ಕೊಪ್ಪಳ: ಕಳೆದ ಒಂಭತ್ತು ತಿಂಗಳಿಂದ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತೆಯರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಸರ್ಕಾರ ನಿತ್ಯವೂ ನಮ್ಮನ್ನು ವಿವಿಧ ಸೇವೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ಸಕಾಲಕ್ಕೆ ಪ್ರೋತ್ಸಾಹಧನ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ತುಂಬ ಕಷ್ಟವಾಗುತ್ತಿದೆ. ನಿತ್ಯದ ಬದುಕಿಗೆ ಹಣಕಾಸಿನ ಅವಶ್ಯಕತೆ ಪ್ರತಿ ಕುಟುಂಬಕ್ಕೂ ಇದೆ. ಆದರೆ 9 ತಿಂಗಳಿಂದ ಪ್ರೋತ್ಸಾಹಧನ ನೀಡಿಲ್ಲ, ಹೀಗಾದರೆ ಆಶಾ ವೃತ್ತಿಯನ್ನೇ ನಂಬಿಕೊಂಡು ಜೀವನ ನಡೆಸುವ ನಮಗೆ ಆತಂಕ ಶುರುವಾಗಿದೆ ಎಂದು ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹಧನ ಒಟ್ಟಿಗೆ ಸೇರಿಸಿ ಕೊಡಬೇಕು. ಕನಿಷ್ಟ ಮಾಸಿಕ ಗೌರವಧನ 12 ಸಾವಿರ ರೂ. ನಿಗದಿ ಮಾಡಬೇಕು. ಆಶಾ ಸಾಫ್ಟ್ ಅಥವಾ ಆಶಾ ಪೋರ್ಟ್‌ಲ್ಗೆ ಆಶಾ ಪ್ರೋತ್ಸಾಹಧನ ಜೋಡಣೆ ರದ್ದುಪಡಿಸಬೇಕು. ಈ ಹಿಂದಿನ ಆರೋಗ್ಯ ಸಚಿವರು ನೀಡಿದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ನಮ್ಮ ಜೀವನಕ್ಕೆ ಭದ್ರತೆ ಒದಗಿಸಬೇಕು. ನಿವೃತ್ತಿ ಹೊಂದಿದ ಆಶಾಗಳಿಗೆ ಪಿಂಚಣಿ ನೀಡಬೇಕು. ನಿವೃತ್ತಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರನ್ನು ಸಾಮಾಜಿಕ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ತಂದು ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಕೂಡಲೇ ಜಾರಿಗೊಳಿಸಿ ಸಂಪೂರ್ಣ ವಿಮೆಯನ್ನು ಸರ್ಕಾರವೇ ಪಾವತಿಸಬೇಕು. ಆಶಾಗಳಿಗೆ ಹೆರಿಗೆ ರಜೆ, ಜೊತೆಗೆ ರಜೆಯಲ್ಲೂ ಮಾಸಿಕ ಗೌರವಧನ ನೀಡಬೇಕು. ತಿಂಗಳಿಗೆ 2 ಬಾರಿ ಲಾರ್ವಾ ಸರ್ವೇ ಮತ್ತು ವಿವಿಧ ಸರ್ವೇಗಳನ್ನು ನಡೆಸಲಾಗಿದ್ದು ಹಲವು ಕಡೆ ಸರ್ವೇ ಮಾಡಿದ್ದಕ್ಕೆ ಇನ್ನೂ ಪ್ರೋತ್ಸಾಹಧನ ನೀಡಿಲ್ಲ. ಪ್ರತಿ ಸರ್ವೇಗೂ 300 ರೂ. ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿ ತಿಂಗಳು ವೇತನವನ್ನು ನಿಗದಿತ ದಿನಾಂಕದೊಳಗೆ ಬಿಡುಗಡೆ ಮಾಡಬೇಕು. ಕೆಲವೆಡೆ ಆಶಾಗಳಿಗೆ ನಿಗಪಡಿಸಿದ ಕೆಲಸವಲ್ಲದೇ ಹೆಚ್ಚುವರಿ ಕೆಲಸ ನೀಡಲಾಗುತ್ತಿದೆ. ಈ ಕೆಲಸದ ಹೊರೆಯಿಂದ ತುಂಬ ತೊಂದರೆಯಾಗುತ್ತಿದ್ದು, ಸರ್ಕಾರ ಈ ಬಗ್ಗೆ ಕಾಳಜಿ ವಹಿಸಬೇಕು. ಕೇಂದ್ರದ ಮಾರ್ಗಸೂಚಿಯಂತೆ ನಗರ ಆಶಾಗಳಿಗೆ 200-2500 ಜನಸಂಖ್ಯೆಗೆ ಮಾತ್ರ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಆಶಾ ನಿವಾರಣಾ ಸಭೆ ನಡೆಸಿ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಬೇಕೆಂದು ಒತ್ತಾಯಿಸಿದರು.
ನಗರದ ಅಶೋಕ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿತು. 500ಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಳೆ ಬಂದರೂ ಲೆಕ್ಕಿಸದೇ ಮಳೆಯಲ್ಲಿ ನೆನೆಯುತ್ತಲೇ ರಾಜ್ಯ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಘೋಷಣೆ ಕೂಗಿ ನೋವು ಹೊರ ಹಾಕಿದರು. ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದ ಬಳಿ ಮಳೆಯಲ್ಲೇ ನೆನೆಯುತ್ತ ಎಡಿಸಿ ಸೈಯಿದಾ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆಶಾ ಕಾರ್ಯಕರ್ತೆಯೊಬ್ಬರು ಜಾರಿ ಬಿದ್ದು ತೀವ್ರ ನೋವು ಅನುಭವಿಸಿದ ಪ್ರಸಂಗವೂ ನಡೆಯಿತು.