ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು ಡಿ. 31 ರ ಬೆಳಿಗ್ಗೆ ತಂಗನಹಳ್ಳಿಬೆಟ್ಟದ ತಪ್ಪಲಿನಲ್ಲಿಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಇತ್ತೀಚೆಗೆಷ್ಟೇ ಇರಕ ಸಂದ್ರ ಕಾಲೊನಿ ಗ್ರಾಮದ ಹಲವು ಮಕ್ಕಳು ಮತ್ತು ವೃದ್ದರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಪ್ರಾಣಿಗಳ ಹಾಗೂ ಮಕ್ಕಳ ಮೇಲೆ ಪದೇ ಪದೇ ದಾಳಿ ಮಾಡಿ ಪರಾರಿಯಾಗುತ್ತಿತ್ತು.
ಇದರಿಂದ ಆತಂಕಗೊಂಡ ನೀಲಗೊಂಡನಹಳ್ಳಿ ಮತ್ತು ಎಲೆರಾಂಪುರ ಗ್ರಾಮ ಪಂಚಾಯತಿಗಳ ಹಲವು ಗ್ರಾಮಗಳ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.
ತಕ್ಷಣ ಎಚ್ವೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಚಿರತೆ ಕಾಣಿಸಿಕೊಂಡ ಜಾಗದಲ್ಲಿ ಬೋನ್ ಇಡುವ ವ್ಯವಸ್ಥೆ ಮಾಡಿದ್ದು, ಇಂದು (ಡಿ.31) ಬೆಳಿಗ್ಗೆ ಚಿರತೆ ಬೋನಿನಲ್ಲಿ ಸೆರೆ ಸಿಕ್ಕಿರುವುದು ಹಲವು ಗ್ರಾಮಗಳ ಜನರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.
ತಾಲೂಕಿನ ವಲಯ ಸಹಾಯಕ ಅರಣ್ಯಾಧಿಕಾರಿ ಸುರೇಶ್, ಚಿರತೆ ಹಿಡಿಯಲು ಬೋನ್ ಇಟ್ಟಿದ್ದ ಸ್ಥಳಕ್ಕೆ ಭೇಟಿ ನೀಡಿ, ಮಾತನಾಡಿ, ಗ್ರಾಮಸ್ಥರು ಯಾವುದೇ ಕಾರಣಕ್ಕೂ ಅತಂಕ ಪಡುವುದು ಬೇಡ. ಚಿರತೆ ಸೆರೆ ಸಿಕ್ಕಿದ್ದು, ಗ್ರಾಮಗಳ ಜನರು ನೆಮ್ಮದಿಯಾಗಿರಲು ಸೂಚಿಸಿದರು. ಸೆರೆ ಸಿಕ್ಕಿರುವ ಚಿರತೆಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗುವುದು ಎಂದು ಮಾಹಿತಿ ನೀಡಿದರು.