Advertisement

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

05:32 PM Apr 19, 2024 | Team Udayavani |

■ ಉದಯವಾಣಿ ಸಮಾಚಾರ
ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರು ನಾಮಪತ್ರ ಸಲ್ಲಿಸಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಆದರೆ ಅವರ ತಂದೆ ಕೆ.ಬಸವರಾಜ ಹಿಟ್ನಾಳ ಅವರು ಮಗನ ವಿರುದ್ಧವೇ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಬಯಸಿ ಗುರುವಾರ ನಗರದ ಡಿಸಿ ಕಚೇರಿಯ ಜಿಲ್ಲಾ ಚುನಾವಣಾಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಹೌದು.. ಅಚ್ಚರಿಯಾದರೂ ಸತ್ಯದ ಸಂಗತಿ.. ಹಾಗಂತಾ ನೀವು ಇವರಿಗೇನಾಯ್ತಪ್ಪ ತಂದೆ-ಮಗನಿಗೆ ಎಂದು ಭಾವಿಸಬೇಡಿ. ಪ್ರಸ್ತುತ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರು ನಾಮಪತ್ರ ಸಲ್ಲಿಸಿ ಎಂಟೂ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಆರಂಭಿಸಿ ಪ್ರಚಾರದ ಭರಾಟೆಯಲ್ಲಿದ್ದಾರೆ. ಅವರ ತಂದೆ ಬಸವರಾಜ ಹಿಟ್ನಾಳ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ
ಮಗನ ಪರ ಪ್ರಚಾರ ನಡೆಸುತ್ತಿದ್ದಾರೆ.

ಇದೇನಪ್ಪಾ ಎಂದು ತಲೆ ಕೆರೆದುಕೊಳ್ಳಬೇಡಿ. ಮಗನ ನಾಮಪತ್ರದಲ್ಲಿ ಏನಾದರೂ ದೋಷವಾಗಿ ತಿರಸ್ಕಾರವಾದರೆ ಕನಿಷ್ಟ ಪಕ್ಷೇತರ ಅಭ್ಯರ್ಥಿಯಾದರೂ ಚುನಾವಣಾ ಕಣದಲ್ಲಿ ಇರಬೇಕು ಎನ್ನುವ ಚುನಾವಣೆ ಲೆಕ್ಕಾಚಾರ, ದೂರದೃಷ್ಟಿ, ರಾಜಕೀಯ ಅನುಭವದಿಂದಾಗಿ ಇವರು ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿ ಬಾರಿಯ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಹಿಟ್ನಾಳ ಕುಟುಂಬದಲ್ಲಿ ಪಕ್ಷದಿಂದ ಯಾರಾದರೂ
ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಅವರ ಜೊತೆಗೆ ಇವರದ್ದೇ ಕುಟುಂಬದ ಮತ್ತೊಬ್ಬ ಸದಸ್ಯರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದು ವಾಡಿಕೆ. ಕಳೆದ 2023ರ ವಿಧಾನಸಭಾ ಚುನಾವಣೆಯ ವೇಳೆ ರಾಘವೇಂದ್ರ ಹಿಟ್ನಾಳ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ನಾಮಪತ್ರ ಸಲ್ಲಿಸಿದ್ದರೆ, ಅವರ ಸಹೋದರ ರಾಜಶೇಖರ ಹಿಟ್ನಾಳ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

2014ರಲ್ಲಿ ಹಿಂದೆ ಲೋಕಸಭೆಗೆ ಬಸವರಾಜ ಹಿಟ್ನಾಳ ಅವರು ಸ್ಪರ್ಧೆ ಬಯಸಿ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದರೆ, ಆಗ ಅವರ ಪುತ್ರ ರಾಜಶೇಖರ ಹಿಟ್ನಾಳ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದರು.

Advertisement

ಹೀಗೆ.. ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ತಮ್ಮ ಪಕ್ಷದ ಅಭ್ಯರ್ಥಿಯ ನಾಮಪತ್ರ ಯಾವುದೋ ಕಾರಣಕ್ಕೆ ಅಥವಾ
ದೋಷದಿಂದಲೋ ತಿರಸ್ಕಾರವಾದರೆ ಚುನಾವಣಾ ಕಣದಲ್ಲಿ ಪಕ್ಷೇತರರಾಗಿ ಕಣದಲ್ಲಿ ಉಳಿಯಲು ಸಾಧ್ಯವಾಗಲಿದೆ ಎನ್ನುವ ರಾಜಕೀಯ ಮುಂದಾಲೋಚನೆಯ ಕಾರಣಕ್ಕೆ ಇವರ ಕುಟುಂಬವು ಪ್ರತಿ ಬಾರಿಯೂ ನಾಮಪತ್ರ ಸಲ್ಲಿಸುತ್ತಿದೆ.

ನಾಮಪತ್ರಗಳ ಹಿಂಪಡೆಯುವ ವೇಳೆ ತಮ್ಮ ಪಕ್ಷದ ಅಭ್ಯರ್ಥಿನಾಮಪತ್ರ ಕ್ರಮಬದ್ಧ ಅಧಿಕೃತ ಎಂದು ಘೋಷಿಸಿದ ಬಳಿಕ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವ ಇವರು ನಾಮಪತ್ರ ವಾಪಾಸ್‌ ಪಡೆಯುತ್ತಾರೆ. ಈ ಪದ್ಧತಿ ಕಳೆದ ಕೆಲವು ಚುನಾವಣೆಯಿಂದ ಆರಂಭ ಮಾಡಿದ್ದಾರೆ. ಹೀಗಾಗಿ ಪ್ರಸ್ತುತ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ರಾಜಶೇಖರ ಹಿಟ್ನಾಳ ಅವರ ಪ್ರತಿ ಸ್ಪರ್ಧಿಯಾಗಿ ತಂದೆ ಕೆ.ಬಸವರಾಜ ಹಿಟ್ನಾಳ ಅವರು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ
ಸಂದರ್ಭದಲ್ಲಿ ಇವರ ನಾಮಪತ್ರ ಸಲ್ಲಿಕೆಯು ಮಾತ್ರ ರಾಜಕೀಯ ಚರ್ಚೆಗಳಿಗೆ ಆಸಕ್ತಿ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next