ಕೊಪ್ಪಳ: ತುಂಗಭದ್ರಾ ನದಿಯ ನೀರಿನಿಂದ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ 550 ಜನರನ್ನ ಭಾರತೀಯ ವಾಯು ಪಡೆ ಸುರಕ್ಷಿತವಾಗಿ ರಕ್ಷಣೆ ಮಾಡಿದೆ. ಹಗಲು-ರಾತ್ರಿ ಎನ್ನದೇ ನಿದ್ದೆಗೆಟ್ಟಿದ್ದ ಕೊಪ್ಪಳ ಜಿಲ್ಲಾಡಳಿತ ವಿದೇಶಿಗರು ಸೇರಿ ಭಾರತೀಯ ಪ್ರವಾಸಿಗರನ್ನು ಅವರ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.
ತುಂಗಭದ್ರ ನದಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಡ್ಯಾಂನಿಂದ 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ನದಿ ಪಾತ್ರದ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿತ್ತು. ಹಂಪಿ ಸೇರಿ ಇತರೆ ಸ್ಥಳಗಳ ವೀಕ್ಷಣೆಗೆ ಬಂದಿದ್ದ ವಿದೇಶಿಗರು ಸೇರಿ ಸ್ವದೇಶಿಯು ವಿರುಪಾಪುರ ಗಡ್ಡೆಯಲ್ಲಿ ಸಿಲುಕಿ ಸಂಕಷ್ಟ ಎದುರಿಸಿದ್ದರು. ನಮ್ಮನ್ನ ರಕ್ಷಣೆ ಮಾಡುವಂತೆ ಜಿಲ್ಲಾಡಳಿತದ ಮೋರೆಯಿಟ್ಟ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಡಳಿತ ಎನ್‌ಡಿಆರ್‌ಎಫ್, ಕಾಪ್ಟರ್ ಮೂಲಕ 314 ಜನರನ್ನು ರಕ್ಷಣೆ ಮಾಡಿತ್ತು. ಮೊದಲ ದಿನವೇ 27 ವಿದೇಶಿಗರನ್ನು ರಕ್ಷಿಸಿತ್ತು.
ಇನ್ನೂ ಮಂಗಳವಾರ ಬೆಳಗ್ಗೆ 8:30ಕ್ಕೆ ಕಾರ್ಯಾಚರಣೆ ಆರಂಭಿಸಿದ್ದ ಭಾರತೀಯ ವಾಯು ಪಡೆ ತಂಡವು ವಿರುಪಾಪುರ ಗಡ್ಡದ ಸ್ಥಳಕ್ಕೆ ಆಗಮಿಸಿ ಗುಡ್ಡದ ಮೇಲೆಯೇ ಕಾಪ್ಟರ್ ಇಳಿಸಿ ಹಂತ-ಹಂತವಾಗಿ ಎಲ್ಲರನ್ನೂ ರಕ್ಷಣೆ ಮಾಡಿದರು. ಪ್ರವಾಸಿಗರು ಕಾಪ್ಟರ್‌ನಲ್ಲಿ ತೆರಳಲು ಗೊಂದಲ ಉಂಟಾಗಬಾರದೆಂದು ಎರಡನೇ ದಿನದಂದು ಪ್ರತಿಯೊಬ್ಬರಿಗೂ ಟೋಕನ್ ಸಿಸ್ಟರ್ ಮಾಡಿ ಕಾಪ್ಟರ್‌ನಲ್ಲಿ ಕಳುಹಿಸಲಾಯಿತು.
ಅಧಿಕಾರಿ ವರ್ಗ ರಾತ್ರಿ ವಾಸ್ತವ್ಯ: ಎಸಿ ಸಿ.ಡಿ.ಗೀತಾ, ಗಂಗಾವತಿ ಪೊಲೀಸ್ ತುಕುಡಿ ಸೋಮವಾರ ರಾತ್ರಿ ವಿರುಪಾಪುರ ಗಡ್ಡೆಯಲ್ಲೇ ವಾಸ್ತವ್ಯ ಮಾಡಿ ಪ್ರವಾಸಿಗರ ಯೋಗ ಕ್ಷೇಮ ವಿಚಾರ ಮಾಡಿತು. ಅದಕ್ಕೆ ತಕ್ಕಂತೆ ಉಪಾಹಾರ, ಊಟದ ವ್ಯವಸ್ಥೆಯನ್ನೂ ಮಾಡಿತು. ಬೆಳಗ್ಗೆ ಕಾಪ್ಟರ್ ಸಹಾಯದ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡುವ ಕಾರ್ಯ ಆರಂಭವಾಯಿತು. ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲರನ್ನೂ ಕಾಪ್ಟರ್ ತಂಡವು ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ರವಾನೆ ಮಾಡಿ ಸುರಕ್ಷಿತವಾಗಿ ತಲುಪಿಸಿತು. ಎರಡು ದಿನಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ 27 ವಿದೇಶಿಗರು ಸೇರಿದಂತೆ 550 ಭಾರತೀಯ ಪ್ರವಾಸಿಗರು, ಸ್ಥಳೀಯ ನಿವಾಸಿಗಳನ್ನು ಜಿಂದಾಲ್ ನಿಲ್ದಾಣಕ್ಕೆ ಕರೆ ತಂದು ಅವರು ತಲುಪುವ ಸ್ಥಳಕ್ಕೆ ಅನುವು ಮಾಡಿಕೊಟ್ಟಿತು.
ಡಿಸಿ ಸುನೀಲ್ ಕುಮಾರ, ಎಸ್ಪಿ ರೇಣುಕಾ ಸುಕುಮಾರ ಅವರು ಹಗಲು-ರಾತ್ರಿ ಎನ್ನದೇ ನಿದ್ದೆಗೆಟ್ಟು ಪ್ರವಾಸಿಗರ ರಕ್ಷಣೆಗೆ ಕಟಿಬದ್ಧವಾಗಿ ನಿಂತಿದ್ದು ಪ್ರವಾಸಿಗರ ಮೆಚ್ಚುಗೆಗೆ ಕಾರಣವಾಯಿತು. ಜಿಲ್ಲಾಡಳಿತವು ನಮಗೆ ಸಹಕಾರ ನೀಡದ್ದಕ್ಕೆ ನಾವು ಅತಿ ಬೇಗವಾಗಿ ಕಾಪ್ಟರ್ ಮೂಲಕ ಹೊರಗೆ ಬರಲು ಸಾಧ್ಯವಾಯಿತು ಎಂದು ಸಂಕಷ್ಟದಿಂದ ಸಿಲುಕಿದವರು ಜಿಲ್ಲಾಡಳಿತಕ್ಕೆ ಧನ್ಯತಾ ಭಾವ ಅರ್ಪಿಸಿದರು.