Advertisement

ಕೊಪ್ಪಳ: ಆಮೆಗತಿಗಿಂತಲೂ ನಿಧಾನ ರಂಗಮಂದಿರ ನಿರ್ಮಾಣ

05:46 PM Jul 18, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಡಿ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಜಿಲ್ಲಾ ರಂಗ ಮಂದಿರವನ್ನು ನಿರ್ಮಿಸುವ ಕನಸು ಕಂಡು ಬರೋಬ್ಬರಿ 13 ವರ್ಷಗಳೇ ಗತಿಸಿವೆ. ಆದರೂ ಮಂದಿರ ಪೂರ್ಣಗೊಂಡಿಲ್ಲ. 10.50 ಕೋಟಿ ಕೊಟ್ಟರೂ ಕಾಮಗಾರಿ ಮುಗಿದಿಲ್ಲ. ಇಲ್ಲಿನ ಜನಪ್ರತಿನಿಧಿಗಳ ಆಡಳಿತ ವೈಖರಿಗೆ ಇದು ಹಿಡಿದ ಕೈ ಗನ್ನಡಿಯಾಗಿದೆ.

Advertisement

ಹೌದು.. ಕೊಪ್ಪಳ ಜಿಲ್ಲೆಯು ಸಾಂಸ್ಕೃತಿಕ ವೈಭವದಲ್ಲಿ ತನ್ನದೇ ಹೆಸರು ಮಾಡಿದೆ. ಇಲ್ಲಿನ ನಾನಾ ಕಲೆಗಳು, ಕಲಾವಿದರು ನಾಡಿನುದ್ದಗಲಕ್ಕೂ ವಿಸ್ತಾರ ಹೊಂದಿ ಜಿಲ್ಲೆಯ ಹಿರಿಮೆಯ ಹೆಚ್ಚಿಸಿವೆ. ದೇಶ ಸೇರಿದಂತೆ ವಿದೇಶಗಳಿಗೂ ಇಲ್ಲಿನ ಕಲೆಯು ಬೆಳಕಾಗಿ ಕೊಪ್ಪಳದ ಕಲಾ ವೈಭವಕ್ಕೆ ಮತ್ತಷ್ಟು ಮೆರುಗು ತಂದು ಕೊಟ್ಟಿವೆ. ಆದರೆ ದುರ್ದೈವ ಎಂದರೆ ಇಲ್ಲಿನ ಕಲಾ ಆರಾಧಕರಿಗೆ ಅಚ್ಚುಕಟ್ಟಾದ ರಂಗ ಮಂದಿರ ಇನ್ನೂ ಲಭಿಸುತ್ತಿಲ್ಲ.

ಹಾಗೆಂದ ಮಾತ್ರಕ್ಕೆ ಕೊಪ್ಪಳಕ್ಕೆ ರಂಗ ಮಂದಿರ ಘೋಷಣೆಯಾಗಿಲ್ಲ ಎಂದಲ್ಲ, ಜಿಲ್ಲೆಗೆ 2011-12ನೇ ಸಾಲಿನಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಡಿ ಜಿಲ್ಲೆಗೆ ಜಿಲ್ಲಾ ರಂಗ ಮಂದಿರ ಘೋಷಿಸಲಾಗಿದೆ. ಘೋಷಿಸಿದ ವರ್ಷದಲ್ಲೇ ಈ ರಂಗ ಮಂದಿರಕ್ಕೆ 1 ಕೋಟಿ ರೂ.ಅನುದಾನವನ್ನೂ ಮೀಸಲಿಡಲಾಗಿತ್ತು. ಆದರೆ 2024-25ನೇ ಸಾಲು ಬಂದರೂ ಆ ರಂಗ ಮಂದಿರ ಮಂಜೂರಾಗಿದ್ದರೂ ಈ ವರೆಗೂ ಪೂರ್ಣಗೊಂಡಿಲ್ಲ ಎನ್ನುವುದೇ ಬೇಸರದ ಸಂಗತಿ.

