ಕೊಪ್ಪಳ: ಕೊಪ್ಪಳದಲ್ಲಿನ ಕಲ್ಯಾಣ ನಗರದ ಮನೆಯೊಂದರಲ್ಲಿ ಆಭರಣ, ನಗದು ಕಳ್ಳತನ ಪ್ರಕರಣದಲ್ಲಿ ಮನೆಯ ಯಜಮಾನನೇ ಕಳ್ಳತನ ಮಾಡಿರುವ ವಿಚಿತ್ರ ಘಟನೆ ನಡೆದಿದ್ದು ಈ ಪ್ರಕರಣವನ್ನು ಪೊಲೀಸರು ಕೇವಲ ಕೆಲವೇ ಗಂಟೆಯಲ್ಲಿ ಪತ್ತೆ ಮಾಡಿ ಬಂಧಿತನಿಂದ ನಗದು, ಆಭರಣ ಜಪ್ತಿ ಮಾಡಿದ ಪ್ರಸಂಗವೂ ನಡೆದಿದೆ.
ಕೊಪ್ಪಳದ ಕಲ್ಯಾಣ ನಗರದ ಜ್ಯೋತಿ ಶಿವರಾಜ ಭಜೇಂತ್ರಿ ಎನ್ನುವವರು ಊರಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಅವರು ಮನೆಗೆ ಬಂದು ನೋಡಿದಾಗ ಆಭರಣ, ನಗದು ಕಳ್ಳತನವಾದ ಬಗ್ಗೆ ತಿಳಿದು ಕೂಡಲೇ ನಗರ ಪೊಲೀಸ್ ಠಾಣೆಗೆ ತಮ್ಮ ಮನೆಯಲ್ಲಿ 3,30,000 ನಗದು ಹಾಗೂ 127 ಗ್ರಾಂ ತೂಕದ ಬಂಗಾರ ಕಳ್ಳತನವಾದ ಬಗ್ಗೆ ದೂರು ನೀಡಿದ್ದರು.
ಪ್ರಕರಣದ ಪತ್ತೆಗೆ ಮುಂದಾದ ಪೊಲೀಸರಿಗೂ ಒಂದು ಅಚ್ಚರಿ ಕಾದಿತ್ತು. ಮನೆಯಲ್ಲಿ ಕಳ್ಳತನ ನಡೆದ ವೇಳೆ ಮನೆಯ ಬಾಗಿಲು ಬೀಗ ಮುರಿಯದೇ, ಅಲ್ಮಾರಿಯ ಬೀಗ ಮುರಿಯದೇ ನಗದು ಹಾಗೂ ಆಭರಣ ಕಳ್ಳತನವಾದ ಬಗ್ಗೆ ಗೊತ್ತಾಗಿದೆ. ಇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಲ್ಲ. ಬದಲಾಗಿ ಮನೆಯ ಸಂಬಂಧಿಕರು ಅಥವಾ ಗೊತ್ತಿದ್ದವರೇ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪೊಲೀಸರು ಪ್ರಕರಣದ ಜಾಡು ಹಿಡಿದು ಹೊರಾಟಗ, ಜ್ಯೋತಿ ಅವರ ಗಂಡನೇ ಕಳ್ಳತನ ಮಾಡಿದ ಬಗ್ಗೆ ಗೊತ್ತಾಗಿದೆ. ತಾನೇ ಕಳ್ಳತನ ಮಾಡಿದ ಬಗ್ಗೆ ತನಿಖೆ ವೇಳೆ ಒಪ್ಪಿದ್ದಾನೆ.
ಇದನ್ನೂ ಓದಿ :ಕಾರವಾರ ನೌಕಾನೆಲೆ ವಕ್ರಕೋಶ ಮೇಲೆ ಡ್ರೋನ್ ಹಾರಾಟ ನಿಷೇಧ: ರಕ್ಷಣಾ ಸಚಿವಾಲಯ ಸೂಚನೆ
ಆತನಿಂದ 132 ಗ್ರಾಂ ತೂಕದ 6,60,000 ಬೆಲೆ ಬಾಳುವ ಆಭರಣಗಳು ಹಾಗೂ 2,80,000 ನಗದು ಸೇರಿ ಒಟ್ಟು ಯಜಮಾನನಿಂದ 9,40,000 ರೂ. ವಶಕ್ಕೆ ಪಡೆಯಲಾಗಿದೆ.
ಈ ಘಟನೆ ರವಿವಾರ ನಡೆದಿದ್ದು, ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಭೇದಿಸುವಲ್ಲಿ ಎಸ್ಪಿ ಟಿ.ಶ್ರೀಧರ್, ಡಿಎಸ್‌ಪಿ ಗೀತಾ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಐ ಮಾರುತಿ ಗುಳ್ಳಾರಿ, ಪಿಎಸ್‌ಐ ನಾಗಪ್ಪ ಹೆಚ್, ಮಹಾಂತಪ್ಪ ಸೇರಿ ಸಿಬ್ಬಂದಿ ವರ್ಗದ ಶ್ರಮವು ಶ್ಲಾಘನೀಯವಾಗಿದೆ.