ಕೊಪ್ಪಳ: ಜಿಲ್ಲೆಯಲ್ಲಿನ ಆಧಾರ್ ನೋಂದಣಿ ಕೇಂದ್ರ, ಬ್ಯಾಂಕ್ ಸೇರಿದಂತೆ ಅಂಚೆ ಕಚೇರಿಯಲ್ಲಿ ಆಧಾರ್ ನೋಂದಣಿ ಮಾಡಿಸಬೇಕೆಂದರೆ ಜನರ ಗೋಳಾಟ ಹೇಳ ತೀರದಾಗಿದೆ. ನೋಂದಣಿ ಇಲ್ಲವೇ ತಿದ್ದುಪಡಿ ಮಾಡಿಸಬೇಕೆಂದರೆ ಒಂದು ದಿನ ಮುಂಚಿತವೇ ಕೇಂದ್ರಗಳ ಮುಂದೆ ರಾತ್ರಿ ಜಾಗರಣೆ ಮಾಡಬೇಕಾದ ಸ್ಥಿತಿ ಬಂದೊದಗಿದೆ.
ಆಧಾರ್ ಸಂಖ್ಯೆ ಇಂದು ಪ್ರತಿಯೊಂದು ಸರ್ಕಾರಿ ಸೌಲಭ್ಯ ಸೇರಿದಂತೆ ಖಾಸಗಿ ವಲಯದಲ್ಲೂ ಬಳಕೆಯಾಗುತ್ತಿದೆ. ಪ್ರಸ್ತುತ ದಿನದಲ್ಲಿ ಸರ್ಕಾರ ಪ್ರತಿಯೊಂದು ಯೋಜನೆಗೂ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಮಾಡಲಾಗಿದೆ. ವಿದ್ಯಾರ್ಥಿಗಳ ದಾಖಲಾತಿಯಿಂದ ಹಿಡಿದು ಸಾಲ ಪಡೆಯಬೇಕೆಂದರೂ ಆಧಾರ್ ಬೇಕು ಎನ್ನುವಂತ ಪರಿಸ್ಥಿತಿಯಿದೆ. ಆದರೆ ಅದೇ ಆಧಾರ್ ಸಂಖ್ಯೆ ಪಡೆಯಬೇಕೆಂದರೆ ನಿತ್ಯ ನರಳಾಟದಲ್ಲಿ ನೋಂದಣಿ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರವು ಜಿಲ್ಲೆಯಲ್ಲಿನ ತಹಸೀಲ್ ಕಚೇರಿ, ನಾಡ ಕಚೇರಿ, ಬ್ಯಾಂಕ್ ಸೇರಿದಂತೆ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ನೋಂದಣಿಗೆ ಮಾತ್ರ ಅವಕಾಶ ನೀಡಿದೆ. ನಿತ್ಯವೂ ಈ ಕೇಂದ್ರಗಳ ಮುಂದೆ ಸರದಿ ಸಾಲು ನಿಲ್ಲಬೇಕು. ಇಡೀ ದಿನ ಕಾದರೂ ಸರದಿ ಬರದಂತ ಸ್ಥಿತಿಯಿದೆ. ದಿನಕ್ಕೆ ಕೇವಲ 30 ಜನರಿಗೆ ಟೋಕನ್ ಕೊಟ್ಟು ಒಂದು ದಿನಕ್ಕೆ ಇಷ್ಟೇ ಜನರ ಆಧಾರ್ ನೋಂದಣಿ ಮಾಡುವ ಕುರಿತು ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದಾರೆ. ಉಳಿದ ಜನರ ಗೋಳಾಟ ಅಷ್ಟಿಸ್ಟಲ್ಲ.
