ದತ್ತು ಕಮ್ಮಾರ
ಕೊಪ್ಪಳ: ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಪ್ರತಿ ವರ್ಷ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ. ಪ್ರಸಕ್ತ ವರ್ಷವೂ ಇದಕ್ಕೆ ಹೊರತಾಗಿಲ್ಲ. ಸ್ನಾತಕ ಪದವಿಯ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಲೋಪದೋಷ ಕಂಡು ಬಂದಿದೆ.
ಹೌದು. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂಎ ವಿಭಾಗದಲ್ಲಿ 11 ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಹಲವು ಲೋಪದೋಷಗಳು ಕಂಡು ಬಂದಿದ್ದು, ಎಂಎ ತೃತೀಯ ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಪೂಜಾ ಎನ್ನುವ ವಿದ್ಯಾರ್ಥಿನಿಯ ಪ್ರಥಮ ಸೆಮಿಸ್ಟರ್ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯೊಬ್ಬನ ಭಾವಚಿತ್ರ ಮುದ್ರಣಗೊಂಡಿದೆ. ಇನ್ನು ಚೇತನಾ ಎನ್ನುವ ವಿದ್ಯಾರ್ಥಿನಿಯ ಅಂಕಪಟ್ಟಿಯಲ್ಲಿ ಶಾಂತಾ ಎನ್ನುವ ವಿದ್ಯಾರ್ಥಿನಿಯ ಭಾವಚಿತ್ರ ಮುದ್ರಣಗೊಂಡಿದೆ.
ಇಂತಹ ಹಲವು ದೋಷಗಳು ಅಂಕಪಟ್ಟಿಯಲ್ಲಿವೆ. ಇವರೆಲ್ಲ ಮೂರನೇ ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದು ಕೇವಲ ವಿವಿ ವ್ಯಾಪ್ತಿಯಡಿ ಬರುವ ಒಂದೇ ಕಾಲೇಜಿನಲ್ಲಿ ಕಂಡು ಬಂದ ಸಮಸ್ಯೆ, ವಿವಿಯಡಿ ಇನ್ನೂ ಹಲವು ಕಾಲೇಜುಗಳಿವೆ. ಅಲ್ಲಿಯೂ ಇಂತಹದ್ದೇ ದೋಷ ಕಂಡು ಬಂದಿವೆ. ಆದರೆ ಅಂಕಪಟ್ಟಿಯಲ್ಲಿನ ಲೋಪದೋಷಕ್ಕೆ ವಿಶ್ವವಿದ್ಯಾಲಯ ಮಾತ್ರ ತನ್ನ ತಪ್ಪು ಒಪ್ಪಿಕೊಳ್ಳುತ್ತಿಲ್ಲ. ಕಾಲೇಜಿನ ಮೇಲೆ ಹಾಕಿ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ. ನಾವು ಅಂಕಪಟ್ಟಿಯಲ್ಲಿ ತಪ್ಪು ಮಾಡಲು ಸಾಧ್ಯವಿಲ್ಲ. ಕಾಲೇಜಿನ ಪ್ರಾಚಾರ್ಯರು ಪರೀಕ್ಷೆ ವೇಳೆ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್ ಮಾಡುವ ಸಮಯದಲ್ಲಿ ಇಂತಹ ಲೋಪದೋಷ ಮಾಡಿದರೆ ಅಂಕಪಟ್ಟಿ ಮುದ್ರಣದಲ್ಲೂ ಲೋಪವಾಗಿರುತ್ತದೆ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಇಂತಹ ತಪ್ಪು ಮಾಡುವವರ ವಿರುದ್ಧ ಕ್ರಮವೇ ಆಗುತ್ತಿಲ್ಲ.
