ಕೊಪ್ಪಳ: ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕೊಪ್ಪಳದಲ್ಲಿ ಭಿನ್ನಮತ ಭುಗಿಲೆದ್ದಿದೆ. ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗ ಕಾರ್ಯಕರ್ತರು ಬಿಜೆಪಿ ಕಚೇರಿಗೆ ನುಗ್ಗಿ ಕಲ್ಲು ತೂರಾಡಿದ ಪ್ರಸಂಗ ಗುರುವಾರ ನಡೆದಿದೆ.
ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಡಾ.ಕೆ. ಬಸವರಾಜ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಯಲ್ಲಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಗ್ಲಾಸ್ ಹೊಡೆದು ಹಾಕಿ ಆಕ್ರೋಶ ಹೊರ ಹಾಕಿದ ಸಂಗಣ್ಣ ಬೆಂಬಲಿಗರು, ಅಭ್ಯರ್ಥಿ ಬಸವರಾಜ ಹಾಗು ಮುಖ್ಯ ಸಚೇತಕ ದೊಡ್ಡನಗೌಡ ಮಾಧ್ಯಮಗೋಷ್ಠಿ ಮಧ್ಯೆ ನುಗ್ಗಲು ಯತ್ನಿಸಿದ್ದಾರೆ. ಅಭ್ಯರ್ಥಿ ಹಾಗು ಬಿಜೆಪಿಗೆ ಧಿಕ್ಕಾರ ಕೂಗಿದರು. ಕಚೇರಿಗೆ ನುಗ್ಗಿ ಖುರ್ಚಿ, ಭಾರತ ಮಾತೆಯ ಫೋಟೊ, ಕಿಟಕಿ ಗ್ಲಾಸ್ ಒಡೆದರು.
ಸಂಗಣ್ಣ ಮನೆಯಲ್ಲಿ ಹೈಡ್ರಾಮಾ
ಇದಕ್ಕೂ ಮೊದಲು ಟಿಕೆಟ್ ಪಡೆದ ಅಭ್ಯರ್ಥಿ ಡಾ ಕೆ ಬಸವರಾಜ ಅವರು ಕರಡಿ ಸಂಗಣ್ಣ ಮನೆಗೆ ಆಗಮಿಸಿದರು. ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಜೊತೆಗೆ ಆಗಮಿಸಿದ್ದರು. ಈ ವೇಳೆ ಡಾ ಕೆ ಬಸವರಾಜ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಯಾರನ್ನು ಕೇಳಿ ಟಿಕೆಟ್ ಪಡೆದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಸದರ ಬೆಂಬಲಿಗರು, ಕರಡಿ ಸಂಗಣ್ಣ ಪರ ಘೋಷಣೆ ಕೂಗಿದರು. ಮಾನ ಮರ್ಯಾದೆ ಇದ್ದರೆ ಬರಬಾರದಿತ್ತು ಎಂದು ಆಕ್ರೋಶ ಹೊರಹಾಕಿದರು.
ನೀವು ಸೋಲುತ್ತೀರಿ ಎಂದು ಡಾ ಕೆ ಬಸವರಾಜಗೆ ಹೇಳಿದ ಬೆಂಬಲಿಗರು, ಕರಡಿ ಸಂಗಣ್ಣರನ್ನ ಮನೆಯ ಮೇಲುಗಡೆ ಕಳುಹಿಸಿ,ಡಾ ಬಸವರಾಜ, ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ರನ್ನು ಹೋಗಲು ಬಿಡಲಿಲ್ಲ.