Advertisement

ಸತತ 5 ಗಂಟೆ ನಡೆದ ಐಸಿಸಿ ಸಭೆ ಗೊಂದಲದಲ್ಲೇ ಅಂತ್ಯವಾಯ್ತು !

12:18 PM Nov 22, 2019 | Naveen |

ಕೊಪ್ಪಳ: ತಾಲೂಕಿನ ಮುನಿರಾಬಾದ್‌ ನೀರಾವರಿ ಕಚೇರಿಯಲ್ಲಿ ನಡೆದ 113ನೇ ನೀರಾವರಿ ಸಲಹಾ ಸಮಿತಿ ಸಭೆಯು ಬೆಳಗ್ಗೆ 11ಕ್ಕೆ ಆರಂಭವಾಗಿ ಸಂಜೆ 4 ಗಂಟೆವರೆಗೂ ಸತತ 5 ಗಂಟೆಗಳ ಕಾಲ ಸುದೀರ್ಘ‌ ಚರ್ಚೆ ನಡೆಸಿ ಕೊನೆಯಲ್ಲಿ ಗೊಂದಲದಲ್ಲಿಯೇ ಅಂತ್ಯವಾಯಿತು.

Advertisement

ನಾಲ್ಕು ವರ್ಷಗಳಿಂದ ಎರಡನೇ ಬೆಳೆಗೆ ನೀರು ಕೊಡಲಾಗಿರಲಿಲ್ಲ. ಈ ಬಾರಿ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ 2ನೇ ಬೆಳೆಗೆ ನೀರು ಹರಿಸುವ ವಿಚಾರದಲ್ಲಿ ರೈತರ ಜೊತೆ ಡಿಸಿಎಂ ಲಕ್ಷ್ಮಣ ಸವದಿ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು.

ಸಭೆಯಲ್ಲಿ ಮಾಜಿ ಶಾಸಕ, ಸಚಿವರ ಜೊತೆಯೂ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ರೈತ ಮುಖಂಡರಿಂದಲೂ ಅಭಿಪ್ರಾಯ ಪಡೆದರು. ತರುವಾಯ ಮಧ್ಯಾಹ್ನ 2ರಿಂದ ಸಂಜೆ 4ಗಂಟೆ ವರೆಗೂ ಶಾಸಕ, ಸಂಸದರ ಜೊತೆ ಹಾಗೂ ಅಧಿ ಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು. ಎರಡನೇ ಬೆಳೆಗೆ ನೀರು ಪಕ್ಕಾ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತ ಸಮೂಹಕ್ಕೆ ಸವದಿ ಕೊನೆಯಲ್ಲಿ ಜನವರಿ ತಿಂಗಳು ಸಭೆ ನಡೆಸಿ ರೈತರಿಗೆ ನೀರು ಕೊಡುವ ಚಿಂತನೆಯ ಮಾತನ್ನಾಡಿದರು. ಆದರೆ ನಿರ್ಣಯದ ಪ್ರಕಟಣೆಯನ್ನು ಮಾಧ್ಯಮಕ್ಕೆ ಮಾಹಿತಿ ನೀಡಿದರು. ಆದರೆ ರೈತ ಮುಖಂಡರು ಮಾತ್ರ ಜಲಾಶಯದಲ್ಲಿ ನೀರಿದೆ. ಎರಡನೇ ಬೆಳೆಗೆ ನೀರು ಲಭ್ಯವಿದೆ. ಆದರೂ ಮತ್ತೆ ಜನವರಿ ತಿಂಗಳಲ್ಲಿ ಸಭೆ ನಡೆಸುವುದು ಏಕೆ? ಈಗಲೇ ಅದನ್ನು ನಿರ್ಣಯಿಸಿ ದಿನಾಂಕ ಪ್ರಕಟಿಸಿದರೆ ರೈತರು ಭತ್ತದ ಮಡಿಗಳನ್ನು ಹಾಕಲಿದ್ದಾರೆ. ನೀವು ಹೀಗೆ ಮುಂದಿನ ತಿಂಗಳು ಎಂದು ಹೇಳಿದರೆ ರೈತರಲ್ಲಿ ಗೊಂದಲವಾಗಲಿದೆ ಎಂದು ಸಭೆಗೆ ಒತ್ತಾಯ ಮಾಡಿದರು. ಇದಕ್ಕೆ ತಲೆಯಾಡಿಸಿದ ಸವದಿ ಅವರು ಎರಡನೇ ಬೆಳೆಗೆ ನೀರು ಕೊಡಲು ಕ್ರಮ ವಹಿಸಲಾಗುವುದು ಎಂದರು. ಗೊಂದಲದಲ್ಲಿಯೇ ಸಭೆ ನಿರ್ಣಯವನ್ನು ಮಾಧ್ಯಮಕ್ಕೆ ತಿಳಿಸಿ ತೆರಳಿದರು.

