ಕೊಟ್ಟಿಗೆಹಾರ: ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಶಾಲೆಯೊಂದಕ್ಕೆ ಕುಡಿಯುವ ನೀರು ಸಿಗದೇ ಶಾಲಾ ಮಕ್ಕಳು, ಪೋಷಕರು ನೀರು ಹೊರುವಂತಾಗಿರುವ ಕಥೆ ಇದು.
ಸುಂಕಸಾಲೆಯ ಸ.ಹಿ.ಪ್ರಾ ಶಾಲೆಗೆ ನೀರು ಪೂರೈಕೆ ಮಾಡುವ ಪೈಪ್‍ಲೈನ್ ಹಾಳಾಗಿರುವುದರಿಂದ ಶಾಲೆಗೆ ನೀರಿನ ಪೂರೈಕೆಯೇ ಇಲ್ಲದಂತಾಗಿದೆ. ಇದರಿಂದಾಗಿ ಶಾಲಾ ಮಕ್ಕಳು, ಕೆಲ ಮಕ್ಕಳ ಪೋಷಕರು, ಅಡುಗೆ ಸಿಬ್ಬಂದಿಗಳು ಸುಮಾರು ಅರ್ದ ಕಿ.ಮಿ ದೂರದಿಂದ ನೀರು ತರುವಂತಾಗಿದೆ.
ಈ ಬಗ್ಗೆ ಗ್ರಾಮಸ್ಥರಾದ ಕೃಷ್ಣ ಮಾತನಾಡಿ 2015 ರಿಂದ ಇದುವರೆಗೆ ಹಲವಾರು ಬಾರಿ ಶಾಲೆಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ತೊಂದರೆಯಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಗ್ರಾ.ಪಂ ಮುಂಭಾಗ ವಿದ್ಯಾರ್ಥಿಗಳು, ಪೋಷಕರು, ಶಾಲಾ ಸಮಿತಿ ಪದಾಧಿಕಾರಿಗಳು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಡಿಡಿಪಿಐ ರಂಗನಾಥ್ ಅವರು, ಶಾಲೆಗೆ ಕುಡಿಯುವ ನೀರು ಪೂರೈಕೆ ಮಾಡುವುದು ಆಯಾ ಗ್ರಾ.ಪಂ ಕಾರ್ಯವಾಗಿದೆ. ಈ ಬಗ್ಗೆ ತಾಲ್ಲೂಕು ಕಾರ್ಯ ನಿರ್ವಾಹಣಾಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದು ತಿಳಿಸಿದ್ದಾರೆ.
‘ಸುಂಕಸಾಲೆ ಸರ್ಕಾರಿ ಶಾಲೆಯ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸ್ಥಳೀಯ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’
– ಹರ್ಷಕುಮಾರ್ ತಾ.ಪಂ ಇಓ.
ಇದನ್ನೂ ಓದಿ: ಬೈಕಂಪಾಡಿ; ಭಾರೀ ಪ್ರಮಾಣದ ತ್ಯಾಜ್ಯ-ಜಲಮೂಲಕ್ಕೆ ಹಾನಿ