ಕೊಪ್ಪಳ: ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಹಗರಣಗಳಲ್ಲಿ ಸಿಲುಕಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡ ಲೂಟಿ ಮಾಡಿದೆ. ಮೂಡಾ ಹಗರಣ ರಾಜ್ಯದಲ್ಲಿ ಸದ್ದು ಮಾಡಿದೆ. ಸಿಎಂ ಪತ್ನಿ ಹೆಸರಲ್ಲಿ 3.16 ಎಕರೆ ಜಮೀನು ಇತ್ತು. ಅದರ ಬದಲಿ ಅವರಿಗೆ 14 ನಿವೇಶನ ಕೊಟ್ಟಿದೆ. ಅಲ್ಲಿ ನಿವೇಶನದ ಕಬಳಿಕೆಯಾಗಿವೆ. ಸಿಎಂ ಸಮಜಾಯಿಸಿ ಕೊಡುವ ಕೆಲಸ ಮಾಡಿದ್ದಾರೆ. ಮುಡಾದಲ್ಲಿ ಉದ್ದೇಶ ಪೂರ್ವಕವಾಗಿ ಈ ಹಗರಣ ನಡೆದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿ ನಿವೇಶನ ಹಂಚಿಕೆಯಲ್ಲಿ ಹರಾಜು ಮಾಡಬೇಕು. ಸಿಎಂ ಪತ್ನಿಗೆ ನೇರವಾಗಿ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಸಿಎಂ ಪತ್ನಿ ಕೃಷಿ ಭೂಮಿಯನ್ನು ಎಂದು ಅಕ್ರಮ ಪಡೆದಿದ್ದಾರೆ. 3.16 ಎಕರೆ ಬದಲಿಗೆ 2 ನಿವೇಶನ ಕೊಡಬೇಕು. ಆದರೆ ನಿಯಮ ಬಾಹಿರವಾಗಿ ನಿವೇಶನ ಕೊಡಲಾಗಿದೆ. ಜನ ಸಾಮಾನ್ಯರಿಗೆ ಅಲ್ಲಿ ನಿವೇಶನ ಕೊಟ್ಟಿಲ್ಲ ಎಂದರು.
ಹಗರಣದ ಬಳಿಕ ಸಚಿವ ಭೈರತಿ ಸುರೇಶ ಅವರು ಅಲ್ಲಿನ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಅನೇಕ ಕಡತಗಳು ಅಲ್ಲಿ ಸಿಗುತ್ತಿಲ್ಲ. ಇದು ನ್ಯಾಯಾಂಗ ತನಿಖೆ ಆದರೆ ನ್ಯಾಯ ಸಿಗಲಿದೆ. ಸಿಎಂ ಹಾಗೂ ಭೈರತಿ ಸುರೇಶ ರಾಜಿನಾಮೆ ಕೊಡಬೇಕು. ನ್ಯಾಯಾಂಗ ಅಥವಾ ಸಿಬಿಐಗೆ ಕೊಡಲಿ. ಎಸ್ಐಟಿ ತನಿಖೆಯಲ್ಲಿ ಗಂಭೀರತೆ ಇಲ್ಲ. ಎಸ್ಐಟಿ ತುಂಬಾ ನಿಧಾನವಾಗಿ ತನಿಖೆ ಮಾಡುತ್ತಿದೆ ಎಂದರು.
ಹಗರಣಗಳ ಕುರಿತು ಮುಡಾ ಮುಂದೆ ಜು.12 ರಂದು ದೊಡ್ಡ ಹೋರಾಟ ಮಾಡಲಿದ್ದೇವೆ. ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯಾದ್ಯಂತ ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಬಸವರಾಜ ದಡೆಸಗೂರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ, ಪ್ರಮುಖ ಪ್ರಮೋದ, ಸೋಮಶೇಖರ್ ಗೌಡ್ರು ಉಪಸ್ಥಿತಿ ಇದ್ದರು.