Advertisement

ಭರದಿಂದ ಸಾಗಿದೆ ಹಿರೇಹಳ್ಳ ಅಭಿವೃದ್ಧಿ 

05:21 PM Mar 25, 2019 | |
ಕೊಪ್ಪಳ: ತಾಲೂಕಿನ ಹಿರೇಹಳ್ಳದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಹಳ್ಳದ ಕಾರ್ಯ ವೀಕ್ಷಣೆಗೆ ಅಧಿಕಾರಿಗಳ ತಂಡ, ನೀರಾವರಿ ಸೇರಿದಂತೆ ಕೃಷಿ ತಜ್ಞರು ಆಗಮಿಸಿ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಸಲಹೆ, ಸೂಚನೆ ನೀಡುತ್ತಿದ್ದಾರೆ.
ಹಳ್ಳದ ಸ್ವಚ್ಛತಾ ಕಾರ್ಯದ ಪ್ರಗತಿ ವೀಕ್ಷಣೆಗೆ ಶಿರಸಿಯ ಪರಿಸರ ತಜ್ಞ ಶಿವಾನಂದ ಕಳವೆ ಭೇಟಿ ನೀಡಿ ಪುನಶ್ಚೇತನ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಗವಿಮಠದ ಶ್ರೀಗಳು ಕೈಗೊಂಡಿರುವ ಬಹುಪಯೋಗಿ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರೇಹಳ್ಳದಲ್ಲಿ ಕಂಡು ಬರುವ ವಿವಿಧ ಜಾತಿಯ ಸಸ್ಯಗಳ ಕುರಿತಂತೆ ಪರೀಶಿಲನೆ ನಡೆಸಿದರು. ಇವರೊಟ್ಟಿಗೆ ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ| ಎಂ.ಬಿ.
ಪಾಟೀಲ್‌ ಅವರು ಭೇಟಿ ನೀಡಿ ಹಲವು ಮಾಹಿತಿ ಪಡೆದರು. ಹಿರೇಹಳ್ಳ ಕಾಮಗಾರಿ ನಡೆಯುವ ಡಂಬ್ರಳ್ಳಿ, ದದೇಗಲ್‌, ಓಜಿನಹಳ್ಳಿ, ಹಿರೇಸಿಂಧೋಗಿ, ಮಾದಿನೂರ, ಭಾಗ್ಯನಗರ ಎಲ್ಲ ಸ್ಥಳಗಳಿಗೆ ಭೇಟಿದರು. ಶನಿವಾರ ಡಂಬ್ರಳ್ಳಿ, ದದೇಗಲ್‌, ಓಜಿನಹಳ್ಳಿ, ಹಿರೇಸಿಂಧೋಗಿ, ಮಾದಿನೂರ, ಭಾಗ್ಯನಗರ ಮತ್ತು ಓಜನಳ್ಳಿ ಬಳಿಯ ಹಳ್ಳದ ಕಡೆ 22 ಹಿಟ್ಯಾಚಿ, 9 ಡೋಜರ್‌ ಸೇರಿದಂತೆ ಒಟ್ಟು 31 ಯಂತ್ರಗಳನ್ನು ಬಳಸಿ ಹಿರೇಹಳ್ಳ ಪುನಶ್ಚೇತಗೊಳಿಸುವ ಕಾರ್ಯ ಜರುಗಿತು.
ನೆರವಿನ ಮಹಾಪೂರ: ಗವಿಮಠದ ಶ್ರೀಗಳು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನಾ ಕಾರ್ಯಕ್ಕೆ ಹುಲಗಿಯ ಸರಕಾರಿ ಹಿರಿಯ ಪ್ರಾಥಮಿಕ (ಎಂ.ಎಚ್‌ .ಪಿ.ಎಸ್‌) ಶಾಲೆ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಅಂಬೇಡ್ಕರ್‌ ನಗರ ಶಾಲೆಯ ವತಿಯಿಂದ 6,301 ರೂ. ದೇಣಿಗೆ ರೂಪದಲ್ಲಿ ಅರ್ಪಿಸಿದ್ದಾರೆ.
ಸೇವಾ ಕೈಂಕರ್ಯ: ಭಾಗ್ಯನಗರದ ಇನ್ನರ್‌ವೀಲ್‌ ಕ್ಲಬ್‌ ಸದಸ್ಯೆಯರು ಭಾಗ್ಯನಗರದ ಪ್ರದೇಶದಲ್ಲಿ ನಡೆಯುತ್ತಿರುವ ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ಕೆಲಸ ನಿರ್ವಹಿಸಿದವರಿಗೆ ಶನಿವಾರ ಪ್ರಸಾದ ವ್ಯವಸ್ಥೆ ಮಾಡಿದ್ದರು. ಕೊಪ್ಪಳ ಜಿಲ್ಲಾ ವಿಕಲಚೇತನ ಸಂಘದ ವತಿಯಿಂದ ಓಜಿನಹಳ್ಳಿ ಹಾಗೂ ಭಾಗ್ಯನಗರದ ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದ ವಾಹನ ಚಾಲಕರಿಗೆ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಅಳಿಲು ಸೇವೆ ಅರ್ಪಿಸಿದ್ದಾರೆ. ವಿಕಲಚೇತನ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಜಿಲ್ಲಾಧಕ್ಷ ಅಂದಪ್ಪ ಬೋಳರಡ್ಡಿ, ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹೊಳಿ, ತಾಲೂಕು ಅಧ್ಯಕ್ಷರಾದ ಅಂದಪ್ಪ ಇಡ್ಲಿ, ತಾಲೂಕು ಕಾರ್ಯದರ್ಶಿ ಗಂಗಪ್ಪ ಅಂಬಿಗೇರ ಪಾಲ್ಗೊಂಡಿದ್ದರು.
ಎಸ್‌ಐಒ ಕಾರ್ಯಕರ್ತರು ಭಾಗಿ: ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಜೇಶನ್‌ ಸಂಘಟನೆಯ ಸುಮಾರು 45 ಕಾರ್ಯರ್ತರು ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ಭಾಗವಹಿಸಿ ಒಂದು ದಿನ ಶ್ರಮದಾನ ಮಾಡಿದರು. ಈ ವೇಳೆ ಎಸ್‌ಐಒ ರಾಜ್ಯ ಕಾರ್ಯದರ್ಶಿ ಜೀಶಾನ್‌ ಆಖೀಲ್‌, ಜಿಲ್ಲಾಧ್ಯಕ್ಷ ಮುಸ್ತಫಾ, ಜಿಲ್ಲಾ ಕಾರ್ಯದರ್ಶಿ ಝಕಾರಿಯ, ಸಾಲಿಡಾರಿಟಿ ಯೂಥ್‌ ಮೂಮೆಂಟ್‌ ಅಧ್ಯಕ್ಷ ಗೌಸ್‌ ಪಟೇಲ್‌ ಸೇರಿದಂತೆ ಇತರರು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next