ಕೊಪ್ಪಳ: ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಘಟನೆ ಮಂಗಳವಾರ ನಡೆದಿದೆ. ಗಂಗಾವತಿಯಲ್ಲಿ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಇಕ್ಬಾಲ್ ಅನ್ಸಾರಿ-ಹೆಚ್ ಆರ್ ಶ್ರೀನಾಥ್ ನಡುವಿನ ಬಣ ಬಡಿದಾಟ ಜಗಜ್ಜಾಹೀರಾಗಿದೆ.
ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರುತಮ್ಮ ಭಾಷಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋಸವಾಗಿದೆ. ನನಗೆ ಮೋಸ ಮಾಡಿ ಜನಾರ್ದನ ರೆಡ್ಡಿ ಪರ ಡೀಲ್ ಆಗಿ ರೆಡ್ಡಿಗೆ ಮತ ಹಾಕಿಸಿದರು. ಕೆಲವರು ನನಗೆ ಮೋಸ ಮಾಡಿದರು. ಆದರೆ ನನಗೆ ರಾಜಕೀಯ ಮುಖ್ಯವಲ್ಲ ಎಂದರು. ಜನರು ಆಶೀರ್ವಾದ ಮಾಡಿದರೆ ನಿಮ್ಮ ಸೇವೆ ಮಾಡುವೆ. ಇಲ್ಲದಿದ್ದರೆ ಮನೆಯಲ್ಲಿ ಕುಟುಂಬದ ಜೊತೆ ಇರುವೆ. ನನಗೆ ಮೋಸ ಮಾಡಿದರು ಎಂದು ಶ್ರೀನಾಥ್, ಶಾಮಿದ್ ಸೇರಿ ಹಲವು ನಾಯಕರಿಗೆ ಅನ್ಸಾರಿ ಟಾಂಗ್ ನೀಡಿದರು.
ಅನ್ಸಾರಿ ಭಾಷಣದಿಂದ ಸಿಡಿಮಿಡಿಗೊಂಡಿದ್ದ ಹೆಚ್ ಆರ್ ಶ್ರೀನಾಥ್, ಅನ್ಸಾರಿ ಭಾಷಣ ಮುಗಿದ ಬೆನ್ನಲ್ಲೇ ವೇದಿಕೆ ಮೇಲೆ ಮಾತನಾಡಲು ಎದ್ದು ಬಂದರು. ಈ ವೇಳೆ ಸಚಿವ ಶಿವರಾಜ ತಂಗಡಗಿ ನಂತರ ಮಾತನಾಡುವಂತೆ ಶ್ರೀನಾಥ್ ರನ್ನು ತಡೆದರು. ಅದನ್ನೂ ಮೀರಿ ನಾನು ಮಾತನಾಡಲೇ ಬೇಕು ಎಂದು ಹಠಕ್ಕೆ ಬಿದ್ದು ಸಿಎಂ ಎದುರೇ ಮೈಕ್ ನತ್ತ ಶ್ರೀನಾಥ್ ಆಗಮಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಯಾವುದೇ ಗೊಂದಲ ಮಾತನಾಡದಂತೆ ಸೂಕ್ಷ್ಮ ಸೂಚನೆ ಕೊಟ್ಟರು, ಇದರಿಂದ ಶ್ರೀನಾಥ್ ತಣ್ಣಗಾದರು.
ಸಮಾವೇಶದ ವೇದಿಕೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಬಳಿಕ ಮಾತನಾಡಿದ ಶ್ರೀನಾಥ್, ನಮ್ಮ ಕುಟುಂಬದ ಬಗ್ಗೆ ಒಬ್ಬ ವ್ಯಕ್ತಿ ಅಪ ಪ್ರಚಾರ ಮಾಡುತ್ತಿದ್ದಾರೆ. ನಾವು ಯಾವಾಗಲೂ ಕಾಂಗ್ರೆಸ್ ಪರ ಇದ್ದೇವೆ. ನಾವು ಕಾಂಗ್ರೆಸ್ ಪರವಾದ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಂದರು.
ಹೆಚ್ ಆರ್ ಶ್ರೀನಾಥ್ ಅವರು ಭಾಷಣ ಮಾಡುವ ವೇಳೆ ವೇದಿಕೆ ಮುಂದೆ ಇದ್ದ ಜನಸ್ತೋಮ ಗೋಬ್ಯಾಕ್ ಘೋಷಣೆ ಕೂಗಿ, ಚೇರ್ ತೂರಾಟ ಮಾಡಿದರು. ಶ್ರೀನಾಥ್ ಭಾಷಣಕ್ಕೆ ಜನತೆ ಆಕ್ಷೇಪ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಗಂಗಾವತಿಯಲ್ಲಿ ಮತ್ತೆ ಸಿಎಂ ಎದುರೇ ಕಾಂಗ್ರೆಸ್ ಬಣ ಬಡಿದಾಟ ಬಹಿರಂಗಗೊಂಡಿದೆ.