ಕೊಪ್ಪಳ: ಸ್ವಾತಂತ್ಯೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರದಿಂದ ಪ್ರಾಯೋಜನೆಗೊಂಡ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಿಂದ ವಿಡಿಯೋ ಸಂವಾದ ಕಾರ್ಯಕ್ರಮ ನಡೆಸಿದರು.
ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಈ ವಿಡಿಯೋ ಸಂವಾದದ ನೇರ ಪ್ರಸಾರದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಉಪ ಕಾರ್ಯದರ್ಶಿ ಶರಣಬಸವರಾಜ, ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಡಿಯೋ ಸಂವಾದದಲ್ಲಿ ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಬಡವರ ಕಲ್ಯಾಣಕ್ಕಾಗಿ ನಾವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಯೋಜನೆಗಳಡಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಸರ್ಕಾರದ ಅನುದಾನ ಸೋರಿಕೆ ತಡೆಗಟ್ಟಿದ್ದೇವೆ. 8 ವರ್ಷಗಳ ನಮ್ಮ ಆಡಳಿತದಲ್ಲಿ ನಾನು ಪ್ರಧಾನ ಸೇವಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ದೇಶದ 130 ಕೋಟಿ ಜನರ ಪರಿವಾರದ ಸದಸ್ಯನಾಗಿದ್ದೇನೆ.
ನಾವೆಲ್ಲರೂ ಜೊತೆಗೂಡಿ ಭಾರತವನ್ನು ಇಡೀ ವಿಶ್ವದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸೋಣ. ಇಂದು ದೇಶದ 10 ಕೋಟಿಗೂ ಹೆಚ್ಚಿನ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದೇವೆ. ಇಡೀ ರಾಷ್ಟ್ರದ ಜನ ಈ ಗರೀಬ್ ಕಲ್ಯಾಣ್ ಸಮ್ಮೇಳನದಲ್ಲಿ ಭಾಗವಹಿಸಿ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಇದಕ್ಕೂ ಮುನ್ನ ದೇಶದ ವಿವಿಧ ರಾಜ್ಯಗಳಿಂದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿಗಳು ವರ್ಚುವಲ್ ಮೂಲಕ ಸಂವಾದ ನಡೆಸಿ, ಅವರ ಅಭಿಪ್ರಾಯ ಆಲಿಸಿದರು. ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಸಂತೋಷಿ ಎಂಬ ಮಹಿಳಾ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಗಳು, ಸಂತೋಷಿ ಅವರು, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಿಂದಾದ ಅನುಕೂಲದ ಬಗ್ಗೆ ವಿವರಣೆ ಪಡೆದರು.
ಬಳಿಕ ಮಹಿಳೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ನೀವು ಯೋಜನೆಯ ಬಗ್ಗೆ ಮಾತನಾಡಿದ ರೀತಿ ನೋಡಿ ನನಗೆ ಅತೀವ ಸಂತೋಷವಾಯಿತು. ನಿಮ್ಮ ಗ್ರಾಮದಲ್ಲಿ ಉತ್ತಮ ನಾಯಕಿಯಾಗುವ ಎಲ್ಲ ಲಕ್ಷಣ, ಅರ್ಹತೆ ನಿಮ್ಮಲ್ಲಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ವಿಡಿಯೋ ಸಂವಾದಲ್ಲಿ ದೇಶದ ವಿವಿಧ ರಾಜ್ಯಗಳ ಫಲಾನುಭವಿಗಳಾದ ಲಡಖ್-ತಶಿ ಲೆಹ, ಬಿಹಾರ್ ಲಲಿತಾ ದೇವಿ, ವೆಸ್ಟ್ ತ್ರಿಪುರ-ಪಂಕಜ ಸಹನಿ, ಕರ್ನಾಟಕದ ಕಲಬುರಗಿ-ಸಂತೋಷಿ, ಪಿಎಂ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿ ಧಿ, ಉಜ್ವಲ ಯೋಜನೆ, ಪೋಷಣ ಅಭಿಯಾನ, ಮಾತೃ ವಂದನಾ ಯೋಜನೆ, ಸ್ವತ್ಛ ಭಾರತ್ ಮಿಷನ್, ಜಲ ಜೀವನ ಮಿಷನ್, ಒನ್ ನೇಷನ್ ಒನ್ ರೇಷನ್ ಯೋಜನೆ, ಪ್ರದಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಆಯುಷ್ಮಾನ್ ಭಾರತ್ ಕಾರ್ಡ್, ಪ್ರಧಾನಮಂತ್ರಿ ಮುದ್ರಾ ಯೋಜನೆ ಹೀಗೆ ಹಲವು ಯೋಜನೆಗಳನ್ನು ಪಡೆದ ದೇಶದ ಫಲಾನುಭವಿಗಳ ಜತೆಗೆ
ಸಂವಾದ ನಡೆಸಿದರು.