Advertisement

ಕನ್ನಡ ಬರಿ ಭಾಷೆಯಲ್ಲ ನಮ್ಮ ಸಂಸ್ಕೃತಿ

01:26 PM Aug 01, 2019 | Naveen |

ಕೊಪ್ಪಳ: ಕನ್ನಡವನ್ನು ನಾವು ಒಂದು ಭಾಷೆಯನ್ನಾಗಿ ನೋಡದೇ ವಿವಿಧ ಆಯಾಮದಲ್ಲಿ ನೋಡಬೇಕಿದೆ. ಎಲ್ಲ ಸೀಮಿತಗಳನ್ನು ಮೀರಿಯೂ ನಾವು ವಿಶ್ವ ಪ್ರಜ್ಞೆಯನ್ನಾಗಿ ಕನ್ನಡವನ್ನು ಬೆಳೆಸಬೇಕಿದೆ ಎಂದು ರಾಯಚೂರಿನ ಹಿರಿಯ ಸಾಹಿತಿ ಡಾ| ಜಯಲಕ್ಷ್ಮೀ ಮಂಗಳಮೂರ್ತಿ ಹೇಳಿದರು.

Advertisement

ತಾಲೂಕಿನ ಶಿವಪುರ ಗ್ರಾಮದಲ್ಲಿ ಬುಧವಾರ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ 8ನೇ ಕೊಪ್ಪಳ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೇರು ದಿಗ್ಗಜರು ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಕನ್ನಡ ಸಾಹಿತ್ಯವು ಸಮುದ್ರವಿದ್ದಂತೆ. ಇಲ್ಲಿ ಸಾಹಿತಿಯೇ ಸಾಮ್ರಾಟ. ಸಾಹಿತ್ಯ ನಮಗೆ ಅರಿವಿಲ್ಲದಂತೆ ಸಂತೋಷ ನೀಡುತ್ತದೆ. ಒಬ್ಬ ಸಾಹಿತಿಗೆ ಸಾವಿರಾರು ಜನರನ್ನು ಬಡಿದೆಬ್ಬಿಸುವ ಶಕ್ತಿಯಿದೆ. ಜೊತೆಗೆ ಸಾವಿರಾರು ಜನರನ್ನು ಶಾಂತಗೊಳಿಸುವ ಶಕ್ತಿಯೂ ಇದೆ.

ಅಂತಹ ಸಮೃದ್ಧತೆ ಹೊಂದಿದ ನೆಲದಲ್ಲಿ ಜನಿಸಿದ ನಾವೇ ಪುಣ್ಯವಂತರು. ಅದರಲ್ಲೂ ತಿರುಳ್‌ಗನ್ನಡ ನೆಲದಲ್ಲಿ ಸಾಹಿತ್ಯದ ಕೃಷಿ ಅಪಾರವಾಗಿದೆ. ಸಾಹಿತ್ಯ ಎಂದಾಕ್ಷಣ ಕೇವಲ ಭಾಷೆ ಎಂದು ತಿಳಿಯುವುದು ಮುಖ್ಯವಲ್ಲ. ಇಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಸಂತ, ಶರಣರ ಹಾಗೂ ಸೂಫಿಗಳ ಸಂದೇಶಗಳಿವೆ. ಇದರಲ್ಲಿ ಹಳ್ಳಿಯ ಜನರ ಜಾನಪದ ಸೊಗಡು ಅಡಗಿದೆ. ಸಂಸ್ಕೃತಿ ಹಾಸು ಹೊಕ್ಕಾಗಿದೆ. ಇಂತಹ ಸಾಹಿತ್ಯದ ಕನ್ನಡವನ್ನು ನಾವು ವಿಶ್ವ ಮಟ್ಟದಲ್ಲಿ ಕೊಂಡೊಯ್ಯಬೇಕಿದೆ ಎಂದರು.

