ಯಲಬುರ್ಗಾ: ಮಡಿವಾಳ ಮಾಚಿದೇವರು ಮಾನವ ಕುಲದ ಆಸ್ತಿಯಾಗಿದ್ದು, ಅವರ ವಚನ ಮತ್ತು ತತ್ವಾದರ್ಶಗಳನ್ನು ಪ್ರತಿಯೊಬ್ಬರೂ
ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಪಂ ಇಒ ಡಾ| ಜಯರಾಮ್ ಚವ್ಹಾಣ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಸೋಮವಾರ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸಮಾಜ ಸುಧಾರಕರಾದ ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದರು.
ಸಮಸ್ಯೆಗಳಿಗೆ ಹೆದರದೇ ಮುನ್ನುಗ್ಗಿ ಜನರ ಮನಸ್ಸಿನಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಾಮಾಜಿಕ ಸಮಾನತೆಯ ತತ್ವ ಸಂದೇಶಗಳನ್ನು ಸಾರಿದ ಶ್ರೇಷ್ಠ ಶರಣರಾಗಿದ್ದಾರೆ. ಅವರ ವಚನಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಶರಣರ ಮಾರ್ಗದರ್ಶನದಲ್ಲಿ ನಡೆಯಬೇಕಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದಾಗ ಮಾತ್ರ ಒಂದು ಸಮಾಜ ಬಲಿಷ್ಠವಾಗಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೆ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮುಖಂಡ ಶರಣಪ್ಪ ಗೊಲ್ಲರ, ಶೇಖಪ್ಪ ಉಪ್ಪಾರ, ಬಸವಲಿಂಗಪ್ಪ ಹಾಗೂ ಕಚೇರಿ ಸಿಬ್ಬಂದಿ ಇದ್ದರು.
ಓದಿ :
ಅನುದಾನ ಬಳಸದ ಅಧಿಕಾರಿ ವಿರುದ್ಧ ಕ್ರಮ