ಕೊರಟಗೆರೆ: ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ತಾಲ್ಲೂಕಿನ ಗಡಿಭಾಗದ ಅರಸಾಪುರ ಬಳಿ ಸೋಮವಾರ ಸರ್ಕಾರಿ ಬಸ್ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟಿದ್ದು, ಬಸ್ ನಿರ್ವಾಹಕ ಸೇರಿದಂತೆ 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು, ಮಧುಗಿರಿ, ಶಿರಾ ಮಾರ್ಗವಾಗಿ ತಿರುಪತಿಗೆ ಹೋಗುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್, ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕಾಶಾಪುರ ಗೇಟ್ ಬಳಿ ಇರುವ ತಿರುವಿನಲ್ಲಿ ವೇಗವಾಗಿ ಬಂದು ರಸ್ತೆ ಪಕ್ಕದ ಬೇವಿನ ಮರಕ್ಕೆ ಢಿಕ್ಕಿ ಹೊಡೆದಿದೆ.
ಈ ವೇಳೆ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಯ ( 60) ಮೇಲೆ ಹರಿದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದೇ ಸ್ಥಳದಲ್ಲಿ ದ್ವಿಚಕ್ರ ವಾಹನದಲ್ಲಿ ನಿಂತಿದ್ದ ರೈತ ಗೋಪಾಲನಾಯ್ಕ್ (65) ಎಂಬುವರ ಮೇಲೂ ಬಸ್ ಹರಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಗಾಯಾಳುಗಳಾದ ಮಧುಗಿರಿ ಡಿಪೋದ ಬಸ್ ಕಂಡಕ್ಟರ್ ಪುಟ್ಟರಾಜು, ಮಡಕಶಿರಾದ ಅಗಳಿ ಗ್ರಾಮದ ಜಿಯಾವುಲ್ಲಾ,ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದ ಸುಬ್ಬಲಕ್ಷ್ಮೀ ಹಾಗೂ ಇತರೆ ಐದು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತ ಕಾರಣ ಎಂದು ಪೋಲಿಸರು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಶವವನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಸ್ ಚಾಲಕನ ವಿರುದ್ದ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ನಿರಂತರವಾಗಿ ಸಂಭವಿಸುವ ಅಪಘಾತ
ತಾಲ್ಲೂಕಿನ ಕಾಶಾಪುರ ಗೇಟ್ ತಿರುವಿನಲ್ಲಿಆಗಾಗ ಅಪಘಾತ ಸಂಭವಿಸುತ್ತಲೇ ಇದೆ. ಸಾರಿಗೆ ಮತ್ತು ಲೋಕೋಪಯೋಗಿ ಇಲಾಖೆ ಅಪಘಾತ ತಡೆಯುವಲ್ಲಿ ನಿರ್ಲಕ್ಷ ವಹಿಸಿದ್ದಾರೆ. ಈ ಜಾಗದಲ್ಲಿ ಅಪಘಾತ ವಲಯ ಎಂದು ನಾಮಫಲಕ ಆಳವಡಿಸಿಲ್ಲ ಎಂದು ಸ್ಥಳೀಯ ಆರೋಪಿಸಿದ್ದಾರೆ.