ಉಳ್ಳಾಲ: ಸನಾತನ ಹಿಂದೂ ಧರ್ಮಕ್ಕೆ ಅನ್ಯಾಯವಾದಾಗ ಇಡೀ ಸಮಾಜ ಒಗ್ಗಟ್ಟಾಗಿ ನಿಲ್ಲುತ್ತದೆ. ಎರಡು ವರ್ಷಗಳ ಹಿಂದೆ ಕೊರಗಜ್ಜನ ಕ್ಷೇತ್ರಕ್ಕೆ ಅಪಚಾರವಾದಾಗ ವಿಹಿಂಪ ಕಾರ್ಯಕರ್ತರು ಪಾದಯಾತ್ರೆಯ ಮೂಲಕ ಹಿಂದೂ ಸಮಾಜವನ್ನು ಒಗ್ಗೂಡಿಸುವುದರೊಂದಿಗೆ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತ ಬಂದಿರುವುದು ಶ್ಲಾಘನೀಯ ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಹೇಳಿದರು.
ವಿಹಿಂಪ ಮಂಗಳೂರು ಆಶ್ರಯದಲ್ಲಿ ಹಿಂದೂ ಸಮಾಜದ ಏಕತೆಗೆ ಮತ್ತು ಲೋಕಕಲ್ಯಾಣಾರ್ಥವಾಗಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿತಳಕ್ಕೆ ನಡೆದ ಮೂರನೇ ವರ್ಷದ “ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಸಾಮೂಹಿಕ ಪ್ರಾರ್ಥನೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಹಿಂದೂ ಧರ್ಮಕ್ಕೆ ಧಕ್ಕೆಯಾದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿದೆ. ಜಗತ್ತಿನ ಒಳಿತಿಗಾಗಿ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ ಉಳಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಯರಾಮ ಶೆಟ್ಟಿ, ಪಂಜಂದಾಯ ಬಂಟ ವೈದ್ಯನಾಥ, ಕೊರಗ ತನಿಯ ದೈವದ ಆದಿತಳ ಕುತ್ತಾರು ಇದರ ಮೊಕ್ತೇಸರ ಜಯರಾಮ ಭಂಡಾರಿ ಮಾಗಣ್ತಡಿ, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ, ಶಾಸಕ ವೇದವ್ಯಾಸ ಕಾಮತ್, ಉದ್ಯಮಿಗಳಾದ ವಿವೇಕ್ ಶೆಟ್ಟಿ ಬೊಲ್ಯಗುತ್ತು, ವಿನೋದ್ ಶೆಟ್ಟಿ ಬೊಲ್ಯಗುತ್ತು, ರವೀಂದ್ರ ಶೆಟ್ಟಿ ಉಳಿದೊಟ್ಟು, ವಿಹಿಂಪದ ಪ್ರಮುಖರಾದ ಗೋಪಾಲ ಕುತ್ತಾರ್, ಭುಜಂಗ ಕುಲಾಲ್, ಪ್ರವೀಣ್ ಕುತ್ತಾರ್, ಶಿವಾನಂದ ಮೆಂಡನ್ ಉಪಸ್ಥಿತರಿದ್ದರು.
ರವಿ ಅಸೈಗೋಳಿ ಸ್ವಾಗತಿಸಿದರು. ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.