Advertisement
ಹೌದು.. ಜಿಲ್ಲೆಯಲ್ಲಿ 2020ರ ವರ್ಷ ಕೊರೊನಾ ಆರ್ಭಟದಿಂದ ನಮಗೆ ಮುಕ್ತಿ ಸಿಗಲಿದೆ ಎನ್ನುವ ಖುಷಿಯ ಭಾವನೆಯಿಂದಲೇ 2021ಕ್ಕೆ ಪಾದಾರ್ಪಣೆ ಮಾಡಿದ್ದ ಜನತೆಗೆ 2021 ದೊಡ್ಡ ಆಪತ್ತನ್ನೇ ತಂದೊಡ್ಡಿತು. ಕೋವಿಡ್ ಮೊದಲ ಅಲೆಗಿಂತ 2ನೇ ಅಲೆಯಲ್ಲಿಯೇ ಜನರು ಜೀವ ಭಯದಿಂದ ನಲುಗಿದರು. ಅಂಗೈಯಲ್ಲಿ ಜೀವ ಹಿಡಿದು ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಮಧ್ಯೆಯೂ ಜನತೆ ಬದುಕಿನ ಭರವಸೆಯನ್ನು ಕಳೆದುಕೊಳ್ಳಲಿಲ್ಲ.
Related Articles
Advertisement
ಯಾವುದೇ ಶಾಲೆ-ಕಾಲೇಜು ತೆರೆಯಲೇ ಇಲ್ಲ. ಮಕ್ಕಳಿಗೆ ವಠಾರ ಶಾಲೆ ಮಾಡಿದರೂ ಪರಿಣಾಮ ಬೀರಲಿಲ್ಲ. ಪಠ್ಯ ಕಡಿತ ಎನ್ನುವ ಮಾತಾದರೂ ಇಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಕ್ಕೆ ಹೊಡೆತ ಬಿದ್ದಿತು. ಕಳೆದ ಕೆಲ ತಿಂಗಳ ಹಿಂದಷ್ಟೇ ಶಾಲೆಗಳ ಬಾಗಿಲು ತೆರೆದು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಗುತ್ತಿದೆ. ಭೌತಿಕ ತರಗತಿ ಆರಂಭಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರ ಕೋವಿಡ್ ಹೊಡೆತಕ್ಕೆ ನಲುಗಿದೆ.
ಆರೋಗ್ಯ ಕ್ಷೇತ್ರ ಸುಧಾರಣೆ: ಕೊರೊನಾ 2ನೇ ಅಲೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಸುಧಾರಣೆ ಮಾಡಿಕೊಳ್ಳಲಾರಂಭಿಸಿತು. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಮಾಡಿತು. ಜೊತೆಗೆ ಖಾಸಗಿಯಾಗಿ ಆಸ್ಪತ್ರೆಗಳ ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ, ಚಿಕಿತ್ಸೆಗೆ ಸಹಕಾರದ ಮಾತನ್ನಾಡಿತು. ಖಾಸಗಿ ಆಸ್ಪತ್ರೆಗಳೂ ಜನರ ಜೀವ ಉಳಿಸುವ ಕೆಲಸ ಮಾಡಿದವು. ವೈದ್ಯರು, ಆರೋಗ್ಯ ಸಿಬ್ಬಂದಿ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿ, ಜನರ ಜೀವ ಉಳಿಸುವ ಪ್ರಯತ್ನ ನಡೆಸಿದರು.
ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಹಗಲು-ರಾತ್ರಿ ಎನ್ನದೇ ಜಿಲ್ಲಾದ್ಯಂತ ಮನೆ ಮನೆಗೆ ಸುತ್ತಿ ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿ ಅಗತ್ಯ ಸಹಕಾರ ನೀಡಿದರು. ಆದರೆ ಅವರ ಜೀವನಕ್ಕೆ ರಾಜ್ಯ ಸರ್ಕಾರ ಆಸರೆಯಾಗದೇ ಇರುವುದು ಬೇಸರದ ಸಂಗತಿ. ಕೊನೆ ಹಂತಕ್ಕೆ ಆಸ್ಪತ್ರೆಗಳು ಸುಧಾರಣೆ ಕಂಡವು. ಆಕ್ಸಿಜನ್ ಘಟಕ ಆರಂಭಗೊಂಡವು.
