Advertisement

Koratagere; 201 ಕೆರೆಗಳ ಮೇಲೆ ಭೂ ಮಾಫಿಯಾ ಕಣ್ಣು!!

04:41 PM May 13, 2024 | Team Udayavani |

ಕೊರಟಗೆರೆ: ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳೇ ಇನ್ನೂ ಗಗನ ಕುಸುಮ.ಎತ್ತಿನಹೊಳೆ ಮತ್ತು ಹೇಮಾವತಿ ಯೋಜನೆಯ ಕಾಮಗಾರಿಗಳೇ ಮುಗಿಯಲು ಇನ್ನೂ ವರ್ಷಗಳೇ ಬೇಕಾಗಬಹುದು. 206 ಕೆರೆಗಳಿಗೆ ಪುನಶ್ಚೇತನ ಮತ್ತು ಅಭಿವೃದ್ದಿ ಇಲ್ಲದೇ ಸಾವಿರಾರು ಎಕರೆ ಕೆರೆಗಳ ಜಮೀನು ಭೂ ಮಾಫಿಯಾಗೆ ಬಲಿಯಾಗಿ ಕೆರೆಗಳಿಗೆ ಭದ್ರತೆಯೂ ಇಲ್ಲದೆ, ನುಂಗುಬಾಕರಿಗೆ ಸರಕಾರದ ಭಯವೂ ಇಲ್ಲವಾಗಿದೆ.

Advertisement

ಕೊರಟಗೆರೆ ತಾಲೂಕಿನ ಸಣ್ಣನೀರಾವರಿಯ ಇಲಾಖೆ, ಕಂದಾಯ ಇಲಾಖೆ ಮತ್ತು 25ಗ್ರಾಪಂ ಸೇರಿ ಒಟ್ಟು 208 ಕೆರೆಗಳಿವೆ. ತೀತಾ ಜಲಾಶಯ, ಮಾವತ್ತೂರು ಕೆರೆ ಮತ್ತು ಜೆಟ್ಟಿಅಗ್ರಹಾರ ಕೆರೆಗಳು ಬಿಟ್ಟರೇ ಉಳಿದ 203 ಕೆರೆಗಳಲ್ಲಿ ನೀರಿಲ್ಲದೇ ಸಂಪೂರ್ಣ ಖಾಲಿಯಾಗಿ ಅಂತರ್ಜಲ ಮಟ್ಟವು ಪಾತಾಳಕ್ಕೆ ಕುಸಿದು ರೈತಾಪಿವರ್ಗ ತಮ್ಮ ಅಡಿಕೆ ಮತ್ತು ತೆಂಗು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಘಟನೆ ನಡೆದಿದೆ.

ಪುರಾತನ ಕಾಲದಲ್ಲಿ ನಮ್ಮ ಹಿರಿಯರು ಕಟ್ಟಿರುವ ಕೆರೆಕಟ್ಟೆಗಳ ಏರಿ, ತೂಬು ಸಂಪೂರ್ಣ ಶಿಥಿಲವಾಗಿ ಬಿರುಕುಬಿಟ್ಟಿವೆ. ಕೆರೆಗಳ ತುಂಬೆಲ್ಲ ಜಾಲಿಗಿಡ ಮತ್ತು ಬೇಲಿಗಳು ಬೆಳೆದು ಕೆರೆಯೇ ಮಾಯವಾಗಿವೆ. ಕೆರೆಗಳ ಎಡ ಬಲ ನಾಲೆಗಳು ಒತ್ತುವರಿಯಾಗಿ ಕಾಲುವೆಗಳೇ ಕಾಣೆಯಾಗಿವೆ. ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ದಿ ಮಾಡಬೇಕಾದ ಸರಕಾರಿ ಇಲಾಖೆಗಳ ಅಧಿಕಾರಿವರ್ಗ ಮಳೆಬಂದಾಗ ತುರ್ತು ಪರಿಹಾರ ಕೆಲಸಗಳಿಗೆ ಮಾತ್ರ ಬರುತ್ತಾರೆ ಆ ಬಳಿಕ ವರ್ಷಪೂರ್ತಿ ಕಾಣೆಯಾಗುತ್ತಾರೆ.

