Advertisement

ಚಾಲುಕ್ಯ ವಾಸ್ತು ಶಿಲ್ಪ ಮಾದರಿಯಲ್ಲಿ ಹುಲಿಗೆಮ್ಮ ದೇವಸ್ಥಾನ ನಿರ್ಮಾಣ

03:31 PM Nov 09, 2019 | Naveen |

„ದತ್ತು ಕಮ್ಮಾರ
ಕೊಪ್ಪಳ:
ನಾಡಿನ ಪ್ರಸಿದ್ಧ ಹುಲಿಗಿಯ ಹುಲಿಗೆಮ್ಮ ದೇವಸ್ಥಾನವನ್ನು ಚಾಲುಕ್ಯ ವಾಸ್ತುಶಿಲ್ಪ ಮಾದರಿಯಲ್ಲಿ ಪುನರ್‌ ನಿರ್ಮಾಣಕ್ಕೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಮ್ಮತಿಸಿದೆ. ತಮಿಳುನಾಡು ಶಿಲ್ಪಿತಜ್ಞ ಶಂಕರ್‌ ತಪತಿ ಅವರ ತಂಡವು ದೇವಸ್ಥಾನದ ಶಿಲ್ಪ ವಿನ್ಯಾಸ ಆಯ್ಕೆ ಮಾಡಿದ್ದು,
4.97 ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಮುಜರಾಯಿ ಇಲಾಖೆಗೆ ಸಲ್ಲಿಸಿದೆ.

Advertisement

ಹುಲಿಗೆಮ್ಮ ದೇವಿ ದೇವಸ್ಥಾನ ಕಲ್ಲುಬಂಡೆಯನ್ನೊಳಗೊಂಡಿದೆ. ಈ ಹಿಂದೆ ಇಲ್ಲಿ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಆಗಿನ ಜನತೆ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿದ್ದರು ಎನ್ನುವ ಪ್ರತೀತಿಯಿದೆ. ಪೂರ್ವದಲ್ಲಿ ಕಲ್ಲು ಬಂಡೆಗಳ ಮಧ್ಯೆ ಕೇವಲ ಮೂರ್ತಿ ಮಾತ್ರ ಇತ್ತು. ಕ್ರಮೇಣ ಗುಡಿ ನಿರ್ಮಿಸಿ ಅಭಿಷೇಕ, ನಿತ್ಯ ಪೂಜೆ, ಪುನಸ್ಕಾರ ನಡೆಯಲಾರಂಭಿಸಿವೆ.

ದೇವಸ್ಥಾನ ಸುಮಾರು 800 ವರ್ಷಗಳ ಹಳೆಯದಾಗಿದ್ದರಿಂದ ಗೋಡೆ, ಕಂಬ, ಗೋಪುರ ಸೇರಿ ಇತರೆಡೆ ಸಣ್ಣ ಬಿರುಕು ಕಾಣಿಸಿಕೊಂಡಿವೆ. ಇದನ್ನು ಅರಿತ ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಚಾಲುಕ್ಯ ವಾಸ್ತುಶಿಲ್ಪ ಮಾದರಿಯಲ್ಲಿ ಪುನರ್‌ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ಈ ಹಿಂದೆ ದೇವಸ್ಥಾನವನ್ನು ಯಾವ ಮಾದರಿಯಲ್ಲಿ ನಿರ್ಮಿಸಬೇಕೆನ್ನುವ ಚರ್ಚೆಗಳು ನಡೆದಿದ್ದವು. ಉಡುಪಿ, ಹೊರನಾಡು ಸೇರಿದಂತೆ ನಾಡಿನ ಪ್ರಸಿದ್ಧ ದೇವಸ್ಥಾನದ ಪ್ರಮುಖರನ್ನು ಕರೆಯಿಸಿಕೊಂಡು ಕೆಲವೊಂದು ಸಲಹೆ ಪಡೆದಿದ್ದರು. ದೇವಸ್ಥಾನ ವ್ಯವಸ್ಥಾಪನ ಸಮಿತಿಯೂ ಪ್ರಸಿದ್ಧ ವಿವಿಧ ಶಿಲ್ಪಿ ತಜ್ಞರನ್ನು, ವಾಸ್ತು ತಜ್ಞರನ್ನು ಆಹ್ವಾನಿಸಿ ಚರ್ಚೆ ನಡೆಸಿತ್ತು.

