ಕೊಪ್ಪಳ: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಲು ಮುಂದಾಗಿದ್ದು, ನಾವು ರಾಜ್ಯಪಾಲರ ವಿರುದ್ದ ಅಭಿಯಾನ ಮಾಡಬೇಕಾಗುತ್ತದೆ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ (Shivaraj Tangadagi) ಎಚ್ಚರಿಕೆ ನೀಡಿದರು.
ಕನಕಗಿರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಣಿಸಿದಂತೆ ಕುಣಿಯುವ ರಾಜ್ಯಪಾಲರು ಈ ರಾಜ್ಯದಲ್ಲಿ ಇದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಚಾರ. ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ಈ ಮೂಲಕ ರಾಜ್ಯಪಾಲರರು ತಮ್ಮ ಹುದ್ದೆಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರು ಮೊದಲು ರಾಜ್ಯ ಬಿಟ್ಟು ಹೋಗಬೇಕು. ಇಲ್ಲದಿದ್ದರೆ ರಾಜ್ಯಪಾಲರ ವಿರುದ್ಧ ಅಭಿಯಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರದಿಂದ ಸಂವಿಧಾನದ ಕಗ್ಗೊಲೆ ನಡೆಯುತ್ತಿದ್ದು, ಸಂವಿಧಾನವನ್ನು ಉಳಿಸುವಂತಹ ಕೆಲಸ ಮಾಡುತ್ತಿಲ್ಲ. ಬದಲಿಗೆ ಅಡ್ಡ ದಾರಿ ಹಿಡಿದು ತೊಂದರೆ ಕೊಡುವ ಕೆಲಸ ಆರಂಭಿಸಿದೆ. ರಾಜ್ಯದಲ್ಲಿ 135 ಶಾಸಕರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಹೊಂದಿಲ್ಲ. ಬಿಜೆಪಿ ನಾಯಕರು ಮುಡಾ ವಿಚಾರದಲ್ಲಿ ಅನಗತ್ಯವಾಗಿ ಸಿಎಂ ಹೆಸರಿಗೆ ಕಪ್ಪು ಚುಕ್ಕೆ ತರಲು ಯತ್ನಿಸುತ್ತಿದೆ. ಪಾದಯಾತ್ರೆ ಹೆಸರಿನಲ್ಲಿ ಸಿಎಂ ಅವರನ್ನು ಕುಗ್ಗಿಸುವ ಬಿಜೆಪಿಯವರ ಪ್ರಯತ್ನ ಫಲಿಸಲ್ಲ. ಈ ಕುತಂತ್ರದಲ್ಲಿ ಬಿಜೆಪಿ ಎಂದಿಗೂ ಯಶಸ್ಸು ಕಾಣಲ್ಲ ಎಂದರು.
ದೇಶದ ಕಾನೂನಿನ ಮೇಲೆ ನಮಗೆ ಅಪಾರವಾದ ವಿಶ್ವಾಸವಿದೆ. ಈಗಾಗಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಬಂಧಿಸಿದೆ. ಕಾಂಗ್ರೆಸ್ ದೇಶವನ್ನು ಆಳುವುದರ ಜೊತೆಗೆ ಬ್ರಿಟಿಷರನ್ನ ದೇಶದಿಂದ ಓಡಿಸುವ ಕೆಲಸ ಮಾಡಿದೆ. ಬಿಜೆಪಿಯವರು ನಿನ್ನೆ- ಮೊನ್ನೆ ಬಂದು 10 ವರ್ಷದಲ್ಲಿ ದೇಶ ಅಭಿವೃದ್ಧಿ ಪಡಿಸಿದ್ದೇವೆ ಎಂದು ಬೂಟಾಟಿಕೆ ಮಾತನಾಡುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಅಭಿವೃದ್ಧಿಯನ್ನು ಮಾಡಿ ತೋರಿಸಲಿ ಎಂದು ಸವಾಲೆಸೆದರು.
ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲಿಕ್ಕೆ ಬಿಜೆಪಿ ಅವರಿಗೆ ಯೋಗ್ಯತೆ ಇಲ್ಲ. ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಬಿಜೆಪಿ ಅವರ ಕೊಡುಗೆ ಏನು? ದಲಿತರಿಗೆ ಬಿಜೆಪಿಯವರು ಯಾವ ಯೋಜನೆ ನೀಡಿದ್ದಾರೆ? ಭೂಮಿ ಇಲ್ಲದವರಿಗೆ ಭೂಮಿ ನೀಡಿದ್ದು, ಕಾಂಗ್ರೆಸ್ ಪಕ್ಷ. ಸಂವಿಧಾನವನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಈ ದೇಶದಲ್ಲಿ ಸ್ವತಂತ್ರ ಸಿಕ್ಕಾಗ ಒಂದು ಸೂಜಿಯನ್ನು ತಯಾರಿಸುವ ಕಾರ್ಖಾನೆ ಇರಲಿಲ್ಲ. ಆದರೆ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಸರ್ಕಾರ ಕಟ್ಟಿಸಿದ ಶಾಲಾ ಕಾಲೇಜು, ಆಸ್ಪತ್ರೆಗಳನ್ನು ಬಿಜೆಪಿಯವರು ತಮ್ಮ ಕಾಲದ್ದು ಎಂದು ಹೇಳಿ ಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ಧಾಳಿ ನಡೆಸಿದರು.