Advertisement

ಅಂತೂ ಉಳಿಯಿತು ಕೊಪ್ಪಳ ಮೆಡಿಕಲ್ ಕಾಲೇಜು!

10:58 AM May 29, 2019 | Suhan S |

ಕೊಪ್ಪಳ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೊಪಳ ಮೆಡಿಕಲ್ ಕಾಲೇಜಿನಲ್ಲಿ ಸೌಕರ್ಯಗಳ ಕೊರತೆ ಎದುರಿಸಿ ಮುಚ್ಚಿ ಹೋಗುವುದೇನೋ ಎನ್ನುವ ಆತಂಕದಲ್ಲಿದ್ದ ಪಾಲಕರಿಗೆ ಎಂಸಿಐ ನಿರಾತಂಕ ಮೂಡಿಸಿದೆ. 2019-20ನೇ ಸಾಲಿಗೆ 150 ಸೀಟುಗಳ ಪ್ರವೇಶಾತಿಗೆ ಗ್ರೀನ್‌ ಸಿಗ್ನಲ್ ಕೊಟ್ಟಿದೆ. ಕಿಮ್ಸ್‌ ಶೇ.93ರಷ್ಟು ಕೊರತೆ ನೀಗಿಸಿದೆ ಎಂದು ನಿರ್ದೇಶಕ ಡಾ| ಭಂಟ್ ಹೇಳಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿಗೆ ಕೊಪ್ಪಳ ಮೆಡಿಕಲ್ ಕಾಲೇಜು ಹಲವು ಮೂಲ ಸೌಕರ್ಯಗಳನ್ನು ಎದುತಿಸುತ್ತಿತ್ತು. ಎಂಸಿಐ ಸಹಿತ ಕಾಲೇಜಿಗೆ ಭೇಟಿ ನೀಡಿ ಇಲ್ಲಿನ ಬೋಧನಾ ಸಿಬ್ಬಂದಿ ಸೇರಿ ಇತರೆ ಸಮಸ್ಯೆಗಳ ಕುರಿತು 22 ಅಂಶಗಳನ್ನು ಪಟ್ಟಿ ಮಾಡಿ ಬಹುತೇಕ ಮುಚ್ಚುವ ಹಂತಕ್ಕೆ ಬಂದು ತಲುಪಿತ್ತು. ಹಲವು ಪ್ರಯತ್ನಗಳ ಬಳಿಕ ನಾವು ಕಿಮ್ಸ್‌ನಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡುವ ಜೊತೆಗೆ ಎಂಸಿಐ ಸಿದ್ದಪಡಿಸಿದ್ದ 22 ನ್ಯೂನತೆಗಳ ಅಂಶಗಳ ಬಗ್ಗೆ ಗಮನ ನೀಡಿದ ಫಲವಾಗಿ ಶೇ.93ರಷ್ಟು ಸೌಲಭ್ಯಗಳ ಕೊರತೆ ನೀಗಿಸಿದ್ದೇವೆ ಎಂದರು.

ಈ ಹಿಂದೆ ಸರ್ಕಾರ ಘೋಷಣೆ ಮಾಡಿದ್ದ 6 ಮೆಡಿಕಲ್ ಕಾಲೇಜುಗಳಲ್ಲಿ ಕಲಬುರಗಿ ಹಾಗೂ ಕೊಪ್ಪಳ ಎರಡೇ ಮೆಡಿಕಲ್ ಕಾಲೇಜಿಗೆ ಮಾತ್ರ ಎಂಸಿಐ ಪ್ರಸಕ್ತ ವರ್ಷದಲ್ಲಿ 150 ಸೀಟು ಪ್ರವೇಶಾತಿಗೆ ಅಧಿಕೃತ ಗ್ರೀನ್‌ ಸಿಗ್ನಲ್ ನೀಡಿದೆ. ಉಳಿದ ನಾಲ್ಕು ಕಾಲೇಜುಗಳಿಗೆ ಭರವಸೆ ನೀಡಿಲ್ಲ. ಈ ಹಿಂದೆ ಏನೆಲ್ಲ ಬೆಳವಣಿಗೆಗಳು ನಡೆದಿರಬಹುದು. ನಾವು ಬಂದ ಬಳಿಕ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿದ್ದೇವೆ ಎಂದರು.

ಕಾಲೇಜಿನಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ. ಅವೆಲ್ಲವುಗಳನ್ನು ನಾವು ಬಗೆ ಹರಿಸಲಿದ್ದು, ಬೋಧಕ ಸಿಬ್ಬಂದಿಗೆ 2-3 ಬಾರಿ ಸಂದರ್ಶನ ನಡೆಸಿ ನೇಮಕ ಮಾಡಿಕೊಂಡಿದ್ದೇವೆ. ಜೊತೆಗೆ ವಿದ್ಯಾರ್ಥಿಗಳ ಊಟದ ವ್ಯವಸ್ಥೆ, ಕೊಠಡಿ, ಕುಡಿಯುವ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ನಿವಾರಣೆ ಮಾಡಿದ್ದೇವೆ. ತುಂಗಭದ್ರಾ ಡ್ಯಾಂನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಕಾಲೇಜು ಆವರಣದಲ್ಲೇ ಏಳು ಬೋರ್‌ವೆಲ್ ಕೊರೆಯಿಸಿದ್ದು, ಅಲ್ಪ ಪ್ರಮಾಣದ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಮೆಡಿಕಲ್ ಕಾಲೇಜು ಜಿಲ್ಲಾಸ್ಪತ್ರೆಯ ಸಮನ್ವಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸದ್ಯ 700 ಹಾಸಿಗೆಯುಳ್ಳ ಆಸ್ಪತ್ರೆ ನಮಗೆ ಅವಶ್ಯಕತೆಯಿದ್ದು, ಎಂಸಿಐ ನಿಯಮದ ಪ್ರಕಾರ 500 ಬೆಡ್‌ ಇರುವಷ್ಟು ತೋರಿಸಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಕಿಮ್ಸ್‌ 2 ಸಾವಿರ ಬೆಡ್‌ ಒಳಗೊಂಡ ಆಸ್ಪತ್ರೆಯಾಗಲಿದೆ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ| ಎಸ್‌.ಬಿ. ದಾನರಡ್ಡಿ ಸೇರಿದಂತೆ ಕಿಮ್ಸ್‌ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next