ತಿದ್ದುಪಡಿ ಅಂಕಪಟ್ಟಿಗೆ ತಿಂಗಳು ಬೇಕು:ವಿಶ್ವವಿದ್ಯಾಲಯವು ನೀಡುವ ಅಂಕಪಟ್ಟಿಯನ್ನು ಪುನಃ ತಿದ್ದುಪಡಿ ಮಾಡಬೇಕೆಂದರೆ ತಿಂಗಳು ಗಟ್ಟಲೇ ಸಮಯ ಹಿಡಿಯುತ್ತದೆ. ವಿದ್ಯಾರ್ಥಿಗಳು ಪುನಃ ಕಾಲೇಜಿನ ಮೂಲಕ ವಿವಿಗೆ ಮನವಿ ಮಾಡಿಕೊಳ್ಳಬೇಕು. ತಿದ್ದುಪಡಿಗೆ ಅರ್ಜಿ ಸಲ್ಲಿಸಬೇಕು. ಜತೆಗೆ ಪ್ರತಿ ವಿದ್ಯಾರ್ಥಿಯು 150 ರೂ. ಶುಲ್ಕವನ್ನೂ ಪಾವತಿಸಿ ತಿಂಗಳು ಕಾಯಬೇಕು. ಯಾರೋ ಮಾಡಿದ ತಪ್ಪಿನಿಂದ ವಿದ್ಯಾರ್ಥಿಗಳು ತಿಂಗಳುಗಟ್ಟಲೇ ತಿದ್ದುಪಡಿ ಅಂಕಪಟ್ಟಿಗೆ ಕಾಯುವ ಸ್ಥಿತಿ ಬಂದಿದೆ.
ಇನ್ನೂ ಅಂಕಪಟ್ಟಿಯನ್ನೇ ಕಳಿಸಿಲ್ಲ: ಇನ್ನೂ ವಿಚಿತ್ರವೆಂದರೆ ವಿಶ್ವವಿದ್ಯಾಲಯವು ಕೆಲ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಕಾಲೇಜಿಗೆ ಕಳಿಸಿಯೇ ಇಲ್ಲ. ಇಂದು ಬರುತ್ತೆ, ನಾಳೆ ಬರುತ್ತೆ ಎಂದು ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ಕಾಯುವ ಸ್ಥಿತಿ ಬಂದಿದೆ. ಕೆಲ ಅಂಕಪಟ್ಟಿಗಳನ್ನು ಕಳಿಸಿದ್ದರೂ ಮುದ್ರಣ ಮಾಡಿದ ಬಳಿಕ ಲ್ಯಾಮಿನೇಶನ್ ಮಾಡದೇ ಹಾಗೆ ರವಾನಿಸಿದ್ದಾರೆ. ಕೆಲವು ಮಾತ್ರ ಲ್ಯಾಮಿನೇಶನ್ ಮಾಡಿ ಕಳಿಸಿದ್ದಾರೆ. ಇಲ್ಲಿ ವಿವಿಯು ಬೇಕಂತಲೇ ಈ ರೀತಿ ಮಾಡುತ್ತದೆಯೋ ಏನೋ ಇದರ ಉದ್ದೇಶವೇ ಅರ್ಥವಾಗುತ್ತಿಲ್ಲ.
ಜಿಲ್ಲೆಯ ವಿವಿಧ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಲೋಪದೋಷ ಕಂಡು ಬಂದಿವೆ. ಈ ಬಗ್ಗೆ ತನಿಖೆ ನಡೆಸಬೇಕು. ಜತೆಗೆ ಲೋಪದೋಷವಾಗಿರುವ ಅಂಕಪಟ್ಟಿ ತಿದ್ದುಪಡಿ ಮಾಡಿ, ಮುದ್ರಿಸಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯದೇ ಉಚಿತವಾಗಿ ಪೂರೈಸಬೇಕು. ಲೋಪದೋಷ ಬಗ್ಗೆ ಪತ್ತೆ ಮಾಡಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.
.
ಅಮರೇಶ ಕಡಗದ,
ಎಸ್‌ಎಫ್‌ಐ, ಜಿಲ್ಲಾಧ್ಯಕ್ಷ
ಅಂಕಪಟ್ಟಿಯಲ್ಲಿ ಲೋಪದೋಷ ನಮ್ಮಿಂದ ಆಗಿರುವ ಸಾಧ್ಯತೆ ತುಂಬಾ ಕಡಿಮೆ. ಆಯಾ ಕಾಲೇಜಿನಲ್ಲಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮಾಹಿತಿ ಆನ್ ಲೈನ್‌ನಲ್ಲಿ ಭರ್ತಿ ಮಾಡುವ ವೇಳೆ ಲೋಪ ಮಾಡಿದರೆ ಅಂಕಪಟ್ಟಿ ಮುದ್ರಣ ತಪ್ಪಾಗಿ ಬರುತ್ತವೆ. ಇದನ್ನು ಪರಿಶೀಲಿಸುವೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವೆ.
.
ಆನಂದ ಆಲ್ಗೂರು,
ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿ ಕುಲಪತಿ