ಕೊಪ್ಪಳ: ರಾಜ್ಯದೆಲ್ಲೆಡೆ ಬರದ ಛಾಯೆ ಆವರಿಸುತ್ತಿದೆ. ಮಳೆಯ ಕೊರತೆಯಿಂದ ಅನ್ನದಾತ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಗಿ ಸರ್ಕಾರವೇ ಪರ್ಜನ್ಯ ಜಪ, ಹೋಮ ಮಾಡಿಸುವ ಕಾಯಕ ಆರಂಭಿಸಿದೆ. ಇದರೊಟ್ಟಿಗೆ ಮಠ-ಮಾನ್ಯಗಳು ಪರಿಸರ ಜಾಗೃತಿಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರೆ, ಉತ್ತರ ಕರ್ನಾಟಕದ ಸಿದ್ಧಗಂಗೆ ಎಂಬ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಮಠ ಮಠಕ್ಕೆ ಬರುವ ಭಕ್ತರಿಗೆ ಸಸಿ ವಿತರಿಸುವ ‘ವೃಕ್ಷ ದಾಸೋಹ’ ಸಂಸ್ಕೃತಿ ಆರಂಭಿಸಿದೆ.
Advertisement
ನಾಡಿನ ಪ್ರಸಿದ್ಧ ಗವಿಸಿದ್ದೇಶ್ವರ ಮಠ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಕ್ರಾಂತಿಯನ್ನೇ ಮಾಡಿದೆ. ಅಕ್ಷರ ದಾಸೋಹ, ಅನ್ನ ದಾಸೋಹ, ಅಧ್ಯಾತ್ಮ ದಾಸೋಹಕ್ಕೆ ಹೆಸರಾದ ಶ್ರೀಮಠ ಸಾಮಾಜಿಕ ಕ್ರಾಂತಿಗೆ ಮುಂದಾಗಿದೆ. ಬಾಲ್ಯವಿವಾಹ ತಡೆ, ಸಶಕ್ತ ಮನ ಸಂತೃಪ್ತಿ ಜೀವನ, ನೇತ್ರದಾನ, ರಕ್ತದಾನ ಮಾಡುವಂತಹ ಮಹಾನ್ ಕಾರ್ಯ ಮಾಡಿ ಜನರಲ್ಲಿ ಜಾಗೃತಿಯ ಮೂಡಿಸುತ್ತಿದ್ದು, ಅದರೊಟ್ಟಿಗೆ ಪರಿಸರ ಜಾಗೃತಿಗೆ ‘ವೃಕ್ಷ ದಾಸೋಹ’ ಪರಂಪರೆ ಆರಂಭಿಸಿದೆ.
Related Articles
ಗವಿಮಠದ ಶ್ರೀಗಳು ಇತ್ತೀಚೆಗೆ ಕೊಪ್ಪಳದ ಜನರ ಜೀವನಾಡಿಯಾಗಿ ತ್ಯಾಜ್ಯದಿಂದ ತುಂಬಿದ್ದ ಹಿರೇಹಳ್ಳ ವನ್ನು 26 ಕಿಮೀ ಸ್ವಚ್ಛ ಮಾಡುವ ಮೂಲಕ ಮಹಾನ್ ಕಾರ್ಯ ಮಾಡಿದ್ದರು. ಇದು ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದು, ಜಲತಜ್ಞರು, ನೀರಾವರಿ ತಜ್ಞರು ಸೇರಿದಂತೆ ನಾಡಿನ ಗಣ್ಯಾತೀತರು ಹಿರೇಹಳ್ಳದ ಸ್ವಚ್ಛತಾ ಸ್ಥಳಕ್ಕೆ ಭೇಟಿ ನೀಡಿ ಶ್ರೀಗಳ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ನಿಜಕ್ಕೂ ಇದೊಂದು ದೇವರು ಮಾಡುವ ಕೆಲಸ ಎನ್ನುವ ಮಾತನ್ನಾಡುತ್ತಿದ್ದಾರೆ.
Advertisement
ಈ ಹಿಂದೆ ಮಠ, ಮಾನ್ಯಗಳು ಅಕ್ಷರ ದಾಸೋಹ, ಅನ್ನದಾಸೋಹ, ಆರೋಗ್ಯ ದಾಸೋಹ, ಅಧ್ಯಾತ್ಮ ದಾಸೋಹದಂತ ಹಲವು ಕಾರ್ಯಗಳನ್ನು ಮಾಡಿವೆ. ಆದರೆ ವರ್ತಮಾನದಲ್ಲಿ ವೃಕ್ಷ ದಾಸೋಹ ಪರಂಪರೆಯ ಅವಶ್ಯಕತೆಯಿದೆ. ಬರ ನಿವಾರಣೆಗೆ ಪರಿಸರ, ಜಲ ಸಂರಕ್ಷಣೆ ಮಾಡಬೇಕಿದೆ. ಹಾಗಾಗಿ ಮಠದಿಂದ ವೃಕ್ಷ ದಾಸೋಹ ಪರಂಪರೆ ಆರಂಭಿಸಿದ್ದೇವೆ. ನಿಸರ್ಗ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಗುಡಿ ಕಟ್ಟುವುದಕ್ಕಿಂತ ಗಿಡ ಹಚ್ಚುವುದು ಲೇಸು ಎಂಬ ಮಾತಿದೆ. ಹಾಗಾಗಿ ಮಠದಿಂದ ಭಕ್ತರಿಗೆ ವೃಕ್ಷ ದಾಸೋಹದಡಿ ಸಸಿ ವಿತರಣಾ ಕಾರ್ಯ ನಡೆದಿದೆ.• ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ,
ಗವಿಮಠ