Advertisement

ಮುಂಗಾರು ಹಂಗಾಮಿಗೆ ಭರದ ಸಿದ್ಧತೆ

11:04 AM May 30, 2019 | Naveen |

ದತ್ತು ಕಮ್ಮಾರ
ಕೊಪ್ಪಳ:
ಕಳೆದ ವರ್ಷದ ಬರದ ಭೀಕರತೆಯ ಬಿಸಿಯನ್ನು ನೆನೆಯುತ್ತಲೇ ಜಿಲ್ಲೆಯ ಅನ್ನದಾತ ಈ ವರ್ಷದ ಮುಂಗಾರು ಪೂರ್ವ ಮಳೆಯ ನಿರೀಕ್ಷೆಯಲ್ಲೇ ಭೂಮಿಯನ್ನು ಹಸನ ಮಾಡಿಟ್ಟುಕೊಳ್ಳುತ್ತಿದ್ದಾನೆ. ಇತ್ತ ಕ‌ೃಷಿ ಇಲಾಖೆ ರೈತನಿಗೆ ಬೇಕಿರುವ ಗೊಬ್ಬರ ಹಾಗೂ ಬೀಜಗಳ ಪೂರೈಕೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ತಯಾರಿ ನಡೆಸಿದೆ.

Advertisement

ಹೌದು. ಜಿಲ್ಲೆಯ ಅಲ್ಲಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಯ ಆರ್ಭಟ ಕಾಣುತ್ತಿದೆ. ಪ್ರತಿ ವರ್ಷ ಮಳೆಯ ಅಬ್ಬರ ನೋಡುತ್ತಿರುವ ರೈತ ಖುಷಿಯಿಂದಲೇ ಬಿತ್ತನೆ ಮಾಡುತ್ತಿದ್ದರೆ ಕೊನೆ ಗಳಿಗೆಯಲ್ಲಿ ಮಳೆಯ ಕೊರತೆ ಎದುರಾಗಿ ಬಿತ್ತನೆ ಮಾಡಿದ ಪೈರು ಮೊಳಕೆಯಲ್ಲೇ ಕಮರುತ್ತಿದೆ. ಇದರಿಂದ ಚಿಂತೆಯಲ್ಲಿ ಕಾಲ ಕಳೆಯುತ್ತಿರುವ ಅನ್ನದಾತ ವರುಣ ದೇವನನ್ನೇ ನಂಬಿ ಮತ್ತೆ ಕ‌ೃಷಿ ಬದುಕಿನತ್ತ ಮುಖ ಮಾಡುತ್ತಿದ್ದಾರೆ.

ಬರದ ಬಿಸಿ ಎಷ್ಟೇ ತಟ್ಟಿದರೂ ಭೂಮಿ ನಂಬಿ ಕೆಟ್ಟವರಿಲ್ಲವೋ ಮನುಜ ಎಂಬ ಮಾತಿನಂತೆ ಅನ್ನದಾತ ಪ್ರಸಕ್ತ ಮುಂಗಾರಿನ ಮಳೆಗಳ ನಿರೀಕ್ಷೆಯಲ್ಲಿಯೇ ಭೂಮಿಯನ್ನು ಹದ ಮಾಡಿಟ್ಟುಕೊಳ್ಳುತ್ತಿದ್ದಾನೆ. ಬೇಸಿಗೆಯ ಬಿಸಿಲಿನಲ್ಲಿ ಭೂಮಿಯನ್ನು ಕಾಯಲು ಬಿಟ್ಟು ಮುಂಗಾರು ಪೂರ್ವ ಮಳೆಯಾದ ಬಳಿಕ ಕ‌ೃಷಿ ಚಟುವಟಿಕೆ ಆರಂಭಿಸಿದ್ದಾನೆ.

