ಕೊಪ್ಪಳ: ಜಿಲ್ಲೆಗೆ ಘೋಷಣೆಯಾದ ‘ಉಡಾನ್ ಯೋಜನೆ’ ಮೈತ್ರಿ ಸರ್ಕಾರದ ಒಪ್ಪಂದದ ಮಧ್ಯದಲ್ಲೇ ನರಳಾಡುತ್ತಿದೆ. ಅದರಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರವು ಇದನ್ನು ಘೋಷಿಸಿದ್ದು, ಸ್ಥಳೀಯ ಎಂಎಸ್‌ಪಿಎಲ್ ಕಂಪನಿಯೂ ಒಪ್ಪಂದಕ್ಕೆ ಇನ್ನೂ ಮನಸ್ಸು ಮಾಡುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.
ದೇಶದ ಮೂಲೆ ಮೂಲೆಗೂ ವಿಮಾನಯಾನ ಸೇವೆ ಆರಂಭಿಸಬೇಕೆನ್ನುವ ಸದುದ್ದೇಶದಿಂದ ವರ್ಷದ ಹಿಂದೆ ಕೇಂದ್ರ ಮೋದಿ ಸರ್ಕಾರವು ಉಡಾನ್ ಯೋಜನೆಯನ್ನು ಘೋಷಿಸಿದೆ. ಆದರೆ, ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ಈ ಕುರಿತುಂತೆ ವಿವಿಧ ಹಂತದ ಪ್ರಕ್ರಿಯೆ ನಡೆದಿದ್ದರೂ ಜಿಲ್ಲೆಯಲ್ಲಿ ಯಾವುದೇ ಬೆಳವಣಿಗೆ ನಡೆದಿಲ್ಲ. ಪಕ್ಕದ ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಸಂಸ್ಥೆ ಕೇಂದ್ರದ ಯೋಜನೆಗೆ ಒಪ್ಪಿಕೊಂಡಿದ್ದು, ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಇಲ್ಲಿ ಮಾತ್ರ ಹಲವು ತೊಡಕು ಎದುರಾಗಿವೆ.
ಮೈತ್ರಿ ಸರ್ಕಾರದಿಂದ ಒಪ್ಪಂದ: ಕೇಂದ್ರ ಸರ್ಕಾರವೇನೋ ಯೋಜನೆ ಘೋಷಿಸಿದೆ. ಆದರೆ ಇದಕ್ಕೆ ಆರಂಭದಲ್ಲಿ ಸ್ವಲ್ಪ ಅನುದಾನದ ನೆರವು ಕೊಡಲಿದೆ. ಉಳಿದಂತೆ ರಾಜ್ಯ ಸರ್ಕಾರವೇ ಅಭಿವೃದ್ಧಿ ಮಾಡಬೇಕಿದೆ. ಆದರೆ ಅಭಿವೃದ್ಧಿ ಮಾಡಿದ ಅನುದಾನವನ್ನು ಕೇಂದ್ರ ನಂತರದಲ್ಲಿ ಭರಿಸಲಿದೆ. ಇದಕ್ಕೆ ರಾಜ್ಯ ಒಪ್ಪಿಗೆ ಸೂಚಿಸಿ ಒಪ್ಪಂದ ಮಾಡಿಕೊಳ್ಳಬೇಕು. ಅಲ್ಲದೇ, ಕೇಂದ್ರವು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಗೆ ಮುಂದಾಗಿದ್ದು, ಇಲ್ಲಿನ ಎಂಎಸ್‌ಪಿಎಲ್ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಸೂಚಿಸುತ್ತಿಲ್ಲ.
ಏರೋಡ್ರೋಮ್‌ನಲ್ಲಿ ಅಲ್ಪ ಸೌಕರ್ಯ: ಪ್ರಸ್ತುತ ತಾಲೂಕಿನ ಬಸಾಪುರ ಲಘು ವಿಮಾನ ನಿಲ್ದಾಣ ಒಂದು ಸಣ್ಣ ಪ್ರಮಾಣದ ವಿಮಾನ ಬಂದಿಳಿಸುವ ಸಾಮರ್ಥ್ಯ ಹೊಂದಿದೆ. ಬೃಹದಾಕಾರದ ಸೌಲಭ್ಯ ಇಲ್ಲಿಲ್ಲ. ಗಣ್ಯ ವ್ಯಕ್ತಿಗಳು ಸಣ್ಣ ವಿಮಾನದಲ್ಲಿ ಬಂದಿಳಿಯಲು ಅವಕಾಶವಿದೆ. ಸಾರ್ವಜನಿಕರ ಪ್ರಯಾಣಕ್ಕೆ ಇಲ್ಲಿ ಇನ್ನು ಅಗತ್ಯ ಸೌಲಭ್ಯ ಇಲ್ಲ. ಇದನ್ನು ರಾಜ್ಯ ಸರ್ಕಾರ ಎಂಎಸ್‌ಪಿಎಲ್ ಜೊತೆಗೆ ಒಪ್ಪಂದ ಮಾಡಿಕೊಂಡು ಮೇಲ್ದರ್ಜೆಗೇರಿಸಲು ಬೇಕಿರುವ ಸಕಲ ಸೌಕರ್ಯ ಕಲ್ಪಿಸಬೇಕಾಗುತ್ತದೆ. ಇಲ್ಲಿ ಅನುದಾನ ವಿನಿಯೋಗಿಸಲು ರಾಜ್ಯವೂ ಮನಸ್ಸು ಮಾಡುತ್ತಿಲ್ಲ.
