಪಟ್ಟಣದಲ್ಲಿ ನಡೆದಿದೆ.

Advertisement

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ, ಕೋಳಾಲ, ಕಸಬಾ ಮತ್ತು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ 18 ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯಿಂದ ವಿವೇಕ ಯೋಜನೆಯಡಿ ಸುಮಾರು 250 ಲಕ್ಷ ಅನುಧಾನ ಮಂಜೂರಾಗಿದೆ.

ಕಟ್ಟಡಗಳ ಕಾಮಗಾರಿ ಪರಿಶೀಲನೆ ನಡೆಸಬೇಕಾದ ಶಿಕ್ಷಣ ಇಲಾಖೆ ಬಿಇಓ ನಟರಾಜ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಚುನಾವಣೆ ಪ್ರಕ್ರಿಯೆಯ ಕಾರ್ಯ ಒತ್ತಡದಲ್ಲಿ ನಿರತ ಆಗಿರುವುದೇ ಗುತ್ತಿಗೆದಾರನಿಗೆ ವರದಾನವಾಗಿದೆ.

ಸರಕಾರಿ ಶಾಲೆಗಳ ಕಾಮಗಾರಿಯ ಗುಣಮಟ್ಟ ಮತ್ತು ಉಸ್ತುವಾರಿ ವಹಿಸಬೇಕಾದ ಜಿಪಂ ಎಇಇ ರವಿಕುಮಾರ್ ಸಹ ಚುನಾವಣೆಯ ಕಾರ್ಯ ಒತ್ತಡದಲ್ಲಿ ಬ್ಯುಸಿಯಾಗಿದ್ದು ಉಳಿದ ಜಿ.ಪಂ ಸಹಾಯಕ ಎಇಗಳ ಹುದ್ದೆಗಳು ಖಾಲಿಯಾಗಿವೆ. ಶಿಕ್ಷಣ ಇಲಾಖೆ ಮತ್ತು ಜಿಪಂ ಅಧಿಕಾರಿವರ್ಗ ಕಾಮಗಾರಿ ಮುಗಿದ ಮೇಲಷ್ಟೇ ಬರ್ತಾರೇ. ಇನ್ನೂ ಅಧಿಕೃತ ಗುತ್ತಿಗೆದಾರ ಶಾಲೆಯ ಮುಖವನ್ನೇ ಸಹ ನೋಡಿಲ್ಲ. ಶಿಕ್ಷಣ ಇಲಾಖೆ, ಜಿಪಂ ಮತ್ತು ಜಿಲ್ಲಾಧಿಕಾರಿ ತಕ್ಷಣ ಸರಕಾರಿ ಶಾಲೆಗಳ ಕಟ್ಟಡದ ಕಾಮಗಾರಿಗಳನ್ನು ಸ್ಥಗಿತ ಮಾಡಿ ಉನ್ನತಮಟ್ಟದ ತನಿಖೆ ನಡೆಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

18 ಶಾಲೆಗಳಿಗೆ 250.20 ಲಕ್ಷ ಮಂಜೂರು..
ಶಿಕ್ಷಣ ಇಲಾಖೆಯ ವಿವೇಕ ಯೋಜನೆಯಡಿ 18 ಸರಕಾರಿ ಶಾಲೆಗಳ ಕೊಠಡಿ ನಿರ್ಮಾಣಕ್ಕೆ 250.20 ಲಕ್ಷ ಅನುಧಾನ ಮಂಜೂರಾಗಿದೆ. ಗೊಂದಿಹಳ್ಳಿ, ಮಾದೇನಹಳ್ಳಿ, ಗಿಡಚಿಕ್ಕನಹಳ್ಳಿ, ಎಂ.ವೆಂಕಟಾಪುರ, ಪಟ್ಟದೇವರಪಾಳ್ಯ, ಬಿ.ಡಿ.ಪುರದ ಶಾಲೆಯ ಕಟ್ಟಡಗಳ ಕಾಮಗಾರಿಯ ಟೆಂಡರ್ ಕೊರಟಗೆರೆ ಮೂಲದ 6 ಜನ ಗುತ್ತಿಗೆದಾರರು ಪಡೆದಿದ್ದು ಕೆಲಸವು ಪ್ರಾರಂಭವಾಗಿದೆ. ಶಿಕ್ಷಣ ಇಲಾಖೆ ಮತ್ತು ಜಿಪಂ ಅಧಿಕಾರಿವರ್ಗ ತುರ್ತಾಗಿ ಅಡಿಪಾಯದ ಪರಿಶೀಲನೆ ಮತ್ತು ಗುಣಮಟ್ಟದ ತನಿಖೆ ನಡೆಸಬೇಕಿದೆ.