2,52,500 ಹೆಕ್ಟೇರ್‌ ಬಿತ್ತನೆ ಗುರಿ: ರೈತನ ನಿರೀಕ್ಷೆಗೆ ತಕ್ಕಂತೆ ಕ‌ೃಷಿ ಇಲಾಖೆಯು ಪ್ರತಿ ವರ್ಷ ಬೀಜ, ಗೊಬ್ಬರ ಸೇರಿ ಔಷಧಿ ಸಂಗ್ರಹಕ್ಕೆ ಅಣಿಯಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಮುಂಗಾರು ಹಂಗಾಮಿಗೆ ಜಿಲ್ಲಾದ್ಯಂತ 2,52,500 ಹೆಕ್ಟೇರ್‌ ಪ್ರದೇಶದ ಬಿತ್ತನೆಯ ಗುರಿ ನಿಗದಿ ಪಡಿಸಿದೆ. ಕೊಪ್ಪಳ ತಾಲೂಕಿನಲ್ಲಿ 64,425 ಹೆಕ್ಟೇರ್‌ ಗುರಿ ನಿಗದಿ ಪಡಿಸಿದ್ದರೆ, ಕುಷ್ಟಗಿ ತಾಲೂಕಿನಲ್ಲಿ 67,575 ಹೆಕ್ಟೇರ್‌ ಗುರಿ, ಯಲಬುರ್ಗಾ 56,445 ಹೆಕ್ಟೇರ್‌, ಗಂಗಾವತಿ ತಾಲೂಕಿನಲ್ಲಿ 64,055 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ನಿಗದಿಪಡಿಸಿದೆ.

ಸದ್ಯ ಹೆಸರು, ತೊಗರಿ ಬಿತ್ತನೆ: ಜೂನ್‌ ತಿಂಗಳಲ್ಲಿ ಮುಂಗಾರು ಮಳೆಗಳು ಆರಂಭವಾಗುವ ನಿರೀಕ್ಷೆಯಿದೆ. ವಿವಿಧ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಆಗುತ್ತಿದೆ. ಕಪ್ಪು ಮಣ್ಣಿನ ಭಾಗದಲ್ಲಿ(ಯರಿ ಭಾಗ)ದಲ್ಲಿ ಹೆಸರು ಬಿತ್ತನೆ ಕಾರ್ಯ ನಡೆಯಲಿದೆ. ಯಲಬುರ್ಗಾ, ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ, ಕುಷ್ಟಗಿ ತಾಲೂಕಿನ ವಿವಿಧ ಹೋಬಳಿ ಭಾಗದಲ್ಲಿ ಹೆಸರು ಬಿತ್ತನೆ ಕಾರ್ಯ ನಡೆಯಲಿದೆ. ಆದರೆ ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕಿನ ಕೆಲ ಹೋಬಳಿ ಬಿಟ್ಟರೆ ಇನ್ನೂ ಎಲ್ಲಿಯೂ ಹೇಳಿಕೊಳ್ಳುವಂತ ಮುಂಗಾರು ಪೂರ್ವ ಮಳೆಗಳು ಸುರಿದಿಲ್ಲ. ರೈತನು ಸಹ ಬಿತ್ತನೆಗೆ ಸಿದ್ಧತೆ ನಡೆಸಿದ್ದು, ತೊಗರಿ ದೀರ್ಘ‌ ಅವಧಿ ಬೆಳೆಯಾದ ಹಿನ್ನೆಲೆಯಲ್ಲಿ ಅದನ್ನೂ ಬಿತ್ತನೆಗೆ ಅಣಿಯಾಗುತ್ತಿದ್ದಾನೆ. ಕ‌ೃಷಿ ಇಲಾಖೆ ಸದ್ಯ ರೈತ ಸಂಪರ್ಕ ಕೇಂದ್ರದಲ್ಲಿ 108 ಕ್ವಿಂಟಲ್ ತೊಗರಿ ಬೀಜ ದಾಸ್ತಾನು ಮಾಡಿದ್ದರೆ, 104 ಕ್ವಿಂಟಲ್ ಹೆಸರು ದಾಸ್ತಾನು ಮಾಡಲಾಗಿದೆ. ಇನ್ನುಳಿದಂತೆ ಮೆಕ್ಕೆಜೋಳ, ಸಜ್ಜೆ ಸೇರಿ ಇತರೆ ಬೀಜಗಳನ್ನು ಜೂನ್‌ ಮೊದಲ ವಾರದಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಸಂಗ್ರಹಕ್ಕೆ ಇಲಾಖೆ ಯೋಜನೆ ರೂಪಿಸಿದೆ.

