ತಾನು ಕಂಡಿರುವುದು ಅಥವಾ ಕಾಣುತ್ತಿರುವುದು ಸತ್ಯವೋ ಸುಳ್ಳೋ ಎನ್ನುವ ತೊಳಲಾಟದಲ್ಲಿರುವ ಯುವತಿಗೆ ಮತಿ ಭ್ರಮಣೆಯಾಗಿದೆ. ಆಕೆಯ ಮೈಯೊಳಗೆ ಯಾವುದೋ ದುಷ್ಟ ಶಕ್ತಿಯ ಪ್ರವೇಶವಾಗಿದೆ ಎಂದು ವಾಮಾಚಾರಕ್ಕೆ ಇಳಿಯುವ ಮಂತ್ರವಾದಿ ಒಂದುಕಡೆಯಾದರೆ, ಯುವತಿಯ ಮನದಲ್ಲಿರುವುದು ಕೇವಲ ಭ್ರಮೆ ಮಾತ್ರ ಎನ್ನುವುದನ್ನು ವಾದಿಸುತ್ತಾ ಆಕೆಯನ್ನು ಈ ಭ್ರಮೆಯಿಂದ ಹೊರತರಲು ಹೋರಾಡುವ ಮನೋವೈದ್ಯ ಇನ್ನೊಂದೆಡೆ.
ಇದೆಲ್ಲದರ ನಡುವೆ ಕೊಪ್ಪರಿಗೆ ಗುತ್ತಿನ ಬಗ್ಗೆ ಅಲ್ಲಿನ ಚಿತ್ರ-ವಿಚಿತ್ರ ಘಟನೆಗಳ ಬಗ್ಗೆ, ಆ ಗುತ್ತಿನಲ್ಲಿರುವ ಕೊಪ್ಪರಿಗೆ, ಅದನ್ನು ಕಾಪಾಡುತ್ತಿರುವ ಆದಿಶೇಷನ ಬಗ್ಗೆ ತಿಳಿದುಕೊಂಡು ಈ ಬಗ್ಗೆ ಸಿನೇಮಾ ಮಾಡಬೇಕು ಎಂದು ಬಂದು ಈ ಕೊಪ್ಪರಿಗೆ ಗುತ್ತು ಸೇರಿ ವಿಚಿತ್ರಗಳ ಸುಳಿಯೊಳಗೆ ಸಿಲುಕಿ ತಾನೇ ಒಂದು ಪಾತ್ರವಾಗಿ ಹೋಗುವ ಸಿನೇಮಾ ನಿರ್ದೇಶಕ, ತುಳುನಾಡಿನ ದೈವಾರಾಧನೆಯನ್ನು ಮೂಡನಂಬಿಕೆಯಲ್ಲಿ ಬಂಧಿಸುವ ಯತ್ನ ಮಾಡುವ ಮಂತ್ರವಾದಿ ಮತ್ತು ದೈವ ನಂಬಿಕೆಯನ್ನು ನಂಬಿಕೆಯಲ್ಲಿಯೇ ಉಳಿಸಿ ತುಳುನಾಡಿನ ದೈವ ಒಂದು ಕಾರಣಿಕ ಶಕ್ತಿ ಎನ್ನುವುದನ್ನು ಸಾಧಿಸಿ ತೋರಿಸಿ ಕೊಪ್ಪರಿಗೆ ಎನ್ನುವುದಕ್ಕೆ ನಿಜ ವ್ಯಾಖ್ಯಾನ ಬರೆದ ತುಳು ರಂಗಭೂಮಿಯ ಒಂದು ಹೊಸ ಪ್ರಯೋಗಶೀಲ ನಾಟಕ ಕೊಪ್ಪರಿಗೆ.
ರಂಗ ತುಡರ್ ಕಲಾವಿದರು ಭಿವಂಡಿ ಕಲಾವಿದರು ಇತ್ತೀಚೆಗೆ ಸಂಸ್ಥೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಭಿನಯಿಸಿದ ಕೊಪ್ಪರಿಗೆ ನಾಟಕವನ್ನು ಮಧು ಬಂಗೇರ ಕಲ್ಲಡ್ಕ ಇವರು ರಚಿಸಿದ್ದು, ತುಳು ರಂಗಭೂಮಿಯ ದಕ್ಷ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಈ ನಾಟಕ ವಿಟ್ಲ ಪರಿಸರದಲ್ಲಿ ನಡೆದಿರುವ ಒಂದು ಸತ್ಯ ಘಟನೆಯನ್ನು ರಂಗಭೂಮಿಗೆ ಭಟ್ಟಿ ಇಳಿಸಿರುವ ಯತ್ನವಾಗಿದೆ.
ಹಾಸ್ಯವನ್ನೇ ಪ್ರಧಾನವನ್ನಾಗಿಸಿಕೊಂಡು ಸಾಮಾನ್ಯ ಕಥೆಯ ಎಸಳನ್ನು ಅಂತಿಮ ದೃಶ್ಯಕ್ಕೆ ತಗಲು ಹಾಕಿಸಿ ನಾಟಕ ಮುಗಿಸಿ ಹೋಗುವಾಗ ಪ್ರೇಕ್ಷಕನ ಮನಸ್ಸಿನಲ್ಲಿ ಶೂನ್ಯತಾ ಭಾವನೆಯನ್ನು ಉಂಟು ಮಾಡುವ ಇಂದಿನ ಕೆಲ ನಾಟಕಗಳ ಸಾಲಿನಲ್ಲಿ ತೀರಾ ಭಿನ್ನವಾಗಿ ಮೂಡಿ ಬರುವ ಕೊಪ್ಪರಿಗೆ ನಾಟಕವು ತವರೂರ ನೆಲದಲ್ಲಿ ಸಾಲು ಸಾಲು ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದೆ.
