ದತ್ತು ಕಮ್ಮಾರ
ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ವರ್ಷ ಮಳೆ ಕೊರತೆಯಿಂದ ಬರದ ಪರಿಸ್ಥಿತಿಯಲ್ಲಿ ಬೆಳೆ ವಿಮೆಯಾದರೂ ಕೈ ಹಿಡಿಯಲಿದೆ ಎಂಬ ಭರವಸೆಯಿಂದ ರೈತರು ವಿಮೆ ಪಾವತಿಸಿದ್ದರು. ಮಳೆಯ ಕೊರತೆ ಅನುಭವಿಸಿದ ಜಿಲ್ಲೆಗೆ 223 ಕೋಟಿ ರೂ. ಬಂದಿದ್ದು, ರೈತ ಸಮೂಹಕ್ಕೂ ದೊಡ್ಡ ಆಸರೆಯಾಗಿದೆ.
ಹೌದು. ಕೊಪ್ಪಳ ಜಿಲ್ಲೆಯು ಪದೇ ಪದೆ ಬರಕ್ಕೆ ತುತ್ತಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮಳೆಯ ಅವಕೃಪೆ ರೈತರನ್ನು ಬೆಂಬಿಡದೆ ಕಾಡುತ್ತಿದೆ. ಬಿತ್ತನೆ ಮಾಡಿದ ಬೆಳೆ ಹೊಲದಲ್ಲೇ ಕಮರಿ ಹೋಗುವ ಸ್ಥಿತಿಯನ್ನು ನೋಡಿ ಕಣ್ಣೀರಿಡುವಂತಹ ಪರಿಸ್ಥಿತಿ ಎದುರಾಗುತ್ತಿತ್ತು. ಇದೆಲ್ಲವನ್ನು ಅರಿತು ಕೇಂದ್ರ-ರಾಜ್ಯದ ಸಹಯೋಗದಲ್ಲಿ ಫಸಲ್ ಬಿಮಾ ಯೋಜನೆ ಘೋಷಣೆಯಾದ ಬಳಿಕ ರೈತರಿಗೆ ಬೆಳೆ ವಿಮೆ ಬಗ್ಗೆ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿತ್ತು.
ಅದರಂತೆ ಕಳೆದ ವರ್ಷ ಜಿಲ್ಲೆಯಲ್ಲಿ ಮುಂಗಾರಿನಲ್ಲಿ 49,239 ರೈತರು ಬೆಳೆವಾರು ವಿಮೆ ಪಾವತಿ ಮಾಡಿದ್ದರೆ, ಹಿಂಗಾರಿನಲ್ಲಿ 41,306 ರೈತರು ವಿಮೆ ಕಟ್ಟಿದ್ದರು. ಮುಂಗಾರು-ಹಿಂಗಾರು ಸೇರಿ 90,545 ರೈತರು ವಿಮೆ ಪಾವತಿಸಿದ್ದರು. ಈ ಪೈಕಿ ಮುಂಗಾರಿನಲ್ಲಿ 139 ಕೋಟಿ ವಿಮೆ ಮೊತ್ತ, ಹಿಂಗಾರು ಹಂಗಾಮಿನಲ್ಲಿ 95 ಕೋಟಿ ರೂ. ಸೇರಿ ಒಟ್ಟು 234 ಕೋಟಿ ರೂ. ವಿಮಾ ಮೊತ್ತವು ಜಿಲ್ಲೆಗೆ ಬರಬೇಕು ಎಂಬ ಬೇಡಿಕೆಯಿತ್ತು. ಇದರನ್ವಯ ಜಿಲ್ಲೆಯಲ್ಲಿ ಬರದ ಸ್ಥಿತಿ ಆವರಿಸಿದ ಹಿನ್ನೆಲೆಯಲ್ಲಿ ಸರ್ಕಾರವೂ ಸಹ ಜಿಲ್ಲೆಯ ಎಲ್ಲ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿತ್ತಲ್ಲದೇ, ವಿಮಾ ಮೊತ್ತ ಬಿಡುಗಡೆ ಕ್ರಮಕ್ಕೆ ಮುಂದಾಗಿತ್ತು. ಬೇಡಿಕೆಯಂತೆ ವಿಮಾ ಕಂಪನಿಯಿಂದ 234 ಕೋಟಿ ರೂ. ಮಂಜೂರಾತಿಗೆ ಕ್ರಮವಹಿಸಿತ್ತು.