Advertisement

12 ಕಾಮಗಾರಿಗೆ ಮೈಸೂರಿನ ಗುತ್ತಿಗೆದಾರ..
ಕೊರಟಗೆರೆಯ ಬೈಚಾಪುರ, ಚಿಕ್ಕನಹಳ್ಳಿ, ಬೈರೇನಹಳ್ಳಿ, ಕಾಶಾಪುರ, ಕಾಟೇನಹಳ್ಳಿ, ತಿಮ್ಮಸಂದ್ರ, ಬುಕ್ಕಾಪಟ್ಟಣ, ಕುರಂಕೋಟೆ, ಕುರಿಹಳ್ಳಿ, ಬೋಡಬಂಡೇನಹಳ್ಳಿ, ಲಿಂಗಾಪುರ, ಬೈಚೇನಹಳ್ಳಿ ಸೇರಿದಂತೆ 12 ಸರಕಾರಿ ಶಾಲೆಗಳ 166 ಲಕ್ಷದ ಟೆಂಡರ್ ಮೈಸೂರು ಮೂಲದ ಶಿವಕುಮಾರ್ ಎಂಬಾತ ಪಡೆದಿದ್ದಾನೆ. ಗುತ್ತಿಗೆದಾರ ಶಿವಕುಮಾರ್ ಸ್ಥಳದಲ್ಲಿ ಇಲ್ಲದೇ ತನ್ನ ತಮ್ಮ, ಅನುಯಾಯಿ ಮತ್ತು ಸ್ನೇಹಿತನಿಗೆ ಕಾಮಗಾರಿಯ ಉಸ್ತುವಾರಿ ವಹಿಸಿದ್ದಾನೆ. ಸಿಮೆಂಟ್, ಜಲ್ಲಿ, ಕಲ್ಲು ಮತ್ತು ಕಾಮಗಾರಿಯಲ್ಲಿ ಹಣ ಉಳಿಸುವ ಉದ್ದೇಶದಿಂದ ಕಳಫೆ ಕೆಲಸಕ್ಕೆ ಮುಂದಾಗಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿ ಕಾಮಗಾರಿ ಸ್ಥಗಿತವಾಗಿದೆ.

ಕಾಮಗಾರಿಯ ನಾಮಫಲಕ ಮತ್ತು ಸರಕಾರಿ ಅಧಿಕಾರಿಯೇ ಇಲ್ಲದೇ ಕಾಮಗಾರಿ ಉದ್ಘಾಟನೆ ಆಗಿದೆ. ಸರಕಾರಿ ಶಾಲೆಯ ಕಟ್ಟಡಕ್ಕೆ ಅಡಿಪಾಯವೇ ಹಾಕದೇ ಕಳಪೆಯಿಂದ ಕಾಮಗಾರಿ ನಡೆಯುತ್ತಿದೆ. ಕಳಪೆ ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ರೇ ಗುತ್ತಿಗೆದಾರ ವಿಡೀಯೋ ಮಾಡಿ ಬೆದರಿಕೆ ಹಾಕ್ತಾರೇ. ಸರಕಾರ ತಕ್ಷಣ ಮೈಸೂರಿನ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ತನಿಖೆ ನಡೆಸಬೇಕಿದೆ.
– ಕಿರಣ್‌ಕುಮಾರ್. ಸ್ಥಳೀಯ ವಾಸಿ. ಕೊರಟಗೆರೆ

ವಿವೇಕ ಯೋಜನೆಯಡಿ 18 ಶಾಲೆಗಳಿಗೆ 250 ಲಕ್ಷ ಅನುಧಾನ ಮಂಜೂರಾಗಿದೆ. ಗಾರೇ ಕೆಲಸದ ಕಾರ್ಮಿಕನಿಗೆ ಅರಿವಿಲ್ಲದೇ ಅಡಿಪಾಯ ಹಾಕದೇ ತಪ್ಪಾಗಿದೆ. ಬುಕ್ಕಾಪಟ್ಟಣ ಶಾಲೆಯ ಕಟ್ಟಡದ ಅಡಿಪಾಯ ಮತ್ತೋಮ್ಮೆ ಹಾಕಲು ಸೂಚಿಸಲಾಗಿದೆ. ಚುನಾವಣೆ ಕೆಲಸದ ಜೊತೆಯಲ್ಲಿ ತ್ವರಿತವಾಗಿ 18 ಶಾಲೆಗಳ ಕಾಮಗಾರಿಗಳ ಗುಣಮಟ್ಟದ ಪರಿಶೀಲನೆ ನಡೆಸುತ್ತೇನೆ.
– ರವಿಕುಮಾರ್. ಎಇಇ. ಜಿಪಂ. ಕೊರಟಗೆರೆ

ಇದನ್ನೂ ಓದಿ: ಮಂಗಳೂರು ಕೆಪಿಟಿ ಜಂಕ್ಷನ್: ಟ್ರಾಫಿಕ್ ಸಿಗ್ನಲ್ ಲೈಟ್ ಮತ್ತೆ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next