ಕೊಪ್ಪಳ: ರಾಜ್ಯ ಸರ್ಕಾರವು ಹೈದ್ರಾಬಾದ್ ಕರ್ನಾಟಕವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿ ಆದೇಶ ಹೊರಡಿಸಿ ಮತಿಗೇಡಿ, ಅವಿವೇಕಿತನದ ಕೆಲಸ ಮಾಡಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೈದ್ರಾಬಾದ್ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿ ಆದೇಶ ಮಾಡಿದ್ದಾರೆ. ಆದೇಶ ಮಾಡುವ ಮುನ್ನ ಸ್ವಲ್ಪವೂ ಯೋಚಿಸಿಲ್ಲ. ಸಿಎಂ ಆದೇಶಕ್ಕೆ ಸಾಂವಿಧಾನಿಕ ಮಾನ್ಯತೆಯೇ ಇಲ್ಲ. ಹೆಸರು ಮರುನಾಮಕರಣ ಮಾಡುವ ಅಧಿಕಾರ ರಾಜ್ಯ, ಕೇಂದ್ರ ಸರ್ಕಾರಕ್ಕೂ ಇಲ್ಲ. ಸಂಸತ್ತಿನಲ್ಲಿ ಇದಕ್ಕೆ ಅನುಮೋದನೆ ಪಡೆಯಬೇಕು. ಸಂವಿಧಾನಕ್ಕೆ ತಿದ್ದುಪಡಿಯಾದ ಬಳಿಕ ಹೆಸರು ಮರುನಾಮಕರಣ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಇದರ ಪರಿಜ್ಞಾನ ಬಿಜೆಪಿ ನಾಯಕರಿಗಿಲ್ಲ. ಅಧಿಕಾರಿಗಳಿಗೂ ಈ ಬಗ್ಗೆ ತಿಳಿವಳಿಕೆಯಿಲ್ಲ. ಸಿಎಂ ಮಾಡಿದ ಆದೇಶ ಕಸದ ಬುಟ್ಟಿಗೆ ಸೇರಲು ಲಾಯಕ್ಕಾಗಿದೆ ಎಂದು ಟೀಕೆ ಮಾಡಿದರು.
ಹೈಕ ಭಾಗಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದ್ದಕ್ಕೆ ನನ್ನದೇನು ಆಕ್ಷೇಪವಿಲ್ಲ. ಆದರೆ ಆದೇಶ ಹೊರಡಿಸುವ ಮುನ್ನ ಇತಿಹಾಸ ತಿಳಿಯಬೇಕು. ಸಂವಿಧಾನವನ್ನು ಅರಿತು ಮಾಡಬೇಕು. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371(ಜೆ) ಮೀಸಲಾತಿ ದೊರೆತಿದೆ. ಮೀಸಲಾತಿಯಲ್ಲಿ ಹೈದ್ರಾಬಾದ್ ಕರ್ನಾಟಕ ಎಂದು ಮೂರು ಬಾರಿ ನಮೂದು ಮಾಡಲಾಗಿದೆ. ಈ ಕಲ್ಯಾಣ ಕರ್ನಾಟಕ ನಾಮಕರಣ ಆದೇಶವನ್ನು ಮುಂದೆ ಕೋರ್ಟ್‌ನಲ್ಲಿ ಯಾರಾದರೂ ಪ್ರಶ್ನೆ ಮಾಡಿದರೆ ಹೈದ್ರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕ ಎನ್ನುವ ಚರ್ಚೆ ಬರುತ್ತದೆೆ. ನಮ್ಮ ಪೀಳಿಗೆಗೆ ಈ ವಿಷಯ ಗೊತ್ತಿರುತ್ತದೆ. ಮುಂದಿನ ಪೀಳಿಗೆ ಹೈಕ ಇತಿಹಾಸದ ಬಗ್ಗೆ ತಿಳಿದಿರಲ್ಲ. ಮುಂದೆ ಇದರಿಂದ 371(ಜೆ) ಮೀಸಲಾತಿಗೆ ದೊಡ್ಡ ಅಪಾಯ ಎದುರಾಗುವ ಸಾಧ್ಯತೆ ಇದೆ ಆತಂಕ ವ್ಯಕ್ತಪಡಿಸಿದರು.