Advertisement

20,662 ಮೆ.ಟನ್‌ ಗೊಬ್ಬರ: ಜಿಲ್ಲೆಯಲ್ಲಿ ಸತತ ಬರದ ಪರಿಸ್ಥಿತಿಯಿಂದಾಗಿ ಬಹುತೇಕ ಭಾಗದಲ್ಲಿ ಬಿತ್ತನೆಯಾಗಿಲ್ಲ. ಹಾಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಗೊಬ್ಬರ ದಾಸ್ತಾನು ಹಾಗೆ ಇದೆ. ಕ‌ೃಷಿ ಇಲಾಖೆ ಸದ್ಯ ಬೇಡಿಕೆಯ ಪ್ರಕಾರ 22,573 ಮೆಟ್ರಿಕ್‌ ಟನ್‌ ಏಪ್ರಿಲ್-ಮೇ ಅಂತ್ಯದವರೆಗೂ ಇಲಾಖೆಗೆ ಗೊಬ್ಬರದ ದಾಸ್ತಾನು ಹಂಚಿಕೆಗೆ ಅನುಮೋದನೆ ದೊರೆತಿದ್ದು, ಈವರೆಗೂ ರೈತ ಸಂಪರ್ಕ ಕೇಂದ್ರಗಳಲ್ಲಿ 20,662 ಮೆಟ್ರಿಕ್‌ ಟನ್‌ನಷ್ಟು ಗೊಬ್ಬರ ದಾಸ್ತಾನಿದೆ.

ಒಟ್ಟಿನಲ್ಲಿ ಜಿಲ್ಲೆಯ ಬರದ ಬಿಸಿಗೆ ಬೆಂದು ಹೋಗಿರುವ ಅನ್ನದಾತನ ಬಾಳಿಗೆ ವರುಣದೇವನೇ ಆಸರೆಯಾಗಬೇಕಿದೆ. ವರುಣ ಕಣ್ತೆರೆದರೆ ಮಾತ್ರ ಎಲ್ಲರ ಬಾಳು ಹಸನಾಗಲಿದೆ. ಮಳೆರಾಯನ ನಿರೀಕ್ಷೆಯಲ್ಲಿ ಅನ್ನದಾತ ಬಿತ್ತನೆ ಅಣಿಯಾಗುತ್ತಿದ್ದರೆ, ಕ‌ೃಷಿ ಇಲಾಖೆ ಬೀಜ, ಗೊಬ್ಬರ ದಾಸ್ತಾನು ಸಿದ್ಧತೆ ಮಾಡಿಕೊಳ್ಳುವ ತಯಾರಿ ನಡೆಸಿದೆ.

ಜಿಲ್ಲೆಯ ಕೆಲವು ಹೋಬಳಿಯಲ್ಲಿ ಮುಂಗಾರು ಪೂರ್ವ ಮಳೆ ಆಗುತ್ತಿದ್ದು, ನಾವು ಈ ವೇಳೆ ಹೆಸರು, ತೊಗರಿ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿಟ್ಟಿದ್ದೇವೆ. ಅಲ್ಲದೇ ಗೊಬ್ಬರದ ದಾಸ್ತಾನು ಅಧಿಕವಾಗಿದೆ. ಯಾವುದೇ ಕೊರತೆಯಿಲ್ಲ. ಜೂನ್‌ ಮೊದಲ ವಾರಕ್ಕೆ ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಇತರೆ ಬೀಜಗಳ ದಾಸ್ತಾನು ನಡೆಯಲಿದೆ.
• ಶಬಾನಾ ಶೇಖ್‌,
ಜಂಟಿ ಕ‌ೃಷಿ ನಿರ್ದೇಶಕಿ ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next