ಕೊಪ್ಪಳ: ಲಕ್ಷಾಂತರ ಜನರ ಜೀವನಾಡಿ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಎಡರು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರಕ್ಕೆ ಎಲ್ಲ ಗೇಟ್‌ಗಳಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ರವಿವಾರ ಜಲಾಶಯದ ಸೊಬಗು ಹೆಚ್ಚಿದ್ದು, ಜಲಾಶಯ ನೋಡಲು ಬರುವವರ ಸಂಖ್ಯೆ ಹೆಚ್ಚಿದೆ. ಜನ ಡ್ಯಾಂ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಹಲವು ವರ್ಷಗಳಿಂದ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿಯಿಂದಾಗಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿರಲಿಲ್ಲ. ಕಳೆದ ವರ್ಷ ಶಿವಮೊಗ್ಗ ಹಾಗೂ ಮಲೆನಾಡು ಭಾಗದಲ್ಲಿ ಸುರಿದ ಉತ್ತಮ ಮಳೆಯಿಂದ ಡ್ಯಾಂ ಭರ್ತಿಯಾಗಿತ್ತು. ಈ ವರ್ಷವೂ ಉತ್ತಮ ಮಳೆ ಸುರಿದಿದ್ದು, ಡ್ಯಾಂ ಭರ್ತಿಯಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತ ಸಮೂಹದ ಖುಷಿಗೆ ಪಾರವೇ ಇಲ್ಲವೇ ಎನ್ನುವಂತವಾಗಿದೆ.
ನದಿಗೆ ಹರಿ ಬಿಟ್ಟಿದ್ದರಿಂದ ನದಿ ತಟದಲ್ಲಿನ ಕೆಲವು ಪ್ರದೇಶಗಳಿಗೆ ನೀರು ನುಗ್ಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ನದಿ ಪಾತ್ರದಲ್ಲಿನ ಮನೆಗಳಿಗೆ ನೀರು ನುಗ್ಗಿ ಅಸ್ತವ್ಯಸ್ಥ ಮಾಡಿದೆ.
88 ಟಿಎಂಸಿ ನೀರು: ತುಂಗಭದ್ರಾ ಜಲಾಶಯವು 133 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದರೂ ಜಲಾಶಯದಲ್ಲಿ 33 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದೆ. ಹೀಗಾಗಿ ಡ್ಯಾಂನ ಸಂಗ್ರಹಣಾ ಸಾಮರ್ಥ್ಯ 100 ಟಿಎಂಸಿಗೆ ತಲುಪಿದೆ. ರವಿವಾರ ಜಲಾಶಯದಲ್ಲಿ 88.61 ನೀರು ಸಂಗ್ರಹವಾಗಿದೆ. ಜಲಾಶಯ ಸಂಪೂರ್ಣ ಭರ್ತಿಯಾಗುವುದು ಖಚಿತ. 2,10,282 ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದೆ. ಈ ವರ್ಷವೂ ರೈತರಿಗೆ ಎರಡನೇ ಬೆಳೆಗೆ ನೀರು ಸಿಗಲಿ ಎನ್ನುವ ಒತ್ತಾಯ ರೈತರ ಒತ್ತಾಯ.
ಇನ್ನೂ ರವಿವಾರ ನೀರಿನ ಭೋರ್ಗರೆತ ಹಾಗೂ ಜಲಾಶಯದ ಸೊಬಗನ್ನು ನೋಡಲು ಕುಟುಂಬ ಸಮೇತ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಯುವಕರು, ಮಕ್ಕಳು ಸೇರಿದಂತೆ ಹಿರಿಯರು ಡ್ಯಾಂ ಮುಂಭಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಲ್ಲಿ ತಲ್ಲೀನರಾಗಿದ್ದರು. ಹೆದ್ದಾರಿ ಪಕ್ಕದಲ್ಲಿ ವಾಹನ ಓಡಾಡುತ್ತಿದ್ದರೂ ಸೆಲ್ಫಿ ಗೀಳು ನಿಂತಿರಲಿಲ್ಲ.
ಕೆರೆ ತುಂಬಿಸಿ: ಜಿಲ್ಲೆ 16 ವರ್ಷದಲ್ಲಿ 12 ವರ್ಷ ಬರವನ್ನೇ ಕಂಡಿದ್ದು, ಗುಳೆ ಹೋಗುವುದು ತಪ್ಪಿಲ್ಲ. ತುಂಗಭದ್ರಾ ಜಲಾಶಯದಲ್ಲಿ ನೀರನ್ನು ಹಿಡಿದಿಡಲು ಆಗುತ್ತಿಲ್ಲ. ಹೂಳೆತ್ತಲು ಸರ್ಕಾರ ಚಿಂತಿಸುತ್ತಿಲ್ಲ. ಕನಿಷ್ಟ ಜಿಲ್ಲೆಯಲ್ಲಿನ ಕೆರೆಗಳನ್ನಾದರು ತುಂಬಿಸಬೇಕಿದೆ.