ಹೆಸರು ಮರು ನಾಮಕರಣ ಮಾಡಿದ್ದರಿಂದಲೂ ಮೀಸಲಾತಿ ಹೋಗ ಬಹುದು. ಸರ್ಕಾರ ಹೈಕ ಬದಲು ಕಲ್ಯಾಣ ಕರ್ನಾಟಕ ವಿಮೋಚನೆ ಎಂದು ಆದೇಶ ಹೊರಡಿಸಿದೆ. ಕಲ್ಯಾಣ ಕರ್ನಾಟಕ ವಿಮೋಚನೆ ಎಂದರೆ ಏನರ್ಥ? ಕಲ್ಯಾಣದ ವಿಮೋಚನೆ ಎಂಬ ಅರ್ಥ ಕೊಡುತ್ತದೆ. ಇದು ಬಸವಾದಿ ಶರಣರಿಗೆ ಮಾಡಿದ ದೊಡ್ಡ ಅಪಮಾನ. ರಾಜ್ಯ ಸರ್ಕಾರ ಅವಿವೇಕತನದಿಂದ ಈ ಆದೇಶ ಹೊರಡಿಸಿದೆ. ಇದನ್ನು ಗಮನಿಸಿ ಮತ್ತೀಗ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಎಂದು ಆದೇಶ ಹೊರಡಿಸಿದೆ. ಉತ್ಸವ ಆಚರಣೆ ಅಂದರೆ ಏನು? ಇದರ ಬಗ್ಗೆ ಅಧಿಕಾರಿಗಳಿಗೂ ಪರಿಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.
ನಾವು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಮಾಡುವುದು ಏಕೆ? ಹೈಕ ನಿಜಾಮರ ಆಳ್ವಿಕೆಯಿಂದ ವಿಮೋಚನೆ ಹೊಂದಿದ ಪ್ರಯುಕ್ತ ವಿಮೋಚನಾ ದಿನ ಆಚರಿಸುತ್ತಿದ್ದೇವೆ. ಈಗ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ. ಮುಂದಿನ ಪೀಳಿಗೆ ಹೈದ್ರಾಬಾದ್ ಕರ್ನಾಟಕ ಎನ್ನುವುದೇ ಮರೆತು ಹೋಗಲಿದೆ. ಬಿಜೆಪಿ ಇತಿಹಾಸ ತಿರುಚುವ ಕೆಲಸ ಮಾಡಿದೆ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಲಿ ಎಂದು ಒತ್ತಾಯಿಸಿದರು.
ಡಿ.ಕೆ. ಶಿವಕುಮಾರ ಬಂಧನ ವಿಚಾರದಲ್ಲಿ ರಾಜಕೀಯ ಹೆಚ್ಚಿದೆ. ಕೋರ್ಟ್‌ನಲ್ಲಿ ವಿಚಾರಣೆ ಇದೆ. ಏನು ತೀರ್ಪು ಬರುತ್ತೋ ಕಾದು ನೋಡಣ ಎಂದರಲ್ಲದೇ, ಒಕ್ಕಲಿಗರು ಅಭಿಮಾನಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ. ಇಂದು ಎಲ್ಲದರಲ್ಲೂ ಜಾತಿ ಹೆಚ್ಚಾಗಿದೆ. ಸಚಿವ ಸ್ಥಾನ ಹಂಚಿಕೆಯಲ್ಲೂ ಜಾತಿ ಲೆಕ್ಕ ಹಾಕಲಾಗುತ್ತಿದೆ. ಮುಂದೆ ಸಚಿವ ಸ್ಥಾನ ಹಂಚಿಕೆಗೂ ಕಾನೂನು ಬಂದರೆ ಅಚ್ಚರಿ ಇಲ್ಲ ಎಂದರು.