ಉಡಾನ್ ಯೋಜನೆಗೆ ಏನೆಲ್ಲ ಬೇಕು?: ಒಂದು ವೇಳೆ ಎಂಎಸ್‌ಪಿಎಲ್‌ನಲ್ಲಿ ಉಡಾನ್ ಯೋಜನೆ ಆರಂಭಿಸಿದ್ದೇ ಆದರೆ ಪಾರ್ಕಿಂಗ್ ವ್ಯವಸ್ಥೆ, ಅಗತ್ಯ ಸಿಬ್ಬಂದಿ ಬೇಕು. ಲಘು ವಿಮಾನದಿಂದ ಮಧ್ಯಮ ಗಾತ್ರದ ವಿಮಾನಗಳು ಇಲ್ಲಿ ಹಾರಾಟ ನಡೆಸಲಿವೆ. ಅದಕ್ಕೆ ಹೆಚ್ಚುವರಿ ರನ್‌ವೇಗೆ ಭೂಮಿ ಸ್ವಾಧಿಧೀನ ಮಾಡಿಕೊಳ್ಳಬೇಕು. ವಿಮಾನಗಳ ಹಾರಾಟದ ಸಂಖ್ಯೆ ಹೆಚ್ಚಾದಂತೆ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಭದ್ರತೆಗೆ ಬೇಕಿರುವ ಸಾಮಗ್ರಿಗಳನ್ನೂ ಪೂರೈಸಬೇಕಿದೆ. ಪ್ರಯಾಣಿಕರು ಬಂದು ತೆರಳುವವರೆಗೂ ಅವರಿಗೆ ಸೇವೆ ಕೊಡುವ ಅಗತ್ಯವಿದೆ. ಪೊಲೀಸ್ ಭದ್ರತಾ ವ್ಯವಸ್ಥೆ, ಶ್ವಾನದಳ, ವೈದ್ಯರ ಸೇವೆ, ಜಾಗೃತ ದಳ, ಅಗ್ನಿಶಾಮಕ ತಂಡ, ತುರ್ತು ಸೇವಾ ಘಟಕ, ಔಷಧ ಸೌಲಭ್ಯ, ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿ, ಸ್ನಾನಗೃಹ, ಶೌಚಗೃಹ, ಸೆಕ್ಯೂರಿಟಿ ಚೆಕ್ ಏರಿಯಾ, ಬ್ಯಾಗ್‌ಗಳ ತಪಾಸಣಾ ವಿಭಾಗ, ವಾಹನಗಳ ಒಳ ಹಾಗೂ ಹೊರ ಹೋಗುವ ಚೆಕ್‌ಪೋಸ್ಟ್ ನಿರ್ಮಾಣ ಮಾಡಲು ಅಗತ್ಯ ಸೌಕರ್ಯ ಬೇಕಿದೆ. ಈ ಎಲ್ಲ ನೂರೆಂಟು ನಿಯಮಗಳಿಗೆ ಒಪ್ಪಂದ ಮಾಡಿಕೊಂಡರೆ ಮಾತ್ರ ಉಡಾನ್ ಹಾರಾಟ ನಡೆಸಲಿದೆ.
ಒಟ್ಟಿನಲ್ಲಿ ಹಿಂದುಳಿದ ಭಾಗಕ್ಕೆ ಉಡಾನ್ ಯೋಜನೆ ಘೋಷಣೆಯಾಗಿದ್ದು, ಈ ಭಾಗದ ಜನರಿಗೆ ಖುಷಿ ತಂದಿತ್ತು. ಇಲ್ಲಿಯಿಂದಲೇ ನೇರವಾಗಿ ರಾಜ್ಯ, ದೇಶದಲ್ಲಿ ಸಂಚಾರಕ್ಕೆ ಅನುವಾಗಲಿದೆ ಎಂದು ಜನರು ಭಾವಿಸಿದ್ದರು. ಆದರೆ ಇನ್ನೂ ಹೊಯ್ದಾಟದಿಂದಾಗಿ ಜನರು ಉಡಾನ್ ಬಗ್ಗೆ ಕನಸು ಕಾಣುವಂತಾಗುತ್ತಿದೆ.
ಕೊಪ್ಪಳ ಜಿಲ್ಲೆಗೂ ಉಡಾನ್ ಯೋಜನೆಯನ್ನು ಘೋಷಿಸಿದೆ. ರಾಜ್ಯ ಸರ್ಕಾರ ಇಲ್ಲಿನ ಎಂಎಸ್‌ಪಿಎಲ್ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಬೇಕಿದೆ. ರಾಜ್ಯ ಹಾಗೂ ಕೇಂದ್ರದ ಸಹಭಾಗಿತ್ವದಲ್ಲಿ ಉಡಾನ್ ಅಭಿವೃದ್ಧಿ ಮಾಡಬೇಕಿದೆ. ಸ್ಥಳೀಯ ಎಂಎಸ್‌ಪಿಎಲ್ ಕಂಪನಿ ಇನ್ನೂ ಒಪ್ಪಿಗೆ ಸೂಚಿಸಿಲ್ಲ. ರಾಜ್ಯ ಸರ್ಕಾರಕ್ಕೂ ಈ ಕುರಿತು ಮನವಿ ಮಾಡಿದ್ದೇವೆ.
ಸಂಗಣ್ಣ ಕರಡಿ, ಸಂಸದ
ದತ್ತು ಕಮ್ಮಾರ