ಒರಟ ಶ್ರೀ ನಿರ್ದೇಶನದ, ರತ್ನಮ್ಮ ಮೂವೀಸ್ ಲಾಂಛನದಡಿ ಪಿ. ಮೂರ್ತಿ ನಿರ್ಮಿಸಿರುವ “ಕೋರ’ ಎಂಬ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಜತೆಗೆ ಫೆಬ್ರವರಿ 7ರಂದು ಚಿತ್ರ ತೆರೆ ಕಾಣಲಿದೆ.
ರಿಯಾಲಿಟಿ ಶೋ ಮೂಲಕ ಖ್ಯಾತಿಯಾಗಿದ್ದ ಸುನಾಮಿ ಕಿಟ್ಟಿ ಈ ಚಿತ್ರದ ನಾಯಕ ನಟ. ಟ್ರೇಲರ್ ಬಿಡುಗಡೆ ಬಳಿಕ ಚಿತ್ರತಂಡ “ಕೋರ’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು.
ನಿರ್ಮಾಪಕ ಪಿ. ಮೂರ್ತಿ ಮಾತನಾಡುತ್ತ, “ಕೊರಗಜ್ಜನ ಆಶೀರ್ವಾದದಿಂದ ಆರಂಭವಾದ ಚಿತ್ರ “ಕೋರ’. ಇದು ನಮ್ಮ ನೆಲದ ಕಥೆ. ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ ಕಥೆಯೂ ಹೌದು. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ. ಫೆಬ್ರವರಿ 7ರಂದು ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗುನಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದರು.
“ಕೋರ ನಲವತ್ತು ವರ್ಷಗಳ ಹಿಂದಿನ ಕಥೆ. ಆ ಕಾಲದಲ್ಲಿ ಪ್ರಕೃತಿಯನ್ನು ದೇವರ ರೀತಿ ಆರಾಧಿಸುತ್ತಿದ್ದರು. ಈಗ ಒಂದು ಅಡಿ ಜಾಗಕ್ಕೂ ಹೊಡೆದಾಟವಿದೆ. ಈ ರೀತಿಯ ವಿಭಿನ್ನ ಕಂಟೆಂಟ್ ಹೊಂದಿರುವ ಕಮರ್ಷಿಯಲ್ ಚಿತ್ರವಿದು. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿ ಎಂದು ಸಲಹೆ ನೀಡಿದರು’ ಎನ್ನುವುದು ನಿರ್ದೇಶಕ ಒರಟ ಶ್ರೀ ಅವರ ಮಾತು.
ಚಿತ್ರದ ನಾಯಕ ನಟ ಸುನಾಮಿ ಕಿಟ್ಟಿ ಸಹ ತಮ್ಮ ಮಾತು ಹಂಚಿಕೊಂಡರು.