ಗಂಗಾವತಿ:ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೊಪ್ಪಳ ವಿಶ್ವವಿದ್ಯಾಲಯ ಗಂಗಾವತಿಯಲ್ಲಿ ನೂತನ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿದೆ.
ಗಂಗಾವತಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ. ಕನ್ನಡ ಮತ್ತು ಇಂಗ್ಲೀಷ್ ಹಾಗೂ ಎಂ.ಕಾಂ. ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.
2023-24ನೇ ಶೈಕ್ಷಣಿಕ ಸಾಲಿನ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಗಳ ಪ್ರವೇಶಾತಿಗೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಈ ಹಿಂದೆ ಡಿ. 03 ರವರೆಗೆ ನಿಗದಿಪಡಿಸಲಾಗಿತ್ತು. ಇದೀಗ ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 14 ಡಿಸೆಂಬರ್, 2023 ರವರೆಗೆ ವಿಸ್ತರಿಸಲಾಗಿದೆ.
ನೂತನ ಸ್ನಾತಕೋತ್ತರ ಕೇಂದ್ರ ಗಂಗಾವತಿ ನಗರದ ಹಳೆಯ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯಾರಂಭ ಮಾಡಲಿದೆ.ಈ ಕಟ್ಟಡ ದುರಸ್ತಿ ಮಾಡಿಕೊಡಲು ಶಾಸಕ ಗಾಲಿ ಜನಾರ್ದನರೆಡ್ಡಿ ಒಪ್ಪಿದ್ದು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆ ವಿವಿ ಕುಲಸಚಿವರು ಕೋರಿದ್ದಾರೆ.
ಈಗಾಗಲೇ ಪ್ರಸಕ್ತ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಗಂಗಾವತಿಗೆ ಪ್ರವೇಶದ ಆದ್ಯತೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
ಸ್ನಾತಕೋತ್ತರ ಪದವಿಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಿದ ನಂತರ ಅದರ ಒಂದು ಪ್ರತಿಯನ್ನು ದಿನಾಂಕ: 14 ಡಿಸೆಂಬರ್, 2023ರ ಸಂಜೆ 5.00ರೊಳಗಡೆ ಕಡ್ಡಾಯವಾಗಿ ಕುಲಸಚಿವರು (ಆಡಳಿತ) (ಪ್ರಭಾರ), ಕೊಪ್ಪಳ ವಿಶ್ವವಿದ್ಯಾಲಯ, ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ತಳಕಲ್ 583238 ಇವರ ಕಛೇರಿಗೆ ತಲುಪಿಸತಕ್ಕದ್ದು. ಒಂದು ವೇಳೆ ತಲುಪಿಸದೇ ಇದ್ದಲ್ಲಿ ಅಂತಹ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ವಿವಿ ಪ್ರಕಟಣೆ ತಿಳಿಸಿದೆ.