Advertisement

ಸುಧಾರಿಸದ ಕೊರಗರ ಬದುಕು: ಜೋಪಡಿಯಲ್ಲೇ ವಾಸ

09:59 PM Feb 11, 2018 | Karthik A |

ಕುಂದಾಪುರ: ಕೊರಗರು ಏನೇ ಕೇಳಿದರೂ ದಾಖಲೆ ಕೇಳದೆ ತತ್‌ಕ್ಷಣ ಸಕಲ ವ್ಯವಸ್ಥೆ ಮಾಡಿಕೊಡಲು ನಮ್ಮ ಸರಕಾರ ಸಿದ್ಧ ಎನ್ನುವ ಸಚಿವರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತಕ್ಕೆ ಕೊರಗರ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿ ಇದೆ ಎನ್ನುವುದನ್ನು ತಿಳಿಯಲು ಕೋಣಿ ಗ್ರಾ.ಪಂ.ನ ಮೇಲ್ಕಟ್ಕೆರಿಯ ಕೊರಗ ಕುಟುಂಬವೊಂದರ ದುರಂತ ಕಥೆಯೊಂದೇ ಸಾಕು. 

Advertisement

ಮನೆ ಸುತ್ತಮುತ್ತಾ ಹೆಗ್ಗಣ, ಹಾವುಗಳ ಬಿಲ, ಮನೆಯೊಳಗೆ ಕಟ್ಟಿದ ಗೆದ್ದಲು ಗೂಡು, ಪ್ಲಾಸ್ಟಿಕ್‌ ಟರ್ಪಾಲಿನ ಹೊದಿಕೆಯ ಮಾಡು, ಮನೆ ಹೊರಗೆಯೇ ಅಡುಗೆ, ನೀರಿಗೆ ಬೇರೆ ಮನೆಯ ಆಶ್ರಯ.. ಇದು ಗ್ರಾ. ಪಂ. ಮಾಜಿ ಅಧ್ಯಕ್ಷೆಯೋರ್ವರ ಕುಟುಂಬದ ದುಃಸ್ಥಿತಿ.

ಕಳೆದ ನೂರೈವತ್ತು ವರ್ಷದ ಹಿಂದಿನಿಂದಲೂ ಈ ಕೋಣಿಯ ಮೇಲ್ಕಟ್ಕೆರಿ ಹಾಡಿಯಲ್ಲಿ ಮೂಲ ನಿವಾಸಿಗಳ ಕುಟುಂಬ ವಾಸ ಮಾಡಿ ಕೊಂಡಿದ್ದು, 16 ಸೆಂಟ್ಸ್‌  ಜಾಗದಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಿದ್ದು, ಒಂದು ಕಡೆಯವರು ಕೊರಗ ಕುಟುಂಬಕ್ಕೆ ಯಾವುದೇ ತಕರಾರು ಮಾಡದಿದ್ದರೂ, ಮತ್ತೂಂದು ಕಡೆಯವರು ಜಾಗದ ದಾಖಲೆ ಮಾಡಿಕೊಡಲು ಅಡ್ಡಗಾಲು ಹಾಕಿದ್ದಾರೆ. ಇದು ಕೋಣಿ ಗ್ರಾಮ ಪಂಚಾಯತ್‌ಗೆ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾದ, ಅಧ್ಯಕ್ಷೆಯಾಗಿದ್ದ, ಉಪಾಧ್ಯಕ್ಷರಾಗಿದ್ದಾಗಲೇ ಸಾವನ್ನಪ್ಪಿದ ದಿ| ಬಚ್ಚಿ ಅವರ ಕುಟುಂಬದ ಕಣ್ಣೀರ ಕಥೆ.

ದಿ| ಬಚ್ಚಿ ಅವರ ಮೂಲ ನಿವಾಸಿ ಕುಟುಂಬ ವಾಸವಿರುವ ಜಾಗ ಹಾಡಿಯಾಗಿದ್ದು, ಕುಮ್ಕಿಯಾಗಿದೆ. ಗ್ರಾ.ಪಂ. ಸದಸ್ಯರೊಬ್ಬರು ಜಾಗವನ್ನು ಅಧಿಕೃತವಾಗಿ ಇವರ ಹೆಸರಿಗೆ ಮಾಡಿಕೊಡುತ್ತೇನೆ ಎಂದು ಹೇಳಿ ಎಲ್ಲ ದಾಖಲೆಗಳನ್ನು ತೆಗೆದುಕೊಂಡಿದ್ದು, ಈಗ ಆ ದಾಖಲೆಗಳೆಲ್ಲ ನನ್ನಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಕೋಣಿ ಗ್ರಾ.ಪಂ.ನ್ನು ಸಂಪರ್ಕಿಸಿದರೆ ಈ ವಿಚಾರ ಕೋರ್ಟ್‌ನಲ್ಲಿದ್ದು, ನಾವು ಮಧ್ಯಪ್ರವೇಶಿಸಲು ಅಥವಾ ಕೊರಗ ಕುಟುಂಬಕ್ಕೆ ನೆರವಾಗಲು ಕಾನೂನು ತೊಡಕುಗಳಿವೆ ಎಂದು ಸಮಜಾಯಿಷಿ ನೀಡುತ್ತಾರೆ. 

