ಕೊಪ್ಪಳ: ದೇಶದಲ್ಲಿ ಮತ್ತೊಮ್ಮೆ ಮೋದಿ ಎನ್ನುವ ಮಾತು ಕೇಳಿ ಬಂದಿದೆ. ಪಾಕಿಸ್ತಾನದಲ್ಲಿ ಮೋದಿ ಬಗ್ಗೆ ಚರ್ಚೆಯಾಗಿದೆ. ವಿದೇಶ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ ಎಂದು ಕೊಪ್ಪಳದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ರಾಜಕೀಯ ಕುಟುಂಬದಿಂದ ಬಂದಿದ್ದಾರೆ. ಅಭ್ಯರ್ಥಿ ತಂದೆ ಕೆ ಶರಣಪ್ಪ ಅವರು ಶಾಸಕರಾಗಿ, ಕೆಕೆಆರ್ಡಿಬಿ ಮಂಡಳಿ ಅಧ್ಯಕ್ಷರಾಗಿದ್ದವರು. ನಮ್ಮ ಅಭ್ಯರ್ಥಿ ಗೆಲ್ಲಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ನಾನು ಕಲ್ಯಾಣ ಭಾಗದಲ್ಲಿ ಪ್ರಚಾರ ಆರಂಭ ಮಾಡಿರುವೆ. ಬಿಜೆಪಿಯಲ್ಲಿ 28 ವರ್ಷ ನಾನು ಕೆಲಸ ಮಾಡಿರುವೆ. ಒಳ ಮೀಸಲಾತಿ ಚರ್ಚೆ ಮುನ್ನೆಲೆ ಇದ್ದಾಗ ಯಾವ ರಾಜಕೀಯ ಪಕ್ಷ ಸ್ಪಂದನೆ ಮಾಡುವೆವು ಎಂದಿದ್ದಾಗ ಬೊಮ್ಮಾಯಿ ಸ್ಪಂದನೆ ಮಾಡಿದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚುಮಾಡಲಿಲ್ಲ. ಬೊಮ್ಮಾಯಿ ಸರ್ಕಾರ ದಲಿತರ ಮೀಸಲಾತಿ ಶೇ. 15 ರಿಂದ 17 ಪ್ರತಿಶತ ಹೆಚ್ಚಳ ಮಾಡಿದರು. ಮಾದಿಗರೊಂದಿಗೆ ಮೋದಿ ಎನ್ನುವ ಮಾತು ಕೇಳಿ ಬಂದಿದೆ ಎಂದರು.
ಗ್ಯಾರಂಟಿಯಿಂದ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತೆದೆ. ಪ್ರಸ್ತುತ ಹಣ, ಅಧಿಕಾರ ದುರುಪಯೋಗ ನಡೆದಿದೆ. ಮೋದಿ ಗ್ಯಾರಂಟಿ ಎಲ್ಲರಿಗೂ ಯೋಜನೆ ಕೊಟ್ಟಿದೆ. ಕಾಂಗ್ರೆಸ್ ದಲಿತರಿಗೆ ಮೀಸಲಿಟ್ಟ ಹಣ ಬಳಕೆ ಮಾಡಿಕೊಂಡಿದ್ದಾರೆ. ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ ಎಂದರು.
ವಿಷ್ಣು ಭಕ್ತರು, ಈಶ್ವರನ ಭಕ್ತರು ಎಂದ ಖರ್ಗೆ ಹೇಳಿಕೆ ವಿಚಾರಕ್ಕೆ ಮಾತನಾಡಿದ ಸಚಿವರು, ಕಾಂಗ್ರೆಸ್ ದೇಶ ಇಬ್ಬಾಗ ಮಾಡಲು ಹೊರಟಿದೆ. ಪಕ್ಷಗಳು ಧರ್ಮಗಳನ್ನು ಇಬ್ಬಾಗ ಮಾಡಬಾರದು. ನಾವೇ ಎಸ್ಸಿಪಿ-ಟಿಎಸ್ಪಿ ಕಾಯ್ದೆ ತರಲು ನಾವು ಸಿದ್ದತೆ ಮಾಡಿಕೊಂಡಿದ್ದೆವು. ಆದರೆ ನಮ್ಮ ಸರ್ಕಾರದ ಅವಧಿ ಮುಗಿಯಿತು. ನಾವು ದಲಿತರ ಪರವಾಗಿದ್ದೇವೆ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ. ತನಿಖೆ ಹಂತದಲ್ಲಿ ನಾವು ಏನೂ ಹೇಳಲು ಬರುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಹೇಮಲತಾ ನಾಯಕ್, ಮೈತ್ರಿ ಪಕ್ಷದ ಸಿ ವಿ ಚಂದ್ರಶೇಖರ, ಮಹಾಂತೇಶ ಮೈನಳ್ಳಿ, ವೆಂಕಟೇಶ ಹಾಲವರ್ತಿ ಉಪಸ್ಥಿತರಿದ್ದರು.