ಕೊಪ್ಪಳ: ನನಗೆ ಒಂದು ವರ್ಷ ಅವಕಾಶ ಕೊಡಿ ಎಂದು ಚಾಮುಂಡಿ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೀಡಿದ ಹೇಳಿಕೆ ವಿಚಾರ ಹಲವು ಚರ್ಚೆಗೆ ಕಾರಣವಾಗಿದೆ. ಹಲವು ರೀತಿಯಲ್ಲಿ ಈ ಹೇಳಿಕೆಗಳನ್ನು ವ್ಯಾಖ್ಯಾನಿಸಲಾಗುತ್ತಿದೆ. ಈ ಬಗ್ಗೆ ಶುಕ್ರವಾರ (ಆ.04) ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಪ್ರತಿ ವರ್ಷ ಚಾಮುಂಡಿ ಬೆಟ್ಟದಲ್ಲಿ ದಸರಾ ಮಾಡುತ್ತೇವೆ. ಮುಂದಿನ ವರ್ಷವೂ ಪ್ರಾರ್ಥನೆ ಮಾಡುವೆ” ಎಂದರು.
ತಾಲೂಕಿನ ಬಸಾಪುರ ಬಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅ.27 ಹಾಗೂ 28 ರಂದು ನನ್ನ ದೆಹಲಿ ಪ್ರವಾಸದ ಬಗ್ಗೆ ಯಾರು ಹೇಳಿದ್ದಾರೆ? ನಾನು ದೆಹಲಿಗೆ ಹೋಗುವೆ ಎನ್ನುವುದು ಇನ್ನೂ ನಿರ್ಧಾರ ಮಾಡಿಲ್ಲ. ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗುತ್ತಿಲ್ಲ ಎಂದರು.
ಬಸವರಾಜ ರಾಯರಡ್ಡಿ ಜಾತಿ ಗಣತಿ ಜಾರಿ ಮಾಡುವ ಕುರಿತು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಶೈಕ್ಷಣಿಕ, ಆರ್ಥಿಕ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆ ವರದಿ ಇನ್ನೂ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕು. ಅದನ್ನು ಸದನದಲ್ಲಿ ಚರ್ಚೆ ಮಾಡಬೇಕು. ಹಿಂದುಳಿದ ವರ್ಗಗಳ ಇಲಾಖೆ ಸಚಿವರ ಜೊತೆ ಚರ್ಚೆ ಮಾಡಬೇಕು. ಚರ್ಚೆ ಮಾಡಿದ ಬಳಿಕ ನಿರ್ಧಾರ ಮಾಡುತ್ತೇವೆ. ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೊರ್ಟ್ ಹೇಳಿದೆ. ಹೈಕಮಾಂಡ್ ಜೊತೆ ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡುವೆವು ಎಂದರು.
ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿಲ್ಲ ಎಂಬ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಜಿಟಿಡಿ ಅವರು ಯಾವ ಪಕ್ಷದವರು? ಜಿ ಟಿ ದೇವೇಗೌಡ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿದ್ದಾರೆ. ಅವರು ಹೇಳಿರುವುದು ಸರಿಯಿದೆ. ಕೋರ್ ಕಮಿಟಿ ಅಧ್ಯಕ್ಷರು ಹೇಳಿದ ಮೇಲೆ ಏನರ್ಥ ಎಂದು ಮಾಧ್ಯಮದವರನ್ನೆ ಮರು ಪ್ರಶ್ನೆ ಮಾಡಿದರು
ಕುಮಾರಸ್ವಾಮಿಯವರಿಗೆ ನನ್ನ ಬಗ್ಗೆ ಭಯವಿದೆ. ಹಾಗಾಗಿ ನನ್ನ ಬಗ್ಗೆ ಮಾತಾಡುತ್ತಿದ್ದಾರೆ. ನಾನು ಅಧಿಕಾರದಲ್ಲಿ ಇದ್ದರೆ ಬಿಜೆಪಿ ಹಾಗೂ ಜೆಡಿಎಸ್ ದುರ್ಬಲವಾಗುತ್ತದೆ ಎನ್ನುವ ಕಾರಣಕ್ಕೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.
ಸತೀಶ ಜಾರಕಿಹೊಳೆ ಎಐಸಿಸಿ ಅಧ್ಯಕ್ಷ ಖರ್ಗೆ ಜೊತೆ ಚರ್ಚೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಓರ್ವ ಸಚಿವರು ಖರ್ಗೆ ಅವರ ಜೊತೆ ಚರ್ಚೆ ಮಾಡಿದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಿದರೆ ಹೇಗೆ? ಊಹಾತ್ಮಕ ಚರ್ಚೆಗಳು ಬೇಡ. ಬರೀ ಕೆಟ್ಟದ್ದನ್ನೇ ವಿಚಾರ ಮಾಡಿದರೆ ಹೇಗೆ? ಒಳ್ಳೆಯದನ್ನು ಯಾಕೆ ವಿಚಾರ ಮಾಡಲ್ಲ ಎಂದರು