ಕುಷ್ಟಗಿ: ಕಟಾವು ಹಂತದಲ್ಲಿದ್ದ ಕಲ್ಲಂಗಡಿ ಬಳ್ಳಿಯನ್ನು ದುಷ್ಕರ್ಮಿಗಳು ಕಿತ್ತು ಹಾಕಿ, ಹಣ್ಣುಗಳನ್ನು ಕಾಲಿನಿಂದ ತುಳಿದು ನಾಶ ಮಾಡಿದ ಘಟನೆ ಕುಷ್ಟಗಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ನಾಗರಾಳ ಗ್ರಾಮದಲ್ಲಿ ಶರಣಪ್ಪ ಚಂದ್ರಪ್ಪ ವಂಕಲಕುಂಟ ಅವರು, ಸ.ನಂ 60ರಲ್ಲಿ 1 ಎಕರೆ ಜಮೀನಿನಲ್ಲಿ ಲೀಜ್ ಆಧಾರದಲ್ಲಿ ಕಲ್ಲಂಗಡಿ ಬೆಳೆಯಲಾಗಿತ್ತು. ಸದರಿ ಬೆಳೆ ಎರಡು ತಿಂಗಳಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಕಲ್ಲಂಗಡಿ ಉತ್ತಮ ಫಸಲಿನ ಹಿನ್ನೆಲೆಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೂ ಕಾವಲು ಇರುತ್ತಿತ್ತು.
ಕಳೆದ ಫೆ.13ರಂದು ಸದರಿ ಜಮೀನು ಪಕ್ಕದ ಜಮೀನಿನ ಹನಮಂತ ಕುಂಟೆಪ್ಪ ಹಿರೇವಂಕಲಕುಂಟ ಅವರು ಬೆಳಗ್ಗೆ ತಮ್ಮ ಜಮೀನಿಗೆ ಹೋಗುವಾಗ ಶರಣಪ್ಪ ವಂಕಲಕುಂಟ ಅವರ ಬೆಳೆ ನಾಶದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಕಲ್ಲಂಗಡಿ ಜಮೀನಿಗೆ ಧಾವಿಸಿದಾಗ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ನಾಶವಾಗಿದ್ದು, ಇದರಲ್ಲಿ ಬಳ್ಳಿ ಕಿತ್ತು ಹಾಕಿ, ಕಾಲಿನಿಂದ ತುಳಿದು ಹಾಕಿರುವುದು ಕಂಡು ಬಂದಿದೆ.
ಯಾರೋ ದುಷ್ಕರ್ಮಿಗಳು ಮೇಲ್ನೋಟಕ್ಕೆ ಕರಡಿ ದಾಳಿಯಂತೆ ಮನುಷ್ಯರಿಂದ ಅಲ್ಲ ಎನ್ನುವ ಹಾಗಿದ್ದು, ಜಮೀನಿನಲ್ಲಿ ಹೆಜ್ಜೆ ಗುರುತು ಹಣ್ಣನ್ನು ಕಾಲಿನಿಂದ ತುಳಿದು ಹಾಳು ಮಾಡಿರುವುದು ದುಷ್ಕರ್ಮಿಗಳದ್ದೆ ಕೈವಾಡವೆನಿಸಿದೆ. ಉತ್ತಮ ಬೆಳೆ ಸಹಿಸದೇ ಹಾಳು ಮಾಡಿದ್ದು, ಸದರಿ ಹಾನಿಯಿಂದ 30 ಸಾವಿರ ರೂ. ಹಾನಿಯಾಗಿದೆ.
ಈ ಪ್ರಕರಣವು ಫೆ.12ರಂದು ದುಷ್ಕರ್ಮಿಗಳು ರಾತ್ರಿ 10ರ ನಂತರ ರೈತ ಶರಣಪ್ಪ ವಂಕಲಕುಂಟ ಜಮೀನಿನಲ್ಲಿ ಇರದೇ ಇರುವುದು ಗಮನಿಸಿ, ಹೊಂಚು ಹಾಕಿ ಈ ದುಷ್ಕೃತ್ಯವೆಸಗಿದ್ದಾರೆ. ಇದರಲ್ಲಿ ಸ್ಥಳೀಯರ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷಿಸಿಸಬೇಕೆಂದು ಸ್ಥಳೀಯ ಕುಷ್ಟಗಿ ಠಾಣೆಗೆ ದೂರು ನೀಡಿದ್ದಾರೆ.