ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಸ್ನಾತಕೋತ್ತರ ಕೇಂದ್ರ ಮಂಜೂರಾತಿ ಮಾಡಿ ಎನ್ನುವ ಬಹುವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿ ವಿಜಯನಗರ ಶ್ರೀಕೃಷ್ಣ ದೇವರಾಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಿದೆ. ಆದರೆ ನಾಲ್ಕು ವರ್ಷಗಳಿಂದ ಕೇಂದ್ರಕ್ಕೆ ಸ್ವಂತ ನೆಲೆಯಿಲ್ಲ. ಈ ನಡುವೆ 13 ಎಕರೆ ಜಮೀನು ಸಿಕ್ಕಿದ್ದು, ಅನುದಾನದ ಕೊರತೆ ಎದುರಿಸುತ್ತಿದೆ.
Advertisement
ಇಲ್ಲಿನ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕಿದೆ. ಕೊಪ್ಪಳದ ವಿಜಯನಗರ ಶ್ರೀಕೃಷ್ಣ ದೇವರಾಯ ಸ್ನಾತಕೋತ್ತರ ಕೇಂದ್ರದಲ್ಲಿ ಮೊದಲು 7 ವಿಭಾಗಗಳನ್ನು ಆರಂಭಿಸಲಾಗಿತ್ತು. ಆದರೆ ಬೇಡಿಕೆಗೆ ತಕ್ಕಂತೆ ಪ್ರಸ್ತುತ 10 ವಿವಿಧ ವಿಭಾಗಗಳನ್ನು ಆರಂಭ ಮಾಡಲಾಗಿದೆ.
Related Articles
Advertisement
13 ಎಕರೆ ಜಮೀನು ಮಂಜೂರು: ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರ ಶ್ರಮದ ಫಲವಾಗಿ ಜಿಲ್ಲಾ ಕೇಂದ್ರದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾಗಿದೆ. ಇದು 2 ವರ್ಷಗಳಿಂದ ತಾತ್ಕಾಲಿಕ ಕಟ್ಟಡದಲ್ಲೇ ನಡೆಯುತ್ತಿದೆ. ಹಳೇ ಜಿಲ್ಲಾಸ್ಪತ್ರೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಇಲ್ಲ.
ಎಲ್ಲೆಂದರಲ್ಲಿ ತ್ಯಾಜ್ಯವೇ ಕಾಣಿಸುತ್ತಿದೆ. ಅಧ್ಯಯನಕ್ಕೂ ತೊಂದರೆಯಾಗುತ್ತಿದೆ. ಇದೆಲ್ಲವನ್ನು ಅರಿತು ಈ ಹಿಂದೆ ರಾಯರಡ್ಡಿ ಅವರೇ ಮಳೆ ಮಲ್ಲೇಶ್ವರ ದೇವಸ್ಥಾನ ಸಮೀಪದಲ್ಲಿ 13 ಎಕರೆ ಜಮೀನನ್ನು ಸ್ನಾತಕೋತ್ತರ ಕೇಂದ್ರಕ್ಕೆ ಹಸ್ತಾಂತರ ಪ್ರಕ್ರಿಯೆಗೂ ಮುಂದಾಗಿದ್ದರು. ಜಮೀನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹೆಸರಿಗೆ ಹಸ್ತಾಂತರಗೊಂಡಿದೆ.
ಬೇಕಿದೆ 55.83 ಕೋಟಿ: ಮಳೆ ಮಲ್ಲೇಶ್ವರದ ಬಳಿ ಮಂಜೂರಾದ ಜಮೀನಲ್ಲೆ ಕಟ್ಟಡ ನಿರ್ಮಾಣಕ್ಕೆ 55.85 ಕೋಟಿ ರೂ. ಬೇಡಿಕೆಯ ಪ್ರಸ್ತಾವನೆಯನ್ನು ವಿವಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ರಾಜ್ಯದಲ್ಲಿ ತಿಂಗಳಿಗೊಂದು ರಾಜಕೀಯ ವಿದ್ಯಮಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಸರ್ಕಾರ ಯಾವುದೇ ಅನುದಾನ ಮಂಜೂರು ಮಾಡುತ್ತಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರವೂ ಅನುದಾನ ನೀಡಿಲ್ಲ. ಮೈತ್ರಿ ಸರ್ಕಾರವೂ ಅನುದಾನ ನೀಡಲಿಲ್ಲ. ಈಗಿನ ಬಿಜೆಪಿ ಸರ್ಕಾರವೂ ಅನುದಾನ ನೀಡುವ ಬಗ್ಗೆ ಚಕಾರವೆತ್ತಿಲ್ಲ. ಸರ್ಕಾರ ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡಿದರೆ ಮಾತ್ರ ಸ್ನಾತಕೋತ್ತರ ಕೇಂದ್ರದ ಕಟ್ಟಡ ಎದ್ದು ನಿಲ್ಲಲಿದೆ.
ಆತಂಕ: ಈ ಹಿಂದೆ ಜಿಲ್ಲೆಯಲ್ಲಿ ಎರಡು ಸ್ನಾತಕೋತ್ತರ ಕೇಂದ್ರ ಮಂಜೂರಾಗಿವೆ. ಕೊಪ್ಪಳ ಹಾಗೂ ಯಲಬುರ್ಗಾದಲ್ಲಿ ಕೇಂದ್ರ ಆರಂಭವಾಗಿವೆ. ಆದರೆ ಯಲಬುರ್ಗಾ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಮಾಡಲು ಅನುದಾನವೂ ಮಂಜೂರಾಗಿದೆ. ಆದರೆ ಕೊಪ್ಪಳ ಕೇಂದ್ರಕ್ಕೆ ಇಲ್ಲಿವರೆಗೂ ಹಣದ ನೆರವು ಸಿಗದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೊಪ್ಪಳದಲ್ಲಿನ ಕೇಂದ್ರವನ್ನೇ ಬಂದ್ ಮಾಡಿ ಯಲಬುರ್ಗಾದಲ್ಲಿ ಕೇಂದ್ರ ಉಳಿಸಿಕೊಂಡರೇ ಇಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂದು ಶಿಕ್ಷಣ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.