ತುಳುನಾಡಿನ ಗುತ್ತು ಮನೆತನ, ದೈವಸ್ಥಾನ ಇವು ರಂಗವೇದಿಕೆಯ ಪ್ರಮುಖ ಆಕರ್ಷಣೆಯಾಗಿದ್ದು, ಅಂತಿಮ ದೃಶ್ಯದಲ್ಲಿ ದೈವಸ್ಥಾನದ ನೆಲ ಬಗೆದು ಹೊರ ಬರುವ ಕೊಪ್ಪರಿಗೆ ಪ್ರೇಕ್ಷಕನ ಮನದಲ್ಲಿ ಹೊಸ ರೋಮಾಂಚನವನ್ನು ಉಂಟುಮಾಡುತ್ತದೆ. ತುಳುನಾಡಿನ ಬಗ್ಗೆ ತಿಳಿದುಕೊಂಡು ಇಲ್ಲಿ ಸಂಸ್ಕೃತಿಯ ಬಗ್ಗೆ ಸಿನೇಮಾ ಮಾಡಬೇಕು ಎಂದುಕೊಂಡು ಇಂಟರ್‌ನೆಟ್ ಮೂಲಕ ಮಾಹಿತಿ ಸಂಗ್ರಹಿಸಿ ತುಳುನಾಡಿನ ಕೊಪ್ಪರಿಗೆ ಗುತ್ತಿಗೆ ಬೆಂಗಳೂರಿನಿಂದ ಬರುವ ನಿರ್ದೇಶಕನ ಪಾತ್ರದೊಂದಿಗೆ ತೆರೆದುಕೊಳ್ಳುವ ಸಿನೇಮಾ ಪ್ರತೀ ಕ್ಷಣ ಕ್ಷಣಕ್ಕೂ ಕುತೂಹಲವನ್ನುಂಟು ಮಾಡುತ್ತದೆ. ಕಥಾ ನಾಯಕಿಯನ್ನು ಆವರಿಸಿಕೊಂಡಿರುವ ಒಂದು ಭ್ರಮೆಯನ್ನು ಲಾಭ ಮಾಡಿಕೊಳ್ಳಬಯಸುವ ಮಂತ್ರವಾದಿಗೆ ತುಳುನಾಡಿನ ದೈವಗಳು ನೀಡುವ ಉತ್ತರ ನಿಜಕ್ಕೂ ಅದ್ಭುತ ಎನ್ನುವಂತಹ ನಿರೂಪಣೆ ನೀಡಿದೆ. ಒಂದು ಭಿನ್ನವಾದ ನಿರೂಪಣೆ ಮತ್ತು ಪಾತ್ರವಿನ್ಯಾಸ ನೋಡುಗನಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ.
ಇದಲ್ಲದೆ ತುಳು ತಿಳಿಯದೆ ತುಳು ಸಿನೆಮಾದ ನಟನೆಗೆ ಬಂದು ಇಲ್ಲಿನ ಭಾಷಾ ಗೊಂದಲದಲ್ಲಿ ಇನ್ನಿಲ್ಲದ ಪಾಡುಪಡುವ ನಟನೊಬ್ಬ ನಮ್ಮ ನಡುವೆ ಹಾಸ್ಯದ ಹೊನಲನ್ನೇ ಹರಿಸುತ್ತಾನೆ. ನಾಟಕ ಮುಗಿದರೂ ಈ ನಟ ನಮ್ಮ ನೆನಪಿನಲ್ಲಿ ಸದಾ ಉಳಿಯುತ್ತಾನೆ. ನಾಟಕದ ಕಥಾ ವಸ್ತುವಿಗೆ ಧಕ್ಕೆ ಬಾರದ ರೀತಿಯಲ್ಲಿ ಹೊಟ್ಟೆ ಹುಣ್ಣಾಗುವ ರೀತಿಯಲ್ಲಿರುವ ಹಾಸ್ಯ ನಮಗೆ ಇಷ್ಟವಾಗುತ್ತದೆ.
ತುಳುನಾಡಿನ ಸಂಪ್ರದಾಯಿಕ ರಾಗ ಹೊಂದಾಣಿಕೆಯ ಹಿನ್ನೆಲೆ ಸಂಗೀತ, ರಂಗವಿನ್ಯಾಸ, ಹವ್ಯಾಸಿ ಕಲಾವಿದರ ಅಭಿನಯ ಜಗದೀಶ್ ಶೆಟ್ಟಿ ಕೆಂಚನಕೆರೆಯವರ ನಿರ್ದೇಶನದಿಂದ ನಾಟಕ ರಂಗಭೂಮಿಗೆ ಹೊಸ ದಿಕ್ಕನ್ನು ನೀಡುವ ಲಕ್ಷಣ ಕಂಡು ಬಂದಿದೆ.
ಈ ನಿಟ್ಟಿನಲ್ಲಿ ಒಂದು ಯಶಸ್ವಿ ಪ್ರದರ್ಶನ ನೀಡಿದ ಕೀರ್ತಿಗೆ ರಂಗತುಡರ್ ಭಿವಂಡಿ ಕಲಾವಿದರು ಭಾಜನರಾಗಿದ್ದಾರೆ. ಮುಂಬಯಿ ನಗರದಲ್ಲಿ ಕೊಪ್ಪರಿಗೆ ನಾಟಕವು ಇನ್ನಷ್ಟು ಪ್ರದರ್ಶನವನ್ನು ಕಾಣುವಂತಾಗಲಿ ಎಂಬುವುದು ನನ್ನ ಹಾರೈಕೆ.
ಲೇಖಕ:ನರೇಶ್ ಕುಮಾರ್ ಸಸಿಹಿತ್ಲು