ದಿ| ಬಚ್ಚಿಗೆ ಓರ್ವ ಪುತ್ರನಿದ್ದು, ಅವರೂ ಕೂಡ ಮೃತಪಟ್ಟಿದ್ದಾರೆ. ಸದ್ಯ ಅವರಿದ್ದ ಜೋಪಡಿಯಲ್ಲಿ ಬಚ್ಚಿ ಅವರ ತಂಗಿಯ ಪುತ್ರಿ ಸುಶೀಲಾ ಸಹಿತ ಒಟ್ಟು ನಾಲ್ವರು ವಾಸವಾಗಿದ್ದಾರೆ. ಸುಶೀಲಾ ಬಾಣಂತಿಯಾಗಿದ್ದು, ಈಗಿರುವ ಆ ಜೋಪಡಿಯೂ ಯಾವಾಗ ಬೀಳುತ್ತದೆ ಅನ್ನೋದು ಗೊತ್ತಿಲ್ಲ. ಮನೆಗೆ ಹಾವು, ಚೇಳು ಕೂಡ ಬರುತ್ತಿರುವುದರಿಂದ ಈ ಕುಟುಂಬಕ್ಕೆ ದಿನ ಕಳೆಯುವುದೇ ಸವಾಲಾಗಿದೆ. 

Advertisement

ಡಿಸಿ ಕಚೇರಿ ಮುಂದೆ ಪ್ರತಿಭಟನೆ
ಉಡುಪಿ ಜಿಲ್ಲೆಯಲ್ಲಿ ಕೊರಗರು ಹೇಗೆ ಬದುಕುತ್ತಾರೆ ಎನ್ನುವುದಕ್ಕೆ ಮೇಲ್ಕಟ್ಕೆರಿಯ ದಿ| ಬಚ್ಚಿ ಅವರ ಕುಟುಂಬವೇ ನೈಜ ನಿದರ್ಶನ. ಕೆಲ ಸಮಯಗಳ ಹಿಂದೆ ಜಿ.ಪಂ. ಸಿಇಒ ಭೇಟಿ ನೀಡಿ ಕೊರಗ ಕುಟುಂಬಕ್ಕೆ ಎಲ್ಲ ಸೌಲಭ್ಯ ನೀಡಲು ಆದೇಶಿಸಿದ್ದರೂ ಕೋಣಿ ಗ್ರಾ.ಪಂ. ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಕೊರಗರ ಮಾಹಿತಿ ಸರ್ವೇಯನ್ನು ಸಹ ಸರಿಯಾಗಿ ನಡೆಸಿಲ್ಲ, ಗ್ರಾ.ಪಂ. ಯಾವ ದಾಖಲೆಯನ್ನೂ ನೀಡದೆ ಸತಾಯಿಸುತ್ತಿದ್ದು, ಕುಟುಂಬಕ್ಕೆ ಸರಕಾರದ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಜಿಲ್ಲಾಡಳಿತ ಕೊರಗ ಕುಟುಂಬದ ನೋವನ್ನು ಆಲಿಸದಿದ್ದರೆ, ಡಿಸಿ ಕಚೇರಿ ಮುಂದೆ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಕೊರಗ ಸಂಘಟನೆ, ಕುಂದಾಪುರ ಇದರ ಕಾರ್ಯದರ್ಶಿ ನಾಗರಾಜ್‌ ತಿಳಿಸಿದ್ದಾರೆ.

ಗ್ರಾ.ಪಂ.ನಿಂದ ಎಲ್ಲ ನೆರವು
ಬಚ್ಚಿ ಅವರ ಕುಟುಂಬ ವಾಸವಿರುವ ಜಾಗ ಬೇರೆಯವರ ಹೆಸರಲ್ಲಿದ್ದು, ಆ ಪ್ರಕರಣ ಈಗ ಕೋರ್ಟಿನಲ್ಲಿರುವುದರಿಂದ ನಾವು ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ. ಕೋಣಿ ಗ್ರಾ.ಪಂ.ನಿಂದ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಿದ್ದೇವೆ. ಆ ಜಾಗದ ಯಾವುದೇ ದಾಖಲೆ ಗ್ರಾ.ಪಂ.ನಲ್ಲಿಲ್ಲ. ಆ ಜಾಗದ ಮೂಲ ವಾರಸುದಾರರೇ ಈ ಕುಟುಂಬಕ್ಕೆ ಜಾಗ ಬಿಟ್ಟುಕೊಟ್ಟರೆ ನಮ್ಮದೇನು ಅಭ್ಯಂತರವಿಲ್ಲ. 
– ಸಂಜೀವ ಕೆ. ಮೊಗವೀರ,  ಕೋಣಿ ಗ್ರಾ.ಪಂ. ಅಧ್ಯಕ್ಷರು

ಯಾವ ದಾಖಲೆಯೂ ಇಲ್ಲ
ವಾಸ ಮಾಡುತ್ತಿರುವ ಮನೆ, ಶೌಚಾಲಯ, ಅರ್ಧಂಬರ್ಧ ಮಾಡಿದ ಬಾವಿ ಗ್ರಾ.ಪಂ. ನೀಡಿದ್ದರೂ ತಮಗೂ ಗ್ರಾ.ಪಂ.ಗೂ ಸಂಬಂಧವೇ ಇಲ್ಲ ಎನ್ನುವ ರೀತಿ ನಾವು ಏನೂ ಕೊಟ್ಟೇ ಇಲ್ಲ ಎನ್ನುತ್ತಿದೆ. ಬಚ್ಚಿ ಅವರ ವೋಟರ್‌ ಐಡಿ ಇನ್ನಿತರ ದಾಖಲೆಯನ್ನು ಗ್ರಾ.ಪಂ. ಸದಸ್ಯರೊಬ್ಬರು ಇಟ್ಟುಕೊಂಡಿದ್ದಾರೆ. ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ನಾವು ಯಾವ ದಾಖಲೆಯೂ ಇಲ್ಲದೆ ಬದುಕೋದು ಹೇಗೆ ಎಂದು ಬಚ್ಚಿ ಅಳಿಯ ಕುಮಾರ್‌ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next