ಕೊನೆ ಭಾಗಕ್ಕೆ ನೀರಿಗಾಗಿ ಬಿಗಿಪಟ್ಟು: ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಯ ಕೊನೆ ಭಾಗದ ರೈತರ ಭೂಮಿಗೆ ನೀರು ಹರಿಸಬೇಕೆಂದು ಆ ಭಾಗದ ಶಾಸಕರು ಐಸಿಸಿ ಸಭೆಯಲ್ಲಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಹಲವು ಚರ್ಚೆಗಳು ನಡೆದವು. ಎಡದಂಡೆ ನಾಲೆಗೆ 4200 ಕ್ಯೂಸೆಕ್‌ ನೀರು ಹರಿಸಿದರೆ ಮಾತ್ರ ಕೊನೆ ಭಾಗದ ರೈತರಿಗೆ ನೀರು ತಲುಪಲಿದೆ. 3800 ಕ್ಯೂಸೆಕ್‌ ನಷ್ಟು ನೀರು ಹರಿಸಿದರೆ ನಮಗೆ ನೀರು ಲಭ್ಯವಾಗಲ್ಲ. ರೈತರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಬರಲಿದೆ. ಕೊನೆಯ ಭಾಗದ ರೈತರ ಕಷ್ಟವನ್ನು ಆಲಿಸಬೇಕೆಂದು ಬಿಗಿಪಟ್ಟು ಹಿಡಿದಿದ್ದರಿಂದ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆದವು. ಕಾಲುವೆ ಆಧುನೀಕರಣದ ನೆಪ ಹಾಗೂ ಅಗಲೀಕರಣ ಮಾಡಿದ್ದರಿಂದ ನೀರು ರಭಸವಾಗಿ ಹರಿಯಲ್ಲ. ಹೀಗಾಗಿ ಕೊನೆ ಭಾಗಕ್ಕೆ ನೀರು ಸಕಾಲಕ್ಕೆ ತಲುಪಲ್ಲ. ಕೂಡಲೇ ಇದನ್ನು ಪರಿಶೀಲನೆ ನಡೆಸಬೇಕು. ಇನ್ನೂ ಆನ್‌ ಆ್ಯಂಡ್‌ ಆಫ್‌ ಪದ್ಧತಿ ಮಾಡಿದರಂತೂ ನಮಗೆ ನೀರೇ ಬರಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆದವು.

2 ಲಕ್ಷ ಎಕರೆ ಅಕ್ರಮ ಭತ್ತ ನಾಟಿ!: ಜನಪ್ರತಿನಿಧಿಗಳ ಜೊತೆ ನಡೆದ ಐಸಿಸಿ ಆಂತರಿಕ ಸಭೆಯಲ್ಲಿ ತುಂಗಭದ್ರಾ ಜಲಾಶಯದ ಭತ್ತ ನಾಟಿ ಪ್ರದೇಶ ವಿಸ್ತಾರವಾಗಿದೆ. ಎಲ್ಲ ರೈತರಿಗೂ ನೀರು ಹರಿಸಲು ಕಷ್ಟಸಾಧ್ಯವಾಗಿದೆ. 6 ಲಕ್ಷ ಎಕರೆ ಪ್ರದೇಶದಿಂದ 8 ಲಕ್ಷ ಎಕರೆ ಪ್ರದೇಶವಾಗಿದೆ. ಇದರಿಂದ ಭತ್ತ ಅಕ್ರಮ ನಾಟಿಯಾಗುವ ಬಗ್ಗೆ ಚರ್ಚೆ ನಡೆಸಬೇಕು ಎಂದು ಅಧಿಕಾರಿ ವರ್ಗ ಸಭೆ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಯಾವ ಶಾಸಕರು ಪ್ರತಿ ಮಾತನಾಡದೇ, ರೈತರನ್ನು ವಿರೋಧ ಹಾಕಿಕೊಳ್ಳಲು ಯಾವುದೇ ಶಾಸಕರು ತಯಾರಿಲ್ಲ. ಎಲ್ಲ ರೈತರಿಗೂ ನೀರು ಕೊಡಬೇಕು ಎನ್ನುವ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಯಿತು.

Advertisement

ಕಾಂಗ್ರೆಸ್‌ ಪ್ರತಿಭಟನೆ: ತುಂಗಭದ್ರಾ ಡ್ಯಾಂನಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಆದರೂ ಎರಡನೇ ಬೆಳೆಗೆ ನೀರು ಕೊಡಲು ಸಲಹಾ ಸಮಿತಿ ಸಭೆಯಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಕೈ ಮುಖಂಡರು ಒತ್ತಾಯ ಮಾಡಿದರು. ಬಿಜೆಪಿ ಸರ್ಕಾರ ರೈತರಿಗೆ ನೀರು ಕೊಡದೇ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next