ಅನುದಾನವೇ ಇಲ್ಲ
ಸಣ್ಣ ನೀರಾವರಿ ಇಲಾಖೆಯ 45 ಕೆರೆಗಳು 2300ಹೆಕ್ಟೇರ್ ವಿಸ್ತೀರ್ಣ ಹೊಂದಿದೆ ಮತ್ತು ಕಂದಾಯ ಇಲಾಖೆಯ 79 ಕೆರೆಗಳ 1250ಹೇಕ್ಟರ್ ಭೂ ವಿಸ್ತೀರ್ಣವಿದೆ. ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆಯ 124ಕೆರೆಗಳ ಅಭಿವೃದ್ದಿಗೆ ಸರಕಾರ ಮತ್ತು ಇಲಾಖೆಗಳ ಬಳಿ ಅನುದಾನವೇ ಇಲ್ಲದಾಗಿದೆ. 5 ಲಕ್ಷರಿಂದ 10 ಲಕ್ಷ ಅನುಧಾನ ಕೆರೆಏರಿ, ತೂಬು, ಕಾಲುವೆ, ಜಂಗಲ್ ಕ್ಲೀನ್ ಮತ್ತು ಹೂಳು ತೆಗೆಯಲು ಆಗುವುದಿಲ್ಲ. ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ದಿಗೆ ಕನಿಷ್ಠ 40 ರಿಂದ 50 ಲಕ್ಷ ಅನುದಾನ ಬೇಕಿದೆ.

ಅನುಷ್ಠಾನ ಆಗದ ನರೇಗಾ ಯೋಜನೆ..

Advertisement

40ಹೇಕ್ಟರ್ ವಿಸ್ತೀರ್ಣಕ್ಕಿಂತ ಕಡಿಮೆ ಇರುವ 24ಗ್ರಾಪಂಯ 82ಕೆರೆಗಳು ಸಹ ಅಭಿವೃದ್ದಿ ಇಲ್ಲದೇ ದುಸ್ಥಿತಿಗೆ ತಲುಪಿವೆ. ನರೇಗಾ ಯೋಜನೆಯಡಿ ಕೆರೆಯ ಅಭಿವೃದ್ದಿಗೆ ಅನುಧಾನ ಲಭ್ಯವಿದ್ರು ಸಹ ತಾಪಂ ಇಓ, ಗ್ರಾಪಂ ಪಿಡಿಓ ಬಳಸಿಕೊಳ್ಳುವಲ್ಲಿ ವಿಫಲ. ಗ್ರಾಪಂ ಅದ್ಯಕ್ಷರು ಮತ್ತು ಸದಸ್ಯರೇ ತಮ್ಮ ಅನುಕೂಲಕ್ಕೆ ತಕ್ಕಂತೆ ಮಣ್ಣಿನ ಕೆಲಸ ಮಾಡಿಸಿಕೊಂಡು ಹಣ ಬಿಡುಗಡೆ ಮಾಡಿಸಿಕೊಳ್ತಾರೇ. ಜಿಪಂ ಸಿಇಓ ನೇತೃತ್ವ ವಹಿಸಿ ಪ್ರತಿವರ್ಷ 5ಕೆರೆಗಳಿಗೆ ಅನುಧಾನ ಮೀಸಲಿಟ್ಟು ಕಾಮಗಾರಿ ನಡೆಸಿದರೇ ಅಭಿವೃದ್ದಿ ತಾನಾಗಿಯೇ ಆಗಲಿದೆ.

”ಎಸ್ಟೇಟ್ ಮಾಲೀಕರ ಹಾವಳಿಯಿಂದ ಕೆರೆ ಕಟ್ಟೆಗಳ ಭೂಮಿ ಅರ್ಧದಷ್ಟು ಮಾಯ ಆಗಿವೆ. ಕೆರೆಗಳ ಅಭಿವೃದ್ದಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿಶೇಷ ಅನುಧಾನ ಅತ್ಯಗತ್ಯ. ಎತ್ತಿನಹೊಳೆ ಯೋಜನೆಯ ನೀರು ಹರಿಯುವ ಮುನ್ನವೇ ಕೆರೆಗಳ ಪುನಶ್ಚೇತನ ಅತ್ಯಾವಶ್ಯಕ. ಜಿಪಂ ಸಿಇಓ ಕೆರೆಗಳ ಅಭಿವೃದ್ದಿಗೆ ನರೇಗಾ ಯೋಜನೆಯಡಿ ವಿಶೇಷವಾದ ಯೋಜನೆ ರೂಪಿಸುವ ಅವಶ್ಯಕತೆ ಇದೆ”
– ಸಿದ್ದರಾಜು. ಕೊರಟಗೆರೆ ರೈತಸಂಘದ ಅಧ್ಯಕ್ಷ