ಏಷ್ಟೆಲ್ಲಾ ಅನುದಾನ ಕೊಟ್ಟಿದೆ ?: ಕೊಪ್ಪಳದಲ್ಲಿನ ಜಿಲ್ಲಾ ರಂಗ ಮಂದಿರಕ್ಕೆ ಒಟ್ಟು 10.50 ಕೋಟಿ ರೂ ಅನುದಾನವನ್ನು ಕಳೆದ 13 ವರ್ಷಗಳಿಂದ ಕೊಡಲಾಗಿದೆ. ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ 1 ಕೋಟಿ, 50 ಲಕ್ಷ ರೂ, ಮತ್ತೆ 50 ಲಕ್ಷ ರೂ, ನಂತರ ಮತ್ತೆ 1 ಕೋಟಿ ಹೀಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3 ಕೋಟಿ ಅನುದಾನ ನೀಡಿದೆ. ಇನ್ನು ಕೆಕೆಆರ್‌ ಡಿಬಿಯಿಂದ 1.50 ಕೋಟಿ, ಮತ್ತೆ 6 ಕೋಟಿ ರೂ. ಸೇರಿದಂತೆ ಒಟ್ಟು ಈ ವರೆಗೂ ಜಿಲ್ಲಾ ಮಂದಿರ ನಿರ್ಮಾಣಕ್ಕಾಗಿ 10.50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಕಟ್ಟಡವನ್ನು ನಿರ್ಮಿತಿ ಕೇಂದ್ರವು ನಿರ್ಮಿಸಿದ್ದರೆ, ಪ್ರಸ್ತುತ ಲೋಕೋಪಯೋಗಿ ಇಲಾಖೆ ಕಟ್ಟಡದ ಒಳ ವಿನ್ಯಾಸದ ನಿರ್ಮಾಣ ಕಾರ್ಯದ ಹೊಣೆ ಹೊತ್ತಿದೆ.

Advertisement

ರಂಗ ಮಂದಿರದಲ್ಲಿ ಏನೆಲ್ಲಾ ಬೇಕಿದೆ ?: ರಂಗ ಮಂದಿರ ನಿರ್ಮಾಣಕ್ಕೆ ಬರೊಬ್ಬರಿ 5,670 ಚ.ಅಡಿ ನಿವೇಶನ ನೀಡಲಾಗಿದೆ. ಕಟ್ಟಡ ಕಾಮಗಾರಿಯು ಪರಿಪೂರ್ಣವಾಗಿದೆ. ಆದರೆ ಒಳ ವಿನ್ಯಾಸ ಇನ್ನೂ ಏನೂ ನಡೆದಿಲ್ಲ. ಇನ್ನು ಧ್ವನಿ ಬೆಳಕು, ಒಳಾಂಗಣಾ ವಿನ್ಯಾಸ, ಪಾಲ್‌ ಸೀಲಿಂಗ್‌, ವೇದಿಕೆ ನಿರ್ಮಾಣ, ಆಸನಗಳ ವ್ಯವಸ್ಥೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯಬೇಕಿದೆ.

ಯಾರಿಗೂ ಆಸಕ್ತಿ ಇಲ್ಲವೆನಿಸುತ್ತೆ ?:
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಹಿಂದಿನ ಸಂಸದ ಸಂಗಣ್ಣ ಕರಡಿ ಸೇರಿ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಬರೋಬ್ಬರಿ ಮೂರು ಬಾರಿ ಉಸ್ತುವಾರಿ ಸಚಿವರಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ಶಿವರಾಜ ತಂಗಡಗಿ ಅವರೇ ನಿರ್ವಹಿಸುತ್ತಿದ್ದಾರೆ. ಆದರೆ ಇದರ ಬಗ್ಗೆ ಆಸಕ್ತಿ ಮಾತ್ರ ಹೆಚ್ಚಾಗಿ ಕಾಣುತ್ತಿಲ್ಲ ಅಂದೆನಿಸುತ್ತಿದೆ. ಕಾಟಾಚಾರಕ್ಕೆ ಮಂದಿರ ನಿರ್ಮಾಣ ಮಾಡಿಸಲಾಗುತ್ತಿದೆ ಎನ್ನುವಂತ ಆಪಾದನೆಯು ಸ್ಥಳೀಯರ ರಂಗಾಸಕ್ತರಿಂದ ಜೋರಾಗಿಯೇ ಕೇಳಿ ಬಂದಿವೆ. ಜಿಲ್ಲಾ ರಂಗ ಮಂದಿರ ಕಳೆದ 13 ವರ್ಷಗಳಿಂದ ಆಮೆಗತಿಗಿಂತಲೂ ನಿಧಾನಗತಿಯಲ್ಲಿ ನಡೆದ ವಿಚಾರ ಜಿಲ್ಲಾಧಿಕಾರಿಗಳಿಂದ ಹಿಡಿದು ಪ್ರತಿ ಹಂತದ ಮಾಹಿತಿಯೂ ಶಾಸಕ, ಸಂಸದ ಸೇರಿ ಸಚಿವರಿಗೂ ಗಮನಕ್ಕಿದೆ. ಆದರೆ ಇವರ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ.

