Advertisement

ಕೊರಟಗೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ

06:39 PM Jan 02, 2023 | Team Udayavani |

ಕೊರಟಗೆರೆ: ಸಾಕು ಪ್ರಾಣಿ ಮತ್ತು ರೈತರ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದ ಚಿರತೆಗಳು ಕಳೆದ ಒಂದು ವಾರದೊಳಗೆ ಪ್ರತ್ಯೇಕ ಎರಡು ಕಡೆಗಳಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿವೆ. ಚಿರತೆ ಕಾಟದಿಂದ ಬೆಚ್ಚಿ ಬಿದ್ದಿದ್ದ ರೈತಾಪಿವರ್ಗ ಮತ್ತು ಅರಣ್ಯ ಇಲಾಖೆಯ ಸಿಬಂದಿವರ್ಗ ಚಿರತೆಯ ಸೆರೆಯಿಂದ ಪ್ರಸ್ತುತ ನಿಟ್ಟುಸಿರು ಬೀಡುವಂತಾಗಿದೆ.

Advertisement

ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಕೆರೆಯ ಸಮೀಪದ ಬಸವನ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಭಾನುವಾರ ರಾತ್ರಿ ಚಿರತೆಯೊಂದು ಸೆರೆಯಾಗಿದೆ. ಸೆರೆಯಾದ ಚಿರತೆಯನ್ನು ನೋಡಲು ಜನರ ದಂಡು ಸ್ಥಳಕ್ಕೆ ಹರಿದುಬಂದಿತ್ತು. ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.

ಕಳೆದ 10 ದಿನಗಳ ಹಿಂದೆಯಷ್ಟೇ ಹಸುವಿನ ದೊಡ್ಡಿಯಲ್ಲಿ ಹಾಲು ಕರೆಯುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿದ್ದ ಚಿರತೆಯು ಡಿ.೨೭ರಂದು ತಂಗನಹಳ್ಳಿ ಸಮೀಪದ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಮನುಷ್ಯನ ರಕ್ತದ ರುಚಿ ಕಂಡಿದ್ದ ಚಿರತೆಯ ಸೆರೆಯಿಂದ ಕೋಳಾಲ ಭಾಗದ ಸ್ಥಳೀಯ ರೈತಾಪಿವರ್ಗ ಮತ್ತು ಮಕ್ಕಳು ನಿಟ್ಟಿಸಿರು ಬಿಟ್ಟಿದ್ದಾರೆ.

ಅರಣ್ಯ ಇಲಾಖೆಯ ಬೋನಿಗೆ ವಾರದೊಳಗೆ ಪ್ರತ್ಯೇಕ ಎರಡು ಕಡೆ ಚಿರತೆಗಳು ಬಿದ್ದಿವೆ. ಸೆರೆಯಾದ ಎರಡು ಚಿರತೆಗಳನ್ನು ಸುರಕ್ಷಿತ ಅರಣ್ಯಕ್ಕೆ ರವಾನಿಸಲಾಗಿದೆ. ಜಾನುವಾರು ಹಾನಿಯ ಪರಿಹಾರ ಬಂದಾಕ್ಷಣ ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಲಿದೆ. ರೈತರು ಭಯ ಪಡದೇ ಚಿರತೆ ಕಂಡಾಕ್ಷಣ ಅರಣ್ಯ ಇಲಾಖೆ ಮಾಹಿತಿ ನೀಡಬೇಕಿದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್.ಹೆಚ್.ಎಂ ಹೇಳಿದ್ದಾರೆ.

ಅರಣ್ಯದ ಸಮೀಪವೇ ಊರು
ಕೊರಟಗೆರೆಯ ಹಿರೇಬೆಟ್ಟ, ಚನ್ನರಾಯನ ದುರ್ಗ, ತಿಮ್ಮಲಾಪುರ ಅಭಯಾರಣ್ಯ, ದೇವರಾಯನ ದುರ್ಗದ ಅರಣ್ಯ ಪ್ರದೇಶವಿದೆ. ಅರಣ್ಯದ ಸಮೀಪವೇ ಗ್ರಾಮಗಳಿದ್ದು ಕಾಡು ಪ್ರಾಣಿ ನಾಡಿಗೆ ಬರೋದು ಸಾಮಾನ್ಯ. ಅರಣ್ಯ ಸಮೀಪ ವಾಸಿಸುವ ರೈತಾಪಿವರ್ಗ ಸಾಕು ಪ್ರಾಣಿಗಳ ಬಗ್ಗೆ ಜಾಗೃತಿ ವಹಿಸಬೇಕಿದೆ. ಚಿರತೆ ಅಥವಾ ಕರಡಿ ಕಂಡಾಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿವರ್ಗ ಮನವಿ ಮಾಡಿದ್ದಾರೆ.

Advertisement

ಕಾರ್ಯಚರಣೆಯಲ್ಲಿ ಪಿಎಸ್ಐ ಚೇತನ್‌ಗೌಡ, ಉಪ ವಲಯ ಅರಣ್ಯಾಧಿಕಾರಿ ನಾಗರಾಜು, ಅರಣ್ಯ ರಕ್ಷಕರಾದ ಮಂಜುನಾಥ, ಸಿದ್ದೇಶ್, ಬಾಬು, ಹನುಮಂತರಾಯಪ್ಪ, ರಘು ಸೇರಿದಂತೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಸಿಬಂದಿ ವರ್ಗ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next