ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಂಡೋಣಿ ಗ್ರಾಮದ ಸಿದ್ದರಾಜು ಬಿ ಎನ್ ಬಿನ್ ನರಸಿಂಹಯ್ಯ (45) ಎಂಬ ರೈತ ಸಾಲಬಾದೆ ತಾಳಲಾರದೆ ನೇಣಿಗೆ ಶರಣಾಗಿರುವ ಘಟನೆ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಡೋಣಿ ಗ್ರಾಮದ ತನ್ನ ಜಮೀನಿನಲ್ಲಿರುವ ಮರಕ್ಕೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊರಟಗೆರೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ಜಮೀನಿನ ಅಭಿವೃದ್ಧಿಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಸಾಲವನ್ನು ಪಡೆದಿದ್ದರು ಮತ್ತು ವಿಎಸ್ಎಸ್ಎನ್ ಬೆಂಡೋಣಿ ಶಾಖೆಯಲ್ಲಿ 1 ಲಕ್ಷ ಸಾಲ ಪಡೆದಿದ್ದರು ನಂತರ ಖಾಸಗಿ ಫೈನಾನ್ಸ್ ಸಂಸ್ಥೆಯಾದ ಸಮಸ್ತ ಫೈನಾನ್ಸ್ ನಲ್ಲಿ 70,000 ರೂ. ಗಳನ್ನೂ ಹೈನುಗಾರಿಕೆಗಾಗಿ ಸಾಲ ಪಡೆದಿದ್ದರು ಮತ್ತು ತನ್ನ ಮಗನ ಆರೋಗ್ಯದ ಕಾರಣದಿಂದ ಸ್ಥಳೀಯ ಸಾರ್ವಜನಿಕರೊಂದಿಗೆ ಕೈಸಾಲವನ್ನು ಸಹ ಮಾಡಿಕೊಂಡಿದ್ದರು ಸಾಲವನ್ನು ತೀರಿಸಲಾಗದೆ ಪ್ರತಿನಿತ್ಯ ಪರದಾಡುತ್ತಿದ್ದ ವ್ಯಕ್ತಿಗೆ ಕೆನರಾ ಬ್ಯಾಂಕ್ ಸಾಲವನ್ನು ತೀರಿಸುವಂತೆ ನೋಟಿಸನ್ನು ನೀಡಲಾಗಿತ್ತು ಹೀಗಾಗಿ ಸಾಲವನ್ನು ತೀರಿಸಲಾಗದೆ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ಪಿಎಸ್ಐ ಚಂದ್ರಕಲಾ , ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರ ಮತ್ತು ಅಕ್ಕ ಪಕ್ಕದ ಜಮೀನಿನ ಮಾಲೀಕರ ಸ್ಥಳಮಹಜರ್ ನಡೆಸಿ ಪ್ರಕರಣ ದಾಖಲಿಸಿಕೊಂಡು ಕೊರಟಗೆರೆಯ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಸಾಗಿಸಲಾಗಿದೆ.
ಇದನ್ನೂ ಓದಿ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿರುದ್ಧ ಆಕ್ರೋಶ ಹೊರ ಹಾಕಿದ ಶಾಸಕಿ ಅನಿತಾ ಕುಮಾರಸ್ವಾಮಿ