ಕಲಾವಿದರು ಮಾತ್ರ ನಮಗೆ ರಂಗ ಮಂದಿರ ಲಭಿಸಲಿದೆ. ಕಲಾವಿದರಿಗೆ ಆಸರೆಯಾಗಲಿದೆ ಎನ್ನುವಂತ ಕನಸುಗಳು ಕಡಿಮೆಯಾಗಿಲ್ಲ. ಸರ್ಕಾರ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ ಅವರು ಇನ್ನಾದರೂ ಜಿಲ್ಲಾ ರಂಗ ಮಂದಿರ ನಿರ್ಮಾಣದ ಆಮೆಗತಿಯ ಸ್ಥಿತಿಯನ್ನು ಕಣ್ತೆರೆದು ನೋಡಬೇಕಿದೆ. ಇಲ್ಲಿನ ಅವಸ್ಥೆಯನ್ನೊಮ್ಮೆ ಅವಲೋಕಿಸಿ ಕಲಾವಿದರಿಗೆ ಬೇಗನೆ ಮಂದಿರ ಲಭಿಸುವಂತೆ ಮಾಡಬೇಕಿದೆ.

ಕೊಪ್ಪಳ ಜಿಲ್ಲಾ ರಂಗ ಮಂದಿರ ಕಟ್ಟಡ ನಿರ್ಮಾಣವಾಗಿದೆಯಷ್ಟೇ. ಕಳೆದ 13 ವರ್ಷಗಳಿಂದಲೂ ಬರಿ ಕಾಮಗಾರಿಯೇ
ನಡೆಯುತ್ತಿದೆ. ಇನ್ನು ಪೂರ್ಣಗೊಳ್ಳುತ್ತಿಲ್ಲ. ಜಿಲ್ಲೆಯ ಕಲಾವಿದರಿಗೆ ಆ ರಂಗ ಮಂದಿರ ಬಳಕೆಗೆ ಅನುವು ಮಾಡಿಕೊಡಲು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಿ. ಸರ್ಕಾರ ಕಲಾವಿದರ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರುವುದು ತರವಲ್ಲ.
*ಶರಣಪ್ಪ ವಡಗೇರಿ, ಹಿರಿಯ ಕಲಾವಿದರು,
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಜಿಲ್ಲಾ ರಂಗ ಮಂದಿರ ಕಾಮಗಾರಿ ನಡೆದಿದೆ. ಕಟ್ಟಡವೂ ನಿರ್ಮಾಣಗೊಂಡಿದೆ. ಈ ಹಿಂದೆ ಅದಕ್ಕೆ ಅನುದಾನ ಇರಲಿಲ್ಲ. ನಾವು ಕೆಕೆಆರ್‌ಡಿಬಿಯಿಂದ ಅನುದಾನ ಕೊಟ್ಟು ಕಾಮಗಾರಿ ಪೂರ್ಣಗೊಳಿಸುವ ಕೆಲಸ ಮಾಡಿದ್ದೇವೆ. ಮಂದಿರ ನಿರ್ಮಾಣದಲ್ಲಿ ನಿರ್ಲಕ್ಷé ಮಾಡಿಲ್ಲ. ಕೆಲವೇ ತಿಂಗಳಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿ ಸಿಎಂ ಅವರಿಂದಲೇ ಲೋಕಾರ್ಪಣೆಗೊಳಿಸಲಿದ್ದೇವೆ.
*ರಾಘವೇಂದ್ರ ಹಿಟ್ನಾಳ ಕೊಪ್ಪಳ ಶಾಸಕ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next