ಕೊಪ್ಪಳ: ಕೊಪ್ಪಳ ಜಿಲ್ಲೆಯು ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾಕೇಂದ್ರ ಕೊಪ್ಪಳದಲ್ಲಿ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸ್ ಪಡೆಯಿಂದ ಮನೆ ಮನೆಗೆ ಉಚಿತವಾಗಿ ತರಕಾರಿ ಕಿಟ್ ವಿತರಣೆ ಮಾಡಿ ಗಮನ ಸೆಳೆದಿದ್ದಾರೆ.
ಜಿಲ್ಲೆಯೂ ಈಗ ಸಂಪೂರ್ಣ ಲಾಕ್ ಡೌನ್ ಆಗಿದೆ. ಹೀಗಾಗಿ ಜನತೆಗೆ ದಿನಸಿ ಸಾಮಗ್ರಿ ಹಾಗೂ ತರಕಾರಿ ಖರೀದಿ ಸಮಸ್ಯೆಯಾಗಿದೆ. ಇದನ್ನರಿತು ಜಿಲ್ಲಾಡಳಿತ ಮನೆ ಮನೆಗೆ ತರಕಾರಿ ಪೂರೈಕೆಗೆ ವ್ಯವಸ್ಥೆ ಮಾಡಿದೆ. ಆದರೆ ನಗರದಲ್ಲಿ ಕೆಲವು ಬಡ ಕುಟುಂಬಗಳಿಗೆ ಸಹಾಯ, ಸೇವೆ ಮಾಡಲು ಗ್ರಾಮೀಣ ಸಿಪಿಐ ರವಿ ಉಕ್ಕುಂದ ಹಾಗೂ ನಗರ ಠಾಣೆ ಪಿಐ ಮೌನೇಶ್ವರ ಪಾಟೀಲ್ ಅವರ ನೇತೃತ್ವದ ಪೊಲೀಸ್ ಪಡೆಯು ಇಂದು ಹಳ್ಳಿಗೆ ತೆರಳಿ ನೇರವಾಗಿ 30 ಕ್ವಿಂಟಲ್ ನಷ್ಟು ರೈತರು ಬೆಳೆದ ತರಕಾರಿಯನ್ನು ಖರೀದಿ ಮಾಡಿ, ಠಾಣೆಯಲ್ಲಿ 5 ಕೆಜಿ ತರಕಾರಿ ಕಿಟ್ ಸಿದ್ದಪಡಿಸಿ ಟಾಟಾಎಸ್ ವಾಹನದಲ್ಲಿ ಮನೆ ಮನೆಗೆ ತೆರಳಿ ವಿತರಣೆ ಮಾಡಿದರು.
700 ಪಾಕೇಟ್ ತರಕಾರಿ ಕಿಟ್ ನಲ್ಲಿ ಬದನೆಕಾಯಿ ಹೂಕೋಸು, ಹಸಿ ಮೆಣಸಿನಕಾಯಿ, ನುಗ್ಗೆಕಾಯಿ, ಟೊಮೇಟೊ, ಆಲುಗಡ್ಡೆ ಸೇರಿ ಇತರೆ ತರಕಾರಿಯ ಕಿಟ್ ಸಿದ್ದಪಡಿಸಿ ವಿತರಣೆ ಮಾಡಿದರು. ಸಿಪಿಐ ಹಾಗೂ ಪಿಐ ಅವರೇ ಅಂದಾಜು 20 ಸಾವಿರ ರೂ ಬೆಲೆಯ ತರಕಾರಿಯನ್ನು ತಾವೇ ಕೊಟ್ಟು ನೇರ ರೈತರಿಂದ ಖರೀದಿ ಮಾಡಿ ಬಡ ಜನತೆಗೆ ವಿತರಣೆ ಮಾಡಿದರು.
ತರಕಾರಿ ವಿತರಣೆಯ ವೇಳೆ ಲಾಕ್ ಡೌನ್ ಇದೆ. ಯಾರೂ ಮನೆಯಿಂದ ಹೊರಗೆ ಬರಬೇಡಿ, ಮನೆಯಲ್ಲಿಯೇ ಸುರಕ್ಷಿತವಾಗಿ ಇರಬೇಕು. ನಿಮ್ಮ ಆರೋಗ್ಯ ಕಾಪಾಡಬೇಕು ಎಂದು ಜಾಗೃತಿ ಮೂಡಿಸಿದರು.
ಇನ್ನೂ ಉದಯವಾಣಿ ಜೊತೆ ಮಾತನಾಡಿದ ಅವರು, ರೈತರ ಬೆಳೆಯೂ ಹೊಲದಲ್ಲಿ ಹಾನಿಯಾಗುತ್ತಿದೆ. ಹೀಗಾಗಿ ನಾವು ರೈತರಿಂದಲೇ ಖರೀದಿ ಮಾಡಿ ಉಚಿತವಾಗಿ ಜನತೆಗೆ ಕೊಡುತ್ತಿದ್ದೇವೆ ಎಂದು ಹೇಳಿದರು.