Advertisement
ಹಾಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಎರಡು ಬಾರಿ ಗೆದ್ದಿದ್ದು, ಹ್ಯಾಟ್ರಿಕ್ ಜಯದ ಕನಸು ಕಾಣುತ್ತಿ ದ್ದಾರೆ. ಕಾಂಗ್ರೆಸ್‌ನಲ್ಲಂತೂ ಶಾಸಕ ರಾಘವೇಂದ್ರ ಹಿಟ್ನಾಳ್ ಸೋದರ, 2019ರ ಪರಾಜಿತ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ಮಾಜಿ ಸಚಿವ ಅಮರೇಗೌಡ ಬಯ್ನಾಪುರ ರೇಸ್‌ನಲ್ಲಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ಟಿಕೆಟ್ ಕೊಟ್ಟರೂ ಅಚ್ಚರಿಪಡಬೇಕಿಲ್ಲ.
2004ರ ವರೆಗೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕೊಪ್ಪಳವನ್ನು ಬಿಜೆಪಿ ಸತತ ಮೂರು ಗೆದ್ದಿದೆ. 2014ರಿಂದ ಹಾಲಿ ಸಂಸದ ಸಂಗಣ್ಣ ಕರಡಿ ಎರಡು ಅವ ಧಿಗೆ ಗೆದ್ದಿದ್ದು, 2024ರ ಲೋಕಸಭೆಗೂ ನಾನು ಸಿದ್ಧ ಎನ್ನುವ ಸಂದೇಶ ಸಾರಿದ್ದಾರೆ. ಆದರೆ ಪಕ್ಷವು ಕಳೆದ ಬಾರಿಯೇ ಇವರಿಗೆ ಎರಡನೇ ಹಂತದಲ್ಲಿ ಟಿಕೆಟ್ ಘೋಷಿಸಿ ಇರುಸು ಮುರುಸು ಮಾಡಿತ್ತು. ಸಂಗಣ್ಣ ಅವರ ಹ್ಯಾಟ್ರಿಕ್ ಗೆಲುವಿಗೆ ಕಮಲ ಪಡೆ ಮಣೆ ಹಾಕುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಇವರಿಗೆ ಜತೆಗೆ ಕೊಪ್ಪಳದ ಖ್ಯಾತ ವೈದ್ಯರಾದ ಡಾ| ಬಸವರಾಜ ಕೆ.ಕೂಡ ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ. 2019ರಿಂದಲೂ ಸ್ಪರ್ಧಿಸಲು ಪ್ರಯತ್ನಿಸಿದ್ದು, ಈ ಬಾರಿ ಶತಾಯಗತಾಯ ಕಣಕ್ಕೆ ಇಳಿಯಲೇಬೇಕೆಂದು ಓಡಾಡುತ್ತಿದ್ದಾರೆ. ಸಂಗಣ್ಣ ಅವರಿಗೆ ಪಕ್ಷದೊಳಗೆ ವಿರೋ ಧವೂ ಇದೆ. ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಪಕ್ಷದ ಸಭೆಯಲ್ಲಿ ಸ್ಥಳೀಯ ನಾಯಕರು ಬಹಿರಂಗವಾಗಿಯೇ ವಿರೋಧಿಸಿದ್ದರು. ವಯಸ್ಸಿನ ಕಾರಣಕ್ಕಾಗಿ ಇವರಿಗೆ ಟಿಕೆಟ್ ನೀಡಬಾರದೆಂಬ ವಾದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಗಣ್ಣ, ಪ್ರಧಾನಿ ಮೋದಿಗೆ ವಯಸ್ಸಾದರೂ ಟಿಕೆಟ್ ನೀಡುವುದಾದರೆ ನನಗೇಕೆ ಇಲ್ಲ ಎಂದು ಸಡ್ಡು ಹೊಡೆದಿದ್ದರು.
Related Articles
Advertisement
ಇನ್ನು ಕೇಂದ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಾಗಿರುವ ಜೆಡಿಎಸ್ ರಾಜ್ಯದಲ್ಲಿ ಆಯ್ದ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಸೀಟು ಕೇಳುವ ಲೆಕ್ಕಾಚಾರದಲ್ಲಿದೆ. ಈ ಹಿಂದೆ ಬಿಜೆಪಿ ಯಲ್ಲೇ ಇದ್ದ ಸಿ.ವಿ.ಚಂದ್ರಶೇಖರ ವಿಧಾನಸಭೆಗೆ ಬಿಜೆಪಿ ಟಿಕೆಟ್ ಸಿಗದೆ ಜೆಡಿಎಸ್ ಸೇರಿದ್ದರು. ಈಗ ಮತ್ತೆ ಮೈತ್ರಿಯಾಟದ ಲೆಕ್ಕಾಚಾರದಲ್ಲಿ ಸಂಸತ್ ಚುನಾವಣೆಗೆ ನಾನೂ ಸ್ಪರ್ಧಿಸಲು ಸಿದ್ಧ ಎನ್ನುವ ಸಂದೇಶ ಸಾರಿದ್ದಾರೆ. ಹೀಗಾಗಿ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟು ಕೊಡುತ್ತದಾ ಅಥವಾ ತಮ್ಮ ಅಭ್ಯರ್ಥಿಗೇ ಮಣೆ ಹಾಕುತ್ತದಾ ಎನ್ನುವುದು ಕುತೂಹಲದ ಸಂಗತಿ.
ಕಾಂಗ್ರೆಸ್‌ನಲ್ಲಿ ಯಾರ್ಯಾರು?ಕಾಂಗ್ರೆಸ್ ಪಾಳೆಯದಲ್ಲಂತೂ ಆಕಾಂಕ್ಷಿತರ ಪಟ್ಟಿ ದೊಡ್ಡದಿದೆ. ಕಳೆದ ಅವಧಿಗೆ ರಾಜಶೇಖರ ಹಿಟ್ನಾಳ್ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದು, ನನಗೆ ಈ ಬಾರಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಮಾಜಿ ಸಚಿವ ಅಮರೇಗೌಡ ಬಯ್ನಾಪುರ ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ. ಅಲ್ಲದೆ ಪಕ್ಷದ ಸಂಘಟನ ಕಾರ್ಯದಲ್ಲಿ ತೊಡಗಿರುವ ಶಿವರಾಮೇ ಗೌಡ ಕೂಡ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದಾರೆ. ಜತೆಗೆ ಯುವ ಕಾಂಗ್ರೆಸ್ ಪಡೆ ಕಟ್ಟಿದ್ದ ಬಸನಗೌಡ ಬಾದರ್ಲಿ ಈ ಬಾರಿ ಟಿಕೆಟ್‌ಗೆ ಬಿಗಿಪಟ್ಟು ಹಿಡಿದಿದ್ದಾರೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರಭಾವಿ ಎನಿಸಿರುವ ಬಸವರಾಜ ರಾಯರಡ್ಡಿ ಅವರನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ. ಅನುಭವಿ, ಭಾಷಾ ಜ್ಞಾನ ಇದೆ. 1996ರಲ್ಲಿ ನಡೆದ ಚುನಾವಣೆಯಲ್ಲಿ ರಾಯರಡ್ಡಿ ಗೆದ್ದಿರುವ ಇತಿಹಾಸವಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯವೇ ಹೆಚ್ಚಿದೆ. ಇದಲ್ಲದೆ ಕುರುಬ ಸಮುದಾಯ, ಎಸ್‌ಸಿ, ಎಸ್‌ಟಿ ಸಹಿತ ಅಲ್ಪಸಂಖ್ಯಾಕ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.