ಕೊಪ್ಪಳ: ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಆರು ಜಿಲ್ಲೆಗಳಲ್ಲಿ 2014-15 ರಿಂದ 2017-18ರವರೆಗಿನ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೊಪ್ಪಳ ಉತ್ತಮ ಪ್ರಗತಿ ಸಾಧಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಬೀದರ್ ಜಿಲ್ಲೆ ನಿಧಾನಗತಿ ಕಾಮಗಾರಿ ನಡೆಸಿ ಕೊನೆಯ ಸ್ಥಾನದಲ್ಲಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡಲು ಹಾಗೂ ಹಿಂದುಳಿದ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ತಜ್ಞರ ವರದಿ ಆಧರಿಸಿ ರಾಜ್ಯ ಸರ್ಕಾರ ಹೈಕ ಭಾಗದ ಆರು ಜಿಲ್ಲೆಗಳಿಗೆ ಪ್ರತಿ ವರ್ಷ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಜಿಲ್ಲೆಗಳಲ್ಲಿ ಅಭಿವೃದ್ಧಿ ನಡೆದಿಲ್ಲ ಎನ್ನುವ ಕೂಗು ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಂತೆ ಹೈಕ ಭಾಗದ ಜಿಲ್ಲೆಗಳು ಅಭಿವೃದ್ಧಿಗೆ ವೇಗ ನೀಡುತ್ತಿವೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ ಹೈಕ ಮಂಡಳಿಗೆ 1,500 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ವಾಗಾœನ ಮಾಡಿದ್ದರು. ಅದರಂತೆ ಮೈತ್ರಿ ಸರ್ಕಾರದಲ್ಲೂ ಅನುದಾನ ಹಂಚಿಕೆಯು ಯಥಾಸ್ಥಿತಿ ಅನುದಾನಕ್ಕೆ ತಕ್ಕಂತೆ ಕೆಲಸ ನಡೆಯಬೇಕೆಂದು ಮಂಡಳಿಯ ಕಾರ್ಯದರ್ಶಿ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿರುವ
ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಕ್ರಮೇಣ ಕಾಣುತ್ತಿದೆ. 3,850 ಕಾಮಗಾರಿಗಳುಪೂರ್ಣ: ಮಂಡಳಿಯಿಂದ ಪ್ರತಿ ಜಿಲ್ಲೆಯಲ್ಲಿ ಕುಡಿಯುವ ನೀರು, ರಸ್ತೆ, ನೈರ್ಮಲ್ಯ, ಸಮುದಾಯ ಭವನ, ಅಂಗನವಡಿ ಕಟ್ಟಡ ಸೇರಿದಂತೆ ಮೈಕ್ರೋ ಹಾಗೂ ಮ್ಯಾಕ್ರೋ ಯೋಜನೆಗಳಲ್ಲಿ ಕಾಮಗಾರಿ ವಿಂಗಡಣೆ ಮಾಡಿ ಪ್ರತಿ ವರ್ಷ ಕಾಮಗಾರಿಗಳ ಗುರಿ ನಿಗದಿಪಡಿಸುತ್ತಿದೆ. ಅದರಂತೆ
ಮಾರ್ಚ್-2019ರ ಅಂತ್ಯಕ್ಕೆ ಮಂಡಳಿ 6 ಜಿಲ್ಲೆಗಳಲ್ಲಿ 6,834 ಕಾಮಗಾ ರಿಗಳನ್ನು ಕೈಗೆತ್ತಿಕೊಂಡು ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ 3,850 ಕಾಮಗಾರಿಗಳನ್ನು ಪೂರ್ಣ ಗೊಳಿಸಿ ಶೇ. 56ರಷ್ಟು ಪ್ರಗತಿ ಸಾಧಿಸಿದೆ.
ಆರ್ಥಿಕ 1,193 ಕೋಟಿ ಬಳಕೆ: ಹೈಕ ಮಂಡಳಿಯು 1,585 ಕೋಟಿ ರೂ. ಆರ್ಥಿಕ ಗುರಿ ನಿಗಪಡಿಸಿದ್ದು, ಬಳ್ಳಾರಿ ಜಿಲ್ಲೆಯು 246 ಕೋಟಿ ಗುರಿಯಲ್ಲಿ 148 ಕೋಟಿ ವೆಚ್ಚ ಮಾಡಿದೆ. ಬೀದರ್ 231 ಕೋಟಿಯಲ್ಲಿ 173 ಕೋಟಿ ವ್ಯಯಿಸಿದೆ.ಕಲಬುರಗಿ-473 ಕೋಟಿಯಲ್ಲಿ 372 ಕೋಟಿ ವ್ಯಯಿಸಿದೆ. ಕೊಪ್ಪಳ ಜಿಲ್ಲೆ 174 ಕೋಟಿಯಲ್ಲಿ, 157 ಕೋಟಿ ವೆಚ್ಚ ಮಾಡಿದೆ.ರಾಯಚೂರು ಜಿಲ್ಲೆ 272 ಕೋಟಿಯಲ್ಲಿ 182 ಕೋಟಿ ವ್ಯಯಿಸಿದೆ. ಯಾದಗಿರಿ 178 ಕೋಟಿಯಲ್ಲಿ 153 ಕೋಟಿಕಾಮಗಾರಿಗಳಿಗೆ ವೆಚ್ಚ ಮಾಡಿದ್ದರೆ, ಆಡಳಿತಾತ್ಮಕ 9 ಕೋಟಿಯಲ್ಲಿ 5 ಕೋಟಿ ವ್ಯಯಿಸಿದೆ. ಒಟ್ಟು ಒಂದು ವರ್ಷದಲ್ಲಿ1585 ಕೋಟಿ ರೂ.ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿ 1193 ಕೋಟಿ ವೆಚ್ಚ ಮಾಡಿದ್ದು ದಾಖಲೆಗಳಿಂದ ತಿಳಿದು ಬಂದಿದೆ.