ಆಧುನಿಕ ಜಗತ್ತಿನಲ್ಲಿ ಎಲ್ಲ ಸೀಮಿತಗಳನ್ನು ಮೀರಿ ಮುಂದೆ ಬರಬೇಕಿದೆ. ನಮ್ಮಲ್ಲಿ ಸಾಮರಸ್ಯ ಭಾವನೆ ಮೂಡಬೇಕಿದೆ. ಇಲ್ಲಿ ಮಾನವ ಪ್ರೇಮ, ಮಾನವೀಯತೆ, ಒಪ್ಪಿ ಅಪ್ಪಿಕೊಂಡು ಬಾಳಬೇಕು. ಇಂತಹ ಪ್ರಜ್ಞೆಯು ಜಾಗತಿಕ ಪ್ರಜ್ಞೆಯಾಗಬೇಕಿದೆ ಎಂದರಲ್ಲದೆ, ಇಂತಹ ಪುಣ್ಯದ ನೆಲದಲ್ಲಿ ರನ್ನ, ಪಂಪರಂತಹ ಮಹಾ ಕವಿಗಳು ಇದೊಂದು ಅಮೃತ, ಸಮೃದ್ಧಿ ನೆಲವೀಡು ಎಂದೆಲ್ಲ ವರ್ಣಿಸಿ ಕೊಂಡಾಡಿದ್ದಾರೆ. ಕನ್ನಡ ಸಾಹಿತ್ಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಇಂದೂ ಅಚ್ಚಳಿಯದೆ ಉಳಿದಿದೆ. ಸಾಹಿತ್ಯ ಜೀವನ ಕಲಿಸಿ ಕೊಟ್ಟಿದೆ. ದೊಡ್ಡ ಗುರುಲೋಕವನ್ನೇ ಸೃಷ್ಟಿ ಮಾಡಿದೆ. ಇನ್ನೂ ಗ್ರಾಮೀಣ ಪ್ರದೇಶದ ಜನರಲ್ಲಿ ಅದ್ಭುತ ಕಲೆಯಿರುತ್ತದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಹೆಜ್ಜೆ ಹೆಜ್ಜೆಗೂ ಅಂತಹ ವ್ಯಕ್ತಿಗಳು ನಮಗೆ ಕಾಣಿಸುತ್ತಾರೆ. ಬಯಲಾಟ, ಕೋಲಾಟ, ಜಾನಪದ ಸೇರಿ ಇತರೆ ಕಲೆ ಇಂದು ಸಾಹಿತ್ಯದ ಸಿಂಹಾಸನವಾಗಿವೆ. ಸಾಹಿತ್ಯ ನಮಗೆ ಸತ್ಯ ದರ್ಶನ ಮಾಡುತ್ತಿದೆ. ದೇಹಕ್ಕೆ ಆಹಾರ ಹೇಗೆ ಮುಖ್ಯವೋ ಹಾಗೆ ಜ್ಞಾನಕ್ಕೆ ಸಾಹಿತ್ಯವು ಅಷ್ಟೆ ಮುಖ್ಯ. ಸಾಹಿತ್ಯ ತಿಳಿಯದ ನಾವು ಮನುಷ್ಯರೇ ಅಲ್ಲ ಎಂದರು.

Advertisement

ನಡೆ ನುಡಿಯನ್ನು ಕಲಿಸಿ ಕೊಡುವುದೇ ಸಾಹಿತ್ಯವಾಗಿದೆ. ಇಂದು ಜಗತ್ತಿನಾದ್ಯಂತ ಮಾನವ ಗುಣವನ್ನು ಕಲಿಸಿ ಕೊಡುತ್ತಿದೆ. ಅಂತಹ ಸಾಹಿತ್ಯವನ್ನು ನಾವೆಲ್ಲರು ರಕ್ಷಣೆ ಮಾಡಬೇಕು. ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ಸಂಘಟಿತವಾದ ಮನಸ್ಸುಗಳಾಗಿ ಸಾಹಿತ್ಯ ಕಟ್ಟಬೇಕಿದೆ.

ರಾಜ್ಯ ಕಸಾಪ ಸಂಘ-ಸಂಸ್ಥೆಗಳ ಪ್ರತಿನಿಧಿ ಡಾ| ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಕಸಾಪ ಕನ್ನಡದ ಕಹಳೆ ಮೊಳಗಿಸುತ್ತಿದೆ. ಡಾ| ಮನು ಬಳಿಗಾರ ಹಲವು ಸಾಹಿತ್ಯ ಸಮ್ಮೇಳನ ಮಾಡಿ ಗಮನ ಸೆಳೆದಿದ್ದಾರೆ. ಕೋಲಾರದಲ್ಲಿ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದಾರೆ. ನಾಡುನುಡಿ ಸೇವೆ ಮಾಡಲು, ಗ್ರಾಮೀಣ ಜನರ ಬಳಿ ಕನ್ನಡ ಸಾಹಿತ್ಯ ಕೊಂಡೊಯ್ಯಲು ಹಳ್ಳಿ ಹಳ್ಳಿಯಲ್ಲೂ ಸಮ್ಮೇಳನ ಮಾಡುತ್ತಿದ್ದೇವೆ. ಗ್ರಾಮೀಣ ಜನರ ಪ್ರತಿಭೆ ಗುರುತಿಸಲು ಈ ಕಾರ್ಯ ಮಾಡಿದ್ದೇವೆ ಎಂದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಎಸ್‌.ಎಂ. ಕಂಬಾಳಿಮಠ ಮಾತನಾಡಿದರು. ಸಮ್ಮೇಳನದಲ್ಲಿ ನಗರಗಡ್ಡಿ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ, ಸಮ್ಮೇಳನದ ಸರ್ವಾಧ್ಯಕ್ಷ ಈಶ್ವರ ಹತ್ತಿ, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ತಾಲೂಕು ಅಧ್ಯಕ್ಷ ಚನ್ನಬಸಪ್ಪ ಕಡ್ಡಿಪುಡಿ, ಜಿಪಂ ಸದಸ್ಯೆ ಗಾಯತ್ರಿ ವೆಂಕಟೇಶ, ಜಡಿಯಪ್ಪ ಬಂಗಾಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next