”ಬರಗಾಲದಿಂದ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಕೆರೆಗಳ ಒತ್ತುವರಿ ತೆರವಿಗೆ ಕ್ರಮ ಆಗಿವೆ. ಮೇವು ಮತ್ತು ನೀರಿಗೆ ವಿಶೇಷ ಆಧ್ಯತೆ ನೀಡಲಾಗಿದೆ. ಕೆರೆಗಳ ಅಭಿವೃದ್ದಿ ಅಮೃತ್ ಮತ್ತು ನರೇಗಾ ಯೋಜನೆ ಸಹಕಾರಿ. ಸರಕಾರದ ಪರವಾನಗಿ ಪಡೆಯದೇ ಮಣ್ಣು ತೆಗೆದರೆ ಕ್ರಮ ಆಗುತ್ತದೆ. ಕೊರಟಗೆರೆಯಲ್ಲಿ ಈಗಾಗಲೇ 10 ಕೆರೆಗಳ ಅಳತೆ ಮಾಡಿ ಒತ್ತುವರಿ ತೆರವು ಮಾಡಲಾಗಿದೆ.”
ಮಂಜುನಾಥ.ಕೆ. ಕೊರಟಗೆರೆ ತಹಶೀಲ್ದಾರ್

ಅಭಿವೃದ್ದಿಯೇ ಕಾಣದಿರುವ 206 ಕೆರೆ
ಕೊರಟಗೆರೆಯ 24ಗ್ರಾಪಂಯ 82ಕೆರೆಯ 1850 ಹೇಕ್ಟರ್ ವಿಸ್ತೀರ್ಣ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 45 ಕೆರೆಯ ವಿಸ್ತೀರ್ಣ 2300 ಹೇಕ್ಟರ್ ಮತ್ತು ಕಂದಾಯ ಇಲಾಖೆಯ 79ಕೆರೆಗಳ ವಿಸ್ತೀರ್ಣ 1250ಹೇಕ್ಟರ್ ಸೇರಿ ಒಟ್ಟು ಕೊರಟಗೆರೆ ತಾಲೂಕಿನಲ್ಲಿ ಒಟ್ಟು 206ಕೆರೆಗೂ ಒಟ್ಟು 5400ಹೇಕ್ಟರ್‍ಗೂ ಅಧಿಕ ವಿಸ್ತೀರ್ಣವನ್ನು ಹೊಂದಿವೆ. ಸರಿಸುಮಾರು ಅರ್ಧದಷ್ಟು ಕೆರೆಯ ಜಮೀನು ಸರಕಾರಿ ಅಧಿಕಾರಿಗಳ ಭದ್ರತಾ ವೈಫಲ್ಯದಿಂದ ಬೆಂಗಳೂರು ಮತ್ತು ತುಮಕೂರು ಭೂಗಳ್ಳರ ಪಾಲಾಗಿ ಕೆರೆಗಳೇ ಮಾಯವಾಗಿವೆ.

39 ಕೆರೆಗೆ ಎತ್ತಿನಹೊಳೆ ಯೋಜನೆಯ ನೀರು

26ಸಾವಿರ ಕೋಟಿ ಮೌಲ್ಯದ ಎತ್ತಿನಹೊಳೆ ಯೋಜನೆಯು ಬಯಲುಸೀಮೆ ರೈತರಿಗೆ ವರದಾನವು ಹೌದು. ಎತ್ತಿನಹೊಳೆ ಯೋಜನೆಯ ಕಾಮಗಾರಿ ಮುಗಿಯುವ ಮುನ್ನವೇ 39ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ದಿ ಅಗತ್ಯ. ಕೆರೆಯಲ್ಲಿನ ಏರಿ, ತೂಬು, ಕಾಲುವೆ, ಜಂಗಲ್ ಸ್ವಚ್ಚ ಮಾಡದೇ ನೀರು ಬಿಟ್ಟರೂ ಪ್ರಯೋಜನ ಇಲ್ಲ. ಎತ್ತಿನಹೊಳೆ ಯೋಜನಾ ಅಧಿಕಾರಿವರ್ಗ ಕೊರಟಗೆರೆಯಲ್ಲಿ ಗುರುತಿಸಿರುವ 39ಕೆರೆಗಳ ಅಭಿವೃದ್ದಿಗೆ ಪ್ರಥಮ ಆಧ್ಯತೆ ನೀಡಬೇಕಿದೆ.

