ಕೊಪ್ಪಳ: ನಗರದ ಗವಿಸಿದ್ದೇಶ್ವರ ಮಹಾ ರಥೋತ್ಸವ ಸಾಗಿದ ಮರುದಿನ ರವಿವಾರ ಬೆಳಗ್ಗೆ ಬಳಗಾನೂರು ಶ್ರೀ ಶಿವಶಾಂತವೀರ ಶರಣರು ಗವಿಸಿದ್ದೇಶ್ವರರನ್ನು ನೆನೆಯುತ್ತ, ಮಠದ ಮುಖ್ಯದ್ವಾರದಿಂದ ಕೈಲಾಸ ಮಂಟಪದವರೆಗೂ ದೀರ್ಘ ದಂಡ ನಮಸ್ಕಾರ ಹಾಕುತ್ತಾ ಗುರುನಾಮ ಸ್ಮರಣೆ ಮಾಡಿದರು.
ಪ್ರತಿ ವರ್ಷದ ಸಂಪ್ರದಾಯದಂತೆ ಮಹಾ ರಥೋತ್ಸವ ಸಾಗಿದ ಬಳಿಕ ಬಳಗಾನೂರಿನ ಶರಣರು, ಗುರು ಗವಿಸಿದ್ದೇಶ ಎಂದು ನಾಮ ಸ್ಮರಣೆ ಮಾಡುತ್ತಲೇ ಹೂವಿನ ಹಾಸಿನಲ್ಲಿ ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಈ ಹಿಂದೆ ಚಿಕ್ಕೇನಕೊಪ್ಪದ ಶ್ರೀಚನ್ನವೀರ ಶರಣರು ತಮ್ಮ ಗುರು ಶ್ರೀಮರಿಶಾಂತವೀರ ಶಿವಯೋಗಿಗಳಿಂದ ಚಿನ್ಮಯಾನುಗ್ರಹ ದೀಕ್ಷೆಪಡೆದ ನಂತರ ಅಂದಿನಿಂದ ನಿರಂತರವಾಗಿ ಸುಮಾರು 50 ವರ್ಷಗಳಿಂದ ಗುರು ಶ್ರೀ ಲಿಂ. ಮರಿಶಾಂತವೀರ ಶಿವಯೋಗಿಗಳ ನಾಮ ಸ್ಮರಣೆ ಮಾಡುತ್ತಲೇ ಅವರ ಗದ್ದುಗೆವರೆಗೂ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು.
ಅವರ ಲಿಂಗೈಕ್ಯದ ಬಳಿಕ ಅವರ ಶಿಷ್ಯ ಬಳಗಾನೂರಿನ ಶಿವಶಾಂತವೀರ ಶರಣರು ತಮ್ಮ ಗುರುವಿನ ಪರಂಪರೆಯನ್ನು ಇಂದಿಗೂ ಮುನ್ನಡೆಸಿಕೊಂಡುಬರುತ್ತಿದ್ದಾರೆ. ಪ್ರತಿ ವರ್ಷವೂ ಮಹಾ ರಥೋತ್ಸವ ಸಾಗಿದ ಮರು ದಿನ ಸಂಜೆ ಮಠದ ಮುಖ್ಯದ್ವಾರದಿಂದ ಬಳಗಾನೂರಿನ ಶಿವಶಾಂತವೀರ ಶರಣರು ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು.
ಇದನ್ನೂ ಓದಿ:ಪೋಲಿಯೋ ಪ್ರಪಂಚದಿಂದಲೇ ದೂರಾಗಲಿ
ಅವರ ಹಿಂದೆಯೇ ಸಾವಿರಾರು ಭಕ್ತ ಸಮೂಹವೂ ಮಠದಲ್ಲಿ ದೀರ್ಘದಂಡ ನಮಸ್ಕಾರ ಹಾಕುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಶಿವಶಾಂತವೀರ ಶರಣರು ರವಿವಾರ ಬೆಳಗ್ಗೆ 7 ಗಂಟೆ ಸುಮಾರು ವಾದ್ಯ ಮೇಳದೊಂದಿಗೆ ಹೂವಿನ ಹಾಸಿನಲ್ಲಿ ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಪರಾಕಾಷ್ಠೆ ತೋರಿದರು. ಸಿದ್ಧೇಶ್ವರ ಮೂರ್ತಿ ಮೆರವಣಿಗೆ: ಗವಿಸಿದ್ದೇಶ್ವರ ಮಹಾ ರಥೋತ್ಸವ ಜರುಗಿದ ಮರುದಿನದಂದು ಪ್ರತಿ ವರ್ಷದ ಸಂಪ್ರದಾಯದಂತೆ ಶ್ರೀ ಸಿದ್ದೇಶ್ವರರ ಮೂರ್ತಿ ಮೆರವಣಿಗೆಯು ವಾದ್ಯ ಮೇಳದೊಂದಿಗೆ ಭಕ್ತರ ಮಧ್ಯೆ ರವಿವಾರ ಸಾಂಘವಾಗಿ ನೆರವೇರಿತು. ಸಿದ್ಧೇಶ್ವರ ಮೂರ್ತಿಗೆ ಭಕ್ತಾದಿ ಗಳು ಮಾರ್ಗದುದ್ದಕ್ಕೂ ಹೂವಿನ ಹಾರ, ಬಾಳೆಹಣ್ಣು, ಉತ್ತತ್ತಿ, ಕಲ್ಲುಸಕ್ಕರೆ ಅರ್ಪಿಸಿದರು. ಪಲ್ಲಕ್ಕಿ ಮಹೋತ್ಸವ, ಕಳಸೋತ್ಸವದ ಮೆರವಣಿಗೆಗಳಂತೆ ಈ ಮೆರವಣಿಗೆಯೂ ಸಾಂಘವಾಗಿ ನೆರವೇರಿತು.
ಬಳಿಕ ಸಿದ್ಧೇಶ್ವರ ಮೂರ್ತಿಯನ್ನು ತೊಟ್ಟಿಲಲ್ಲಿ ಮೂಹೂರ್ತಗೊಳಿಸಿ ಗವಿಸಿದ್ಧೇಶ್ವರ ಜೋಗುಳ ಪದಗಳನ್ನು ಮನತುಂಬಿ ಹಾಡಲಾಯಿತು. ಮೆರವಣಿಗೆಯು ಶ್ರೀಮಠದಿಂದ ಸಿದ್ಧೇಶ್ವರ ಸರ್ಕಲ್- ಕವಲೂರು ಓಣಿ, ಭಗತ್ ಸಿಂಗ್ ವೃತ್ತ, ಚನ್ನಮ್ಮ ಸರ್ಕಲ್, ಗವಿಮಠ ರಸ್ತೆಯ ಮಾರ್ಗವಾಗಿ ಶ್ರೀಮಠಕ್ಕೆ ಬಂದು ತಲುಪಿತು.