ಆಧಾರ್‌ನಲ್ಲಿ ತಿದ್ದುಪಡಿ ಹಲವು: ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆ ಸಾಮಾನ್ಯವಾಗಿದೆ. ಆದರೆ ಈ ಮೊದಲು ಗ್ರಾಮೀಣ ಪ್ರದೇಶದ ಜನತೆ ಆಧಾರ್ ನೋಂದಣಿ ಮಾಡಿಸಿದ್ದ ವೇಳೆ ಕೊಟ್ಟ ಮೊಬೈಲ್ ಸಂಖ್ಯೆ ಕಳೆದುಕೊಂಡು ಫಜೀತಿ ಪಡುತ್ತಿದ್ದಾರೆ. ತಮ್ಮ ಹಳೆ ಆಧಾರ್ ಸಂಖ್ಯೆಗೆ ಹೊಸ ಮೊಬೈಲ್ ನಂಬರ್ ಜೋಡಣೆಗೆ ಕೇಂದ್ರಗಳ ಮುಂದೆ ಹರಸಾಹಸ ಮಾಡಬೇಕಿದೆ. ಇನ್ನೂ ಮಕ್ಕಳ ಹೊಸ ನೋಂದಣಿ, ವಿಳಾಸ ಬದಲಾವಣೆ ಸೇರಿದಂತೆ ಆಧಾರ್‌ನಲ್ಲಿ ತಿದ್ದುಪಡಿಯು ಹಲವು ಇವೆ. ಆದರೆ ಆನ್‌ಲೈನ್‌ನಲ್ಲಿ ವಿಳಾಸ ಬದಲಾವಣೆಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಬಿಟ್ಟರೆ, ಮತ್ಯಾವ ಬೇರೇ ಮಾರ್ಗಗಳೇ ಇಲ್ಲ. ಹೀಗಾಗಿ ಜನತೆ ಅನಿವಾರ್ಯವಾಗಿ ನೋಂದಣಿ ಕೇಂದ್ರಕ್ಕೆ ಬಂದೇ ತಿದ್ದುಪಡಿ, ಸೇರ್ಪಡೆ ಮಾಡಿಸಬೇಕಿದೆ.
ಜಪ್ಪಲಿ, ಕಲ್ಲು, ಬಾಟಲಿ, ರಾತ್ರಿ ಜಪ: ಜಿಲ್ಲೆಯ ಹಲವು ಕೇಂದ್ರದಲ್ಲಿ ಆಧಾರ್ ನೋಂದಣಿಗೆ ಜನರು ಕೇಂದ್ರಕ್ಕೆ ರಾತ್ರಿಯೇ ಬಂದು ನಿದ್ರೆ ಬಿಟ್ಟು ಬೆಳಗಿನ ಜಾವ ಸಿಬ್ಬಂದಿಗಳಿಂದ ಟೋಕನ್ ಪಡೆಯುತ್ತಿದ್ದಾರೆ. ಇನ್ನೂ ಇಡೀ ದಿನ ಚಪ್ಪಲಿ ಕಲ್ಲು, ನೀರಿನ ಬಾಟಲಿ ಸರದಿ ಸಾಲಿನಲ್ಲಿಟ್ಟು ಆಧಾರ್ ನೋಂದಣಿ ಮಾಡಿಸುತ್ತಿದ್ದಾರೆ. ವೃದ್ಧರು ಮನೆಯಿಂದ ಬುತ್ತಿ ಕಟ್ಟಿಕೊಂಡು ಬಂದು ಕೇಂದ್ರದ ಮುಂದೆ ಇಡೀ ದಿನ ಕುಳಿತು ಆಧಾರ್ ನೋಂದಣಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಆಧಾರ್ ನೋಂದಣಿ ಫಜೀತಿ ಕೇವಲ ಕೊಪ್ಪಳ ಜಿಲ್ಲೆಯಲ್ಲಷ್ಟೆ ಅಲ್ಲ. ಹಲವು ಜಿಲ್ಲೆಯಲ್ಲೂ ಇದೇ ಸಮಸ್ಯೆಯಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಆಧಾರ್ ನೋಂದಣಿಗೆ ಜನರು ಅನುಭವಿಸುವ ಯಮಯಾತನೆ ಅಷ್ಟಿಸ್ಟಲ್ಲ. ಜಿಲ್ಲಾಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ. ಹೆಚ್ಚುವರಿ ನೋಂದಣಿ ಕೇಂದ್ರಗಳನ್ನು ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ. ಇಲ್ಲದೇ ಹೋದರೆ ಮುಂದೆ ಜನತೆ ಜಿಲ್ಲಾಡಳಿತ, ನೋಂದಣಿ ಕೇಂದ್ರಗಳ ವಿರುದ್ಧ ಪ್ರತಿಭಟನೆ ನಡೆಸಿದರೂ ಅಚ್ಚರಿಯಿಲ್ಲ.