ಕೊನೆಗೆ ತಮಿಳುನಾಡಿನ ಶಿಲ್ಪಿತಜ್ಞರ ತಂಡ ದೇವಸ್ಥಾನಕ್ಕೆ ಭೇಟಿ ನೀಡಿ, ಚಾಲುಕ್ಯ ಮಾದರಿಯಲ್ಲಿ ಬಿಳಿ ಕಲ್ಲಿನ ದೇವಸ್ಥಾನ ನಿರ್ಮಾಣಕ್ಕೆ ಸಮ್ಮತಿ ನೀಡಿದೆ. ಇದಕ್ಕೆ ದೇವಸ್ಥಾಪನಾ ವ್ಯವಸ್ಥಾಪನಾ ಸಮಿತಿ ಒಪ್ಪಿಗೆ ನೀಡಿದೆ. ಆರಂಭದಲ್ಲಿ ದೇವಸ್ಥಾನವನ್ನು ಸಂಪೂರ್ಣ ನಿರ್ಮಿಸುವ ಯೋಜನೆ ಮಾಡಲಾಗಿತ್ತು. ಆದರೆ ಎಲ್ಲವೂ ಒಂದೇ ಬಾರಿಗೆ ಕಾರ್ಯ ಕೈಗೊಳ್ಳುವ ಬದಲು ಸದ್ಯಕ್ಕೆ ದೇವಸ್ಥಾನದ ಗರ್ಭಗುಡಿ, ಪ್ರಾಂಗಣ, ಮಧ್ಯ ಮಂಟಪ ಹಾಗೂ ಹೊರಾಂಗಣ ಮಾತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಚಂದ್ರಶಾಲೆ, ಹೋಮ, ಹವನ ಸೇರಿ ಇತರೆ ಮಂಟಪ ನಿರ್ಮಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.

Advertisement

ಮೂಲ ಮೂರ್ತಿಗೆ ಧಕ್ಕೆಯಾಗದಂತೆ ಸಿದ್ಧತೆ: ಹುಲಿಗೆಮ್ಮ ದೇವಸ್ಥಾನ ಗರ್ಭಗುಡಿಯಲ್ಲಿ ಕಲ್ಲಿನಲ್ಲೇ ಮೂಲ ಮೂರ್ತಿಯಿದೆ. ಇದೊಂದು ಉದ್ಭವ ಮೂರ್ತಿಯಾಗಿದ್ದರಿಂದ ಇದಕ್ಕೆ ಧಕ್ಕೆಯಾಗದಂತೆ ನಿಗಾ ವಹಿಸಿ ಸುತ್ತಲೂ ರಕ್ಷಣಾ ಕವಚ ನಿರ್ಮಿಸಿ ದೇವಸ್ಥಾನ ಪುನರ್‌ ನಿರ್ಮಾಣಕ್ಕೆ ವ್ಯವಸ್ಥೆಗೆ ಯೋಜನೆ ಮಾಡಲಾಗಿದೆ.

ನಿರ್ಮಾಣ ಕಾರ್ಯದಲ್ಲೂ ನಿತ್ಯ ಪೂಜೆ: ದೇವಸ್ಥಾನ ನಿರ್ಮಾಣ ಕಾರ್ಯದಲ್ಲೂ ದೇವಿಗೆ ನಿತ್ಯ ಪೂಜೆ, ಅಭಿಷೇಕ, ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡುವ ಯೋಚನೆ ಮಾಡಲಾಗಿದೆ. 4.97 ಕೋಟಿ ರೂ.ನಲ್ಲಿ ನಿರ್ಮಾಣಕ್ಕೆ ಮುಜರಾಯಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಲ್ಲಿ ಸಮ್ಮತಿ ದೊರೆಯುವುದೊಂದೇ ಬಾಕಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next