223 ಕೋಟಿ ಈ ವರೆಗೂ ಬಂದಿದೆ: ಜಿಲ್ಲೆಯ ಬೇಡಿಕೆ ಅನುಸಾರ 234 ಕೋಟಿ ರೂ. ಬೆಳೆ ವಿಮೆ ಮೊತ್ತದಲ್ಲಿ 223 ಕೋಟಿ ರೂ. ನವೆಂಬರ್ ಅಂತ್ಯದವರೆಗೂ ಹಂತ ಹಂತವಾಗಿ ಬಿಡುಗಡೆ ಮಾಡಲಾಗಿದೆ. ಅಂದರೆ ಕಳೆದ ಮುಂಗಾರು ಹಂಗಾಮಿನಲ್ಲಿ 139 ಕೋಟಿ ರೂ. ಪೈಕಿ 45,452 ರೈತರ ಖಾತೆಗೆ ನೇರವಾಗಿ 129 ಕೋಟಿ ರೂ. ಜಮೆಯಾಗಿದ್ದರೆ, ಹಿಂಗಾರಿನಲ್ಲಿ 95 ಕೋಟಿ ರೂ. ಬೇಡಿಕೆ ಪೈಕಿ, 40,489 ರೈತರ ಖಾತೆಗೆ 93 ಕೋಟಿ ರೂ. ಜಮೆ ಮಾಡಲಾಗಿದೆ. ಮುಂಗಾರು ಹಾಗೂ ಹಿಂಗಾರು ಎರಡೂ ಸೇರಿ 85941 ರೈತರಿಗೆ 223 ಕೋಟಿ ರೂ. ಬಿಡುಗಡೆಯಾಗಿದೆ. ನಿಜಕ್ಕೂ ಇಷ್ಟೊಂದು ದೊಡ್ಡ ಮೊತ್ತವು ಜಿಲ್ಲೆಗೆ ಮಂಜೂರು ಆಗಿದ್ದು ರೈತರಿಗೆ ಬರದಲ್ಲಿ ವರದಾನವಾಗಿದೆ.
ಕೇವಲ 11 ಕೋಟಿ ಮಾತ್ರ ಬಾಕಿ: ಕಳೆದ ವರ್ಷ 4604 ರೈತರಿಗೆ ಇನ್ನೂ 11.60 ಕೋಟಿ ರೂ. ವಿಮಾ ಕಂಪನಿಗಳಿಂದ ರೈತರ ಖಾತೆಗೆ ಬರುವುದು ಮಾತ್ರ ಬಾಕಿಯಿದೆ. ಇಲ್ಲಿ ರೈತರ ಖಾತೆಯಲ್ಲಿನ ವ್ಯತ್ಯಾಸ, ಕೆಲವೊಂದು ತಾಂತ್ರಿಕ ತೊಂದರೆ ಸೇರಿದಂತೆ ಮಿಸ್ ಮ್ಯಾಚ್ ಆಗಿರುವ ಖಾತೆಗಳ ತೊಂದರೆಯಿಂದ ಈ ರೈತರಿಗೆ ವಿಮೆ ಮೊತ್ತ ಬಂದಿಲ್ಲ. ಅವರೆಲ್ಲರಿಗೂ ವಿಮಾ ಮೊತ್ತ ಪಾವತಿಯಾಗುವುದು ಖಚಿತ ಎನ್ನುತ್ತಿದೆ ಕೃಷಿ ಇಲಾಖೆ. ನಿಜಕ್ಕೂ 223 ಕೋಟಿ ವಿಮಾ ಮೊತ್ತವು ಜಿಲ್ಲೆಗೆ ಮಂಜೂರಾಗಿರುವುದು ರೈತರಿಗೆ ವರದಾನವಾಗಿದೆ.