ಅಭಿನವ ಶ್ರೀಗಳ ಜನಸೇವಾ ಕಾರ್ಯ: ಗವಿಸಿದ್ದೇಶ್ವರ ಸ್ವಾಮಿಗಳು ಕೊರೊನಾ ಸೋಂಕಿತರ ಸೇವೆಗೆ ಪಣ ತೊಟ್ಟು ನಿಂತು ಕೆಲವೇ ದಿನದಲ್ಲಿ ತಮ್ಮ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದರು. ಅಲ್ಲದೇ ಕೋವಿಡ್ ಕೇರ್ ಸೆಂಟರ್ ಆರಂಭಿಸಿದರು. ಮಠದಿಂದಲೇ ಊಟ, ಉಪಹಾರ ಸೇರಿ ಹಣ್ಣು-ಹಂಪಲು ಪೂರೈಸಿದರು. ಇದಲ್ಲದೇ, ನಗರ ಕೇಂದ್ರದಲ್ಲಿನ ಹಲವು ಆಸ್ಪತ್ರೆಗಳಿಗೆ ಮಠದಿಂದ ಪ್ರಸಾದ ಪೂರೈಸಿದರು. ಮಠದ ಆಸ್ಪತ್ರೆಯಲ್ಲಿ ಸಾವಿನ ದವಡೆಯ ಹಂತಕ್ಕೆ ತಲುಪಿದ್ದ ಅದೆಷ್ಟೋ ಜನರು ಪ್ರಾಣಪಾಯದಿಂದ ಪಾರಾದರು. ಇದೆಲ್ಲ ಗವಿಮಠದ ಪವಾಡ ಎಂದರೂ ತಪ್ಪಾಗಲಾರದು. ಕೋವಿಡ್ ಕೇರ್ ಸೆಂಟರ್‌ನಲ್ಲೂ ತುಂಬ ಜನರು ಚೇತರಿಕೆ ಕಂಡು ಗುಣಮುಖರಾಗಿ ಬಂದರು.
ಆಸ್ಪತ್ರೆಯ ಕಾಳಜಿ ವಹಿಸುತ್ತಿದ್ದ ಶ್ರೀಗಳೇ ಆಸ್ಪತ್ರೆಯೊಳಗೆ ಪ್ರವೇಶಿಸಿ ಸೋಂಕಿತರಿಗೆ ಆತ್ಮಸ್ಥೈರ್ಯ ಹೇಳುತ್ತಿದ್ದರಿಂದ ಸೋಂಕಿತರು ಭಯ ದೂರ ಮಾಡಿ ಆರೋಗ್ಯದತ್ತ ಕಾಳಜಿ ಕೊಟ್ಟರು. ಯೋಗ, ಧ್ಯಾನ, ಮಂತ್ರ ಪಠಣದಿಂದಲೂ ಬಹುಪಾಲು ರೋಗಿಗಳು ಗುಣಮುಖರಾದರು. ಮಠದ ಈ ಕಾರ್ಯ ರಾಜ್ಯ ಸೇರಿದಂತೆ ನಾಡಿನ ಮಠಾಧಿಶರು, ರಾಜಕಾರಣಿಗಳು, ಗಣ್ಯಾತೀತ ಮುಖಂಡರು ಗುಣಗಾನ ಮಾಡಿದರು. ಇದಕ್ಕೂ ಮುನ್ನ ಜಾತ್ರೆಯನ್ನು ಸರಳ ಆಚರಣೆ ಮಾಡುವ ಜೊತೆಗೆ ಗಿಣಗೇರಿ ಕೆರೆಯ ಅಭಿವೃದ್ಧಿಗೆ ಪಣ ತೊಟ್ಟು ಇಡೀ ದೊಡ್ಡ ಕೆರೆಯ ಹೂಳು ತೆಗೆಸಿದರು. ಜನರೂ ದೇಣಿಗೆ ನೀಡಿದರು. ಇದಲ್ಲದೇಅಡವಿಹಳ್ಳಿ ದತ್ತು ಪಡೆದು ಅಭಿವೃದ್ಧಿ ಮಾಡಿದರು. ಡಿಜಿಟಲ್ ಗ್ರಂಥಾಲಯ ಆರಂಭಿಸಿ ವಿದ್ಯಾರ್ಥಿಗಳಿಗೆ ಆಸರೆಯಾದರು. ಕೃಷಿಗೆ ಹೊಡೆತ: ವರ್ಷದ ಆರಂಭದಲ್ಲಿ ಮತ್ತೆ ಲಾಕ್‌ಡೌನ್ ಆಗಿದ್ದರಿಂದ ರೈತರು ಫಸಲು ಮಾರಾಟ ಮಾಡಲಾಗದೇ ಪ್ರಯಾಸಪಟ್ಟರು. ಕೊನೆಗೆ ಜಿಲ್ಲಾಡಳಿತದ ಅನುಮತಿ ದೊರೆತರೂ ರೈತರ ಉತ್ಪನ್ನ ಖರೀದಿ ಮಾಡುವವರೇ ಇಲ್ಲದಂತಾಯಿತು. ಅದೆಷ್ಟೋ ರೈತರು ಹೊಲದಲ್ಲಿಯೇ ತಮ್ಮ ಫಸಲನ್ನು ಹಾಗೇ ಬಿಟ್ಟರು. ಮಾರಾಟ ಮಾಡಿದ ವೆಚ್ಚವೂ ಬರದಂತೆ ತುಂಬ ತೊಂದರೆ ಎದುರಿಸಿ ನಷ್ಟವನ್ನೇ ಅನುಭವಿಸಿತು. ಸರ್ಕಾರ ಪ್ಯಾಕೆಜ್ ಘೋಷಿಸಿತು. ಮೆಕ್ಕೆಜೋಳಕ್ಕೆ ಪರಿಹಾರ ಕೊಟ್ಟಿತು. ಅಲ್ಲೊಂದು-ಇಲ್ಲೊಂದಿಷ್ಟು ಪರಿಹಾರ ಬಂದಿತು. ಕ್ರಮೇಣ ಕೋವಿಡ್ ಕಡಿಮೆಯಾಯಿತು. ಜೂನ್-ಸೆಪ್ಟೆಂಬರ್ ತಿಂಗಳಲ್ಲಿ ನಿರಂತರ ಮಳೆ ಸುರಿದ ಕಾರಣ ಉತ್ತಮ ಫಸಲು ಬಂತು. ಆದರೆ ಅತಿಯಾದ ಮಳೆಯಿಂದಾಗಿ ರೈತರ ಅಪಾರ ಬೆಳೆ ನಷ್ಟ ಅನುಭವಿಸಿದರು. ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೂ ಸಿಗಲಿಲ್ಲ. ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಈಗಷ್ಟೇ ಪರಿಹಾರ ಬರಲಾರಂಭಿಸಿದೆ. ಜಿಲ್ಲಾ ರಾಜಕೀಯ: ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ನಿರೀಕ್ಷೆಯಿತ್ತು. ಆರಂಭದಲ್ಲಿ ಅದು ಹುಸಿಯಾಯಿತು. ಕ್ರಮೇಣ ಜಿಲ್ಲೆಯ ಶಾಸಕರಿಗೆ ಮಂತ್ರಿ ಭಾಗ್ಯ ಸಿಗಲಿ ಎನ್ನುವ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅನುಭವಿ ರಾಜಕಾರಣಿ ಹಾಲಪ್ಪ ಆಚಾರ್ ಸಚಿವರಾಗಿ ಜಿಲ್ಲಾ ಅಭಿವೃದ್ಧಿಗೆ ಪಣತೊಟ್ಟು ನೀರಾವರಿಗೆ ಒತ್ತು ನೀಡುವ ಮಾತನ್ನಾಡಿದ್ದಾರೆ. ಇನ್ನು ಬಿಜೆಪಿ ಜನ ಸೇವಕ ಯಾತ್ರೆ ನಡೆಸಿತು. ಗ್ರಾಪಂ ಚುನಾವಣೆಯಲ್ಲಿ ಅಬ್ಬರ ನಡೆಸಿ, ನಾವು ಹೆಚ್ಚು ಗೆದ್ದಿದ್ದೇವೆ ಎಂದು ಬೀಗಿತು. ಇತ್ತ ಕೈ ನಾವೇ ಮೇಲು ಎಂದು ಹಿರಿಹಿರಿ ಹಿಗ್ಗಿತು. ಈ ಬೆನ್ನಲ್ಲೇ ಘೋಷಣೆಯಾದ ವಿಪ ಚುನಾವಣೆಯಲ್ಲಿ ಬಿಜೆಪಿ ಜನ ಸ್ವರಾಜ್ ಯಾತ್ರೆ ನಡೆಸಿದಾಗ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕೊಪ್ಪಳದಲ್ಲಿ ಕಹಳೆ ಮೊಳಗಿಸಿದರು. ಆದರೆ ಚುನಾವಣೆ ಫಲಿತಾಂಶದಲ್ಲಿ ಕಮಲದ ಅಭ್ಯರ್ಥಿ ಸೋತರು. ಅಭಿವೃದ್ಧಿ ಕುಂಟಿತ: ಇನ್ನೂ ಜಿಲ್ಲೆಯಲ್ಲಿ ಕೋವಿಡ್ ಹೊಡೆತದ ಮಧ್ಯೆಯೂ ಹಲವು ಕೈಗಾರಿಕೆಗಳು ಕಾರ್ಯ ನಡೆಸಿದವು. ಆದರೆ ಜಿಲ್ಲಾದ್ಯಂತ ಕೆಲ ಅಭಿವೃದ್ಧಿ ಕೆಲಸಗಳೇ ನಿಂತವು. ಸಕಾಲಕ್ಕೆ ಅನುದಾನ ಇಲ್ಲದೇ ಹಲವು ಕಾಮಗಾರಿಗಳು ಅರೆಬರೆಯಾದವು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ತಡವಾದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಸಕಾಲಕ್ಕೆ ವೇಗ ದೊರೆಯಲಿಲ್ಲ. ಈಗಷ್ಟೇ ಅನುದಾನ ಹಂತ ಹಂತವಾಗಿ ಬರುತ್ತಿದೆ. ಅಭಿವೃದ್ಧಿ ನಿಧಾನಗತಿಯಲ್ಲಿ ನಡೆದಿದೆ. ದತ್ತು ಕಮ್ಮಾರ