ಕೆರೆಗಳ ಮೇಲೆ ಭೂಗಳ್ಳರ ಕಣ್ಣು
ಕೊರಟಗೆರೆ ಕ್ಷೇತ್ರದ ಸಣ್ಣನೀರಾವರಿ, ಕಂದಾಯ ಮತ್ತು ಗ್ರಾಪಂಯ 206ಕೆರೆಗಳ ಮೇಲೆ ತುಮಕೂರು ಮತ್ತು ನೆಲಮಂಗಲದ ಭೂಗಳ್ಳರ ಕಣ್ಣುಬಿದ್ದಿದೆ. ಅಕ್ರಮವಾಗಿ ತಡರಾತ್ರಿ ಟಿಪ್ಪರ್ ಲಾರಿಗಳ ಮೂಲಕ ಕೊರಟಗೆರೆ ಪಟ್ಟಣದ ಬೈಪಾಸ್ ಮತ್ತು ತುಮಕೂರು ನಗರಕ್ಕೆ ಪ್ರತಿನಿತ್ಯ ಸಾವಿರಾರು ಲೋಡು ಮಣ್ಣು ರವಾನೆ ಆಗಲಿದೆ. ಪರಿಶೀಲನೆ ನಡೆಸಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಮೌನಕ್ಕೆ ಶರಣಾಗಿ ಪರೋಕ್ಷವಾಗಿ ಭೂಮಾಫಿಯಾಗೆ ಶರಣಾಗಿದೆ.

ಕೆರೆಗಳ ಸಮಸ್ಯೆ ಮತ್ತು ಅಭಿವೃದ್ದಿಯ ಮುಖ್ಯಾಂಶಗಳು

* 206ಕೆರೆಗಳ 5400ಹೇಕ್ಟರ್ ವಿಸ್ತೀರ್ಣಕ್ಕೆ ಭದ್ರತೆಯೇ ಯಕ್ಷಪ್ರಶ್ನೆ
* ಅಕ್ರಮ ಮಣ್ಣು ಸಾಗಾಣಿಕೆಗೆ ಇಲಾಖೆಗಳ ಕ್ರಮದ ಅಗತ್ಯ
* ಕೆರೆಗಳ ಏರಿ ಮತ್ತು ತೂಬು ದುರಸ್ತಿಗೆ ರೈತರಿಂದ ಆಗ್ರಹ
* ಸೀಮೆಜಾಲಿ ಮತ್ತು ಬೇಲಿಗಳ ಜಂಗಲ್ ತೆರವಿಗೆ ಒತ್ತಾಯ
* ಕೆರೆಗಳಿಗೆ ಸೇರುತ್ತಿದೆ ಚರಂಡಿಗಳ ಕಲುಷಿತ ಕೊಳಚೆ ನೀರು
* ಕೋಳಿತ್ಯಾಜ್ಯ ಮತ್ತು ಕಟ್ಟಡಗಳ ತ್ಯಾಜ್ಯಗಳಿಗೆ ಕಡಿವಾಣ ಅವಶ್ಯ
*ಕೆರೆ ಅಕ್ಕಪಕ್ಕದ ಕಾಲುವೆಗಳ ಅಭಿವೃದ್ದಿಗೆ ಅನುದಾನ ಅಗತ್ಯ
* ರೈತರ ಹೆಸರಿನಲ್ಲಿ ಮಣ್ಣು ಮಾಫಿಯಾ ದಂಧೆಕೋರರ ಆರ್ಭಟ
* ಕೆರೆಗಳಿಗೆ ನೀರು ಹರಿಯುವ ಪೀಡರ್ ಚಾನಲ್ ಗಳೇ ಮಾಯ
* ಕೆರೆಗಳ ಒತ್ತುವರಿ ತೆರವಿಗೆ ಸರಕಾರದ ವಿಶೇಷ ಆದೇಶವೇ ಅಗತ್ಯ

*ಸಿದ್ದರಾಜು ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next