Advertisement

ಹನುಮಮಾಲಾ ವಿಸರ್ಜನೆಗೆ ಸಿದ್ಧತೆ

03:33 PM Nov 26, 2022 | Team Udayavani |

ಕೊಪ್ಪಳ: ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಡಿ. 4 ಮತ್ತು 5ರಂದು ಹನುಮ ಮಾಲಾಧಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರಚಿಸಿರುವ ಎಲ್ಲ ಸಮಿತಿಗಳು ವ್ಯವಸ್ಥಿತ ಯೋಜನೆ ಮೂಲಕ ಹಾಗೂ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಂದು ಡಿಸಿ ಎಂ. ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹನುಮಮಾಲಾಧಾರಿಗಳ ವಿಸರ್ಜನಾ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಲೆ ವಿಸರ್ಜನೆಗೆ ಶಿಷ್ಟಾಚಾರ ಸಮಿತಿ, ಸಾರಿಗೆ ಸಮಿತಿ, ಆರೋಗ್ಯ ಸಮಿತಿ, ಆಹಾರ ಸಮಿತಿ, ಭದ್ರತಾ ಸಮಿತಿ ಸೇರಿದಂತೆ ಒಟ್ಟು 14 ಸಮಿತಿಗಳನ್ನು ರಚಿಸಿದೆ. ಎಲ್ಲ ಸಮಿತಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಗೊಂದಲ, ತೊಂದರೆಗೆ ಆಸ್ಪದ ಕೊಡದ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ. ಮಾಲೆ ವಿಸರ್ಜನೆಗೆ 2 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಂಭವವಿದ್ದು, ಅವರಿಗೆ ಸೂಕ್ತ ಆಹಾರ, ಕುಡಿಯುವ ನೀರು, ವಸತಿ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಮುಂಚಿತವಾಗಿಯೇ ಕುಡಿಯುವ ನೀರಿನ ಟ್ಯಾಂಕರ್‌ ಗಳನ್ನು ಗುರುತಿಸಬೇಕು. ಅಲ್ಲಲ್ಲಿ ಅವುಗಳನ್ನು ನಿಲ್ಲಿಸಬೇಕು. ನೀರಿನ ಮೂಲಗಳನ್ನು ಮೊದಲೇ ಗುರುತಿಸಬೇಕು. ನೀರಿನ ಲಭ್ಯತೆ ಬಗ್ಗೆ ಮೊದಲೇ ಯೋಜಿಸಿ ಕುಡಿಯಲು ಮತ್ತು ಬಳಕೆಗೆ ಎರಡಕ್ಕೂ ತೊಂದರೆಯಾಗದ ಹಾಗೆ ಯೋಜಿಸಬೇಕು ಎಂದರು.

ಅಂಜನಾದ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ಕೊಡಬೇಕು. ಶುಚಿತ್ವ ಕಾರ್ಯಕ್ಕಾಗಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ರೆಡ್‌ ಕ್ರಾಸ್‌ ಮತ್ತು ಇನ್ನಿತರ ಸಂಸ್ಥೆಗಳ ಸಹಾಯ ಪಡೆದುಕೊಳ್ಳಬೇಕು. ಕಾಲೇಜುಗಳಲ್ಲಿನ ಎನ್‌ಸಿಸಿ, ಎನ್ನೆಸ್ಸೆಸ್‌ ತಂಡಗಳ ಸಹಾಯ ಪಡೆಯಬಹುದು. ಕಸ ವಿಲೇವಾರಿಗೆ ಅಗತ್ಯ ಸಂಖ್ಯೆಯಲ್ಲಿ ಡಸ್ಟ್‌ಬಿನ್‌ ಮತ್ತು ವಾಹನಗಳ ವ್ಯವಸ್ಥೆ ಮಾಡಬೇಕು ಎಂದರು.

ಅಂಜನಾದ್ರಿ ಬೆಟ್ಟಕ್ಕೆ ಇರುವ ಮುಖ್ಯ ರಸ್ತೆ, ಸಂಪರ್ಕ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಿ, ಗುಂಡಿಗಳನ್ನು ಮುಚ್ಚಬೇಕು. ಬೆಟ್ಟವನ್ನು ಸಂಪರ್ಕಿಸುವ ಪ್ರತಿ ರಸ್ತೆ, ಮಾರ್ಗದ ಕುರಿತು ಅಲ್ಲಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು. ಬೆಟ್ಟದ ಸುತ್ತಲು ಕಾಡುಪ್ರಾಣಿಗಳ ಹಾವಳಿ ಇರುವ ಮಾಹಿತಿಯಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ನಿಗಾ ವಹಿಸಿ ವಾರದ ಮೊದಲೇ ಕಾರ್ಯಪ್ರವೃತ್ತರಾಗಬೇಕು. ಅಗತ್ಯ ಸಂಖ್ಯೆಯಲ್ಲಿ ಬ್ಯಾರಿಕೇಡ್‌ ಅಳವಡಿಸಿ ಯಾರು ಕೂಡ ಕಾಡಿನೊಳಗೆ ಹೋಗದಂತೆ ನೋಡಿಕೊಳ್ಳಬೇಕು. ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಜೆಸ್ಕಾಂ ಇಲಾಖೆಯು ವ್ಯವಸ್ಥೆ ಮಾಡಬೇಕು. ಬೆಟ್ಟ ಪ್ರದೇಶ, ಪಾರ್ಕಿಂಗ್‌ ಪ್ರದೇಶ, ಸ್ನಾನಘಟ್ಟ ಸೇರಿದಂತೆ ಜನಸಂದಣಿ ಇರುವ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಬೇಕು ಎಂದರು.

Advertisement

ಅಗ್ನಿಶಾಮಕ ತಂಡ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಲಭ್ಯವಿರಬೇಕು. ಪೊಲೀಸ್‌ ಇಲಾಖೆಯಿಂದ ಭದ್ರತೆಗಾಗಿ ಅಗತ್ಯ ಪ್ರಮಾಣದ ಸಿಬ್ಬಂದಿ ನಿಯೋಜಿಸಬೇಕು. ಹೆಚ್ಚುವರಿ ಹೋಂ ಗಾರ್ಡ್‌ಗಳ ಸೇವೆ ಪಡೆಯಬಹುದು. ಕಾರ್ಯಕ್ರಮಕ್ಕೆ ವಿಐಪಿ ಮಾರ್ಗಗಳು, ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಮಾಹಿತಿ ಕೊರತೆಯಿಂದ ಅನಗತ್ಯ ಗೊಂದಲ ಉಂಟಾಗದಂತೆ ಎಚ್ಚರ ವಹಿಸಿ, ನಿಯೋಜಿತ ಭದ್ರತಾ ಸಿಬ್ಬಂದಿಗಳಿಗೆ ಕಾರ್ಯಕ್ರಮಕ್ಕೆ ಆಗಮಿಸುವ ವಿಐಪಿಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡಿ ಎಂದರು. ಕಾರ್ಯಕ್ರಮದ ಸ್ಥಳದಲ್ಲಿ ಆರೋಗ್ಯ ಸೇವೆ ಒದಗಿಸಿ, ತುರ್ತು ಪರಿಸ್ಥಿತಿ ನಿರ್ವಹಣೆಗೆ ಗಂಗಾವತಿಯ ಉಪ ವಿಭಾಗ ಆಸ್ಪತ್ರೆ, ಆನೆಗುಂದಿ, ಹುಲಿಗಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಗಳಲ್ಲಿ ಆ ಎರಡು ದಿನಗಳು ಎಲ್ಲ ಆರೋಗ್ಯ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸದಾ ಲಭ್ಯವಿರುವಂತೆ ನಿರ್ದೇಶನ ನೀಡಿ. ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಅಲ್ಲಲ್ಲಿ ಆರೋಗ್ಯ ಕೌಂಟರ್‌ಗಳಂತಹ ತಾತ್ಕಾಲಿಕ ಕ್ಲಿನಿಕ್‌ ತೆರೆಯಿರಿ. ಬಿಸಿಲು ಅಥವಾ ಬಳಲಿಕೆಯಿಂದ ಯಾರಿಗೆ ಆರೋಗ್ಯ ಸಮಸ್ಯೆ ಕಂಡುಬಂದರೂ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲು ಸಾಧ್ಯವಾಗುವಂತೆ ವ್ಯವಸ್ಥೆ ಅಳವಡಿಸಿ ಎಂದರು.

ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌ ಮಾತನಾಡಿ, ಸ್ಥಳೀಯ ಗ್ರಾಪಂ ಪೌರ ಕಾರ್ಮಿಕರೊಂದಿಗೆ ಪಕ್ಕದ ಸ್ಥಳೀಯ ಸಂಸ್ಥೆಗಳಿಂದ ಹಾಗೂ ಹೆಚ್ಚುವರಿಯಾಗಿ ದಿನಗೂಲಿ ಆಧಾರದಲ್ಲಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸ್ನಾನಘಟ್ಟ, ಆಹಾರ ಕೌಂಟರ್‌, ದೇವಸ್ಥಾನದ ಆವರಣ ಸೇರಿದಂತೆ ಎಲ್ಲಿಯೂ ಅಸ್ವತ್ಛತೆಗೆ ಅವಕಾಶವಿಲ್ಲದಂತೆ ಸ್ವತ್ಛತೆ ಬಗ್ಗೆ ಯಾವುದೇ ದೂರು ಬಾರದಂತೆ ಕಾರ್ಯನಿರ್ವಹಿಸಬೇಕು ಎಂದರು.

ಎಸ್ಪಿ ಅರುಣಾಂಗ್ಷು ಗಿರಿ ಮಾತನಾಡಿ, ಅಂಜನಾದ್ರಿ ಬೆಟ್ಟದ ಸುತ್ತಲು 80 ಸಿಸಿ ಕ್ಯಾಮೆರಾ ಅಳವಡಿಸಲು ಮತ್ತು ಗಂಗಾವತಿ ಸಿಟಿನಲ್ಲಿ 120 ಸಿಟಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಿದೆ. 5 ಡ್ರೋನ್‌ ಕ್ಯಾಮೆರಾ ಅಳವಡಿಕೆಗೂ ಯೋಜಿಸಲಾಗಿದೆ. ನದಿ ತೀರದಲ್ಲಿ ಎಸ್‌ ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗುವುದು. ಪೊಲೀಸ್‌ ಇಲಾಖೆಯಿಂದ ಎಲ್ಲ ರೀತಿಯ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಎಡಿಸಿ ಸಾವಿತ್ರಿ ಬಿ. ಕಡಿ, ಎಸಿ ಬಸವಣೆಪ್ಪ ಕಲಶೆಟ್ಟಿ, ಡಿಯುಡಿಸಿ ಕಾವ್ಯಾರಾಣಿ ಸೇರಿ ಕೊಪ್ಪಳ ಹಾಗೂ ಗಂಗಾವತಿಯ ಡಿವೈಎಸ್